ADVERTISEMENT

2 ಇನ್ 1 ನಾಯಕಿಯರು...

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ರಮ್ಯಾ ಅಭಿಮಾನಿಗಳು ಫೇಸ್‌ಬುಕ್‌ನಲ್ಲಿ ತುಂಬಾ ನೊಂದುಕೊಂಡು ಮೆಸೇಜು ಮಾಡಿದ್ದರು. `ಜಾನಿ ಮೇರಾ ನಾಮ್~ ಚಿತ್ರದಲ್ಲಿ ಅವರು ಐಟಂ ಡಾನ್ಸ್ ಮಾಡಿರುವುದಕ್ಕೆ ಅವರಿಗೆಲ್ಲಾ ಬೇಸರ. ಅಷ್ಟೊಂದು ಅಭಿಮಾನಿಗಳು ತಮ್ಮ ಬಗ್ಗೆ ಕಾಳಜಿ ತೋರಿರುವುದನ್ನು ಕಂಡು ಕೃತಾರ್ಥರಾದ ರಮ್ಯಾ, `ಅದು ಐಟಂ ಸಾಂಗ್ ಅಲ್ಲ, ಗ್ಲಾಮರ್ ಸಾಂಗ್~ ಎಂಬ ಸ್ಪಷ್ಟನೆ ಕೊಟ್ಟು ಕಣ್ಣೊರೆಸಿದ್ದಾರೆ.

ಸಿನಿಮಾ ಹಾಗೂ ಗ್ಲಾಮರ್ ಹಾಡುಗಳಿಗೆ ಒಂದು ಪರಂಪರೆಯೇ ಇದೆ. ಜಯಂತಿ ಈಜುಡುಗೆ ತೊಟ್ಟು ನೀರಿಗಿಳಿದಿದ್ದನ್ನು ಕಂಡು ಬ್ಲಾಕ್ ಅಂಡ್ ವೈಟ್ ಕಾಲದಲ್ಲೇ ಅನೇಕ ರಸಿಕರು ಬೆವರಿದ್ದರು. ಜೀನತ್ ಅಮಾನ್ ಮುಖವನ್ನು ಮಾತ್ರ ಅಚ್ಚುಕಟ್ಟಾಗಿ ಮುಚ್ಚಿಕೊಂಡಿದ್ದ `ಸತ್ಯಂ ಶಿವಂ ಸುಂದರಂ~ ಹಾಡು ಕಂಡು ಈಗಿನ ಪಡ್ಡೆಗಳೂ ಬೆರಗಾಗುತ್ತಾರೆ. `ಮಿಸ್ಟರ್ ಇಂಡಿಯಾ~ ಹಿಂದಿ ಚಿತ್ರದ ಶ್ರೀದೇವಿ ಮಳೆಹಾಡು ವಾಹಿನಿಗಳಲ್ಲಿ ಇಂದಿಗೂ ಮರುಪ್ರಸಾರವಾಗುತ್ತದೆ.

ಕನ್ನಡ ಚಿತ್ರಗಳ ನಟಿಯರು ಕೂಡ ಆಗೀಗ ಇಂಥ ಅನುಕೂಲಸಿಂಧು ಗ್ಲಾಮರ್ ಗೀತೆಗಳಿಗೆ ಒಪ್ಪಿಗೆ ಸೂಚಿಸಿರುವ ಉದಾಹರಣೆಗಳಿವೆ. ಇದೇ ರಮ್ಯಾ ತಮಿಳಿನ ಹಾಡೊಂದರಲ್ಲಿ ಕಡಲತಟದ ಮರಳಿನ ಮೇಲೆ ಉರುಳಾಡಿದ ದೃಶ್ಯಗಳಿವೆ. `ಜೂಲಿ~ ಚಿತ್ರದಲ್ಲಿ ಡಿನೋ ಮೊರಿಯಾ ಅವರಿಗೆ ತಮ್ಮ ತುಟಿಬಟ್ಟಲನ್ನು ಅರ್ಪಿಸಿದ ನಿದರ್ಶನವಿದೆ. ರಕ್ಷಿತಾ ಫಾರ್ಮ್‌ನಲ್ಲಿದ್ದ ಕಾಲದಲ್ಲಿ ರಮ್ಯಾ ಈ ರೀತಿಯ ನೃತ್ಯವನ್ನು ಟೀಕಿಸಿದ್ದವರು. `ನಾನು ಹೇಗೆಹೇಗೋ ಬಟ್ಟೆ ಹಾಕಿಕೊಳ್ಳುವಂಥವಳಲ್ಲ~ ಎಂದು ಪರೋಕ್ಷವಾಗಿ ಅವರು ರಕ್ಷಿತಾ ಧೋರಣೆಯನ್ನು ಚುಚ್ಚಿದ್ದರು.

ಗ್ಲಾಮರ್ ಗೀತೆಗಳ ಪರಂಪರೆಯಲ್ಲಿ ಎದ್ದುಕಾಣುವ ಹೆಸರು ರವಿಚಂದ್ರನ್. ಮೊದಲಿಗೆ ಜೂಲಿ, ಖುಷ್ಬೂ ಇಬ್ಬರನ್ನೂ ಈ ಪರಂಪರೆಯ ಪಟ್ಟಿಗೆ ಸೇರಿಸಿದ ಅವರು ಆಮೇಲೆ ನೃತ್ಯ ಲಾಲಿತ್ಯಕ್ಕೆ ಹೆಸರಾದ ಭಾನುಪ್ರಿಯಾ ಅವರನ್ನೂ ಕರೆತಂದು ಎತ್ತಿನಗಾಡಿಗೆ ಕೈಕಟ್ಟಿ ನಿಲ್ಲಿಸಿ, ಮಳೆಯಲ್ಲಿ ತೋಯಿಸಿದರು. ರವಿ ಕೊಳಲ ನಾದಕ್ಕೆ ಭಾನುಪ್ರಿಯಾ ವೈಯಾರ. `ಡಿಶುಂ~ ಎಂಬ ಇನ್ನೊಂದು ಗೀತೆ ಚಿತ್ರದ ಗ್ಲಾಮರ್‌ಗೆ ಕೊಸರು.

ಇದಕ್ಕೂ ಮೊದಲೇ `ಸ್ವಾಭಿಮಾನ~ ಚಿತ್ರದಲ್ಲಿ ಮಹಾಲಕ್ಷ್ಮಿಯವರಿಗೆ ಮೊದಲು ಜರತಾರಿ ಸೀರೆ ಕೊಡಿಸಿ, ಆಮೇಲೆ ಸೀರೆ ಬಿಚ್ಚುವ ಗೀತೆಯಲ್ಲಿ ಭಾಗಿಯಾದವರು ರವಿಚಂದ್ರನ್. `ನೀಲಕಂಠ~ ಚಿತ್ರದಲ್ಲಿ ನಮಿತಾ ಸೊಂಟದ ಸುತ್ತ ಅವರು ಸುತ್ತುತ್ತಾರೆ ಎಂಬ ಸಾಲೊಂದು ಚಿತ್ರವಿಮರ್ಶೆಯಲ್ಲಿ ಪ್ರಕಟವಾಯಿತು.

`ಅದು ನನಗಲ್ಲ. ನೋಡುವ ನಿಮ್ಮಂಥವರಿಗೆ ಖಷಿಯಾಗಲೆಂದಷ್ಟೇ ನಾನು ಸೊಂಟ ಸುತ್ತುವುದು~ ಎಂದು ರವಿಚಂದ್ರನ್ ಸುದ್ದಿಮಿತ್ರರ ಎದುರೇ ತಮಾಷೆಯಾಗಿ ಮಾತನಾಡಿದ್ದರು. ಗ್ಲಾಮರ್ ಇಲ್ಲದಿದ್ದರೆ ಯಾರು ಸಿನಿಮಾ ನೋಡುತ್ತಾರೆ ಎಂಬುದು ಅವರು ಮೊದಲಿನಿಂದಲೂ ಎತ್ತುತ್ತಲೇ ಬಂದಿರುವ ಪ್ರಶ್ನೆ.

ಬದುಕಿನ ಭಾಗವೇ ಆಗಿರುವ ಸೆಕ್ಸ್‌ಗೆ ಸಿನಿಮೀಯ ಆದ್ಯತೆ ನೀಡಿದ ಇನ್ನೊಬ್ಬ ಚಿತ್ರಕರ್ಮಿ ಕಾಶೀನಾಥ್. ಅವರ ಗ್ಲಾಮರ್ ಸಾಣೆಗೆ ಒಡ್ಡಿಕೊಂಡ ಎರಡು ಡಜನ್ ಹೆಣ್ಣುಮಕ್ಕಳು ಸಿಕ್ಕಿಯಾರು. ಉಪೇಂದ್ರ ಸಿನಿಮಾ ಪ್ರವೇಶವಾದದ್ದೂ `ಡಗಾರ್~ ಎಂಬ ಪದಪ್ರಯೋಗದೊಂದಿಗೆ. ಗ್ಲಾಮರ್ ಹಾಗೂ ಅಶ್ಲೀಲತೆಯ ನಡುವಿನ ಗೆರೆ ತೆಳುವಾಗುತ್ತಾ ಬಂದ ಕಾಲವದು. ಉಪೇಂದ್ರ ಅವರ ಈ ಉಮೇದನ್ನು ತೆರೆಮೇಲೆ ದಾಟಿಸಿದವರು ಅಂಜಲಿ ಹಾಗೂ ಜಗ್ಗೇಶ್.

`ಸ್ವಾತಿ~ ಚಿತ್ರದಲ್ಲಿ ಶಶಿಕುಮಾರ್ ಜೊತೆಗಿನ ಅಧರಚುಂಬನದ ಕಾರಣಕ್ಕೇ ಸುಧಾರಾಣಿ ಸುದ್ದಿಯಾಗಿದ್ದರು. `ರಣರಂಗ~ ಚಿತ್ರದ ಗ್ಲಾಮರ್ ಗೀತೆಯಲ್ಲಿ ಬಳುಕಿದ್ದ ತಾರಾ, `ಆಪರೇಷನ್ ಅಂತ~ದಲ್ಲಿ ಐಟಂ ನೃತ್ಯಕ್ಕೂ ಸೈ ಎಂದಿದ್ದರು.

ಈಜುಡುಗೆಯ ಗ್ಲಾಮರ್‌ಗೆ ಮಾಲಾಶ್ರೀ ತೆರೆದುಕೊಂಡರೆ, ಅವರ ತಂಗಿ ಶುಭಶ್ರೀ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದರು. ಅಭಿಜಿತ್ ಜೊತೆಯ ಮಳೆಹಾಡಿನ ಹುಡುಗಿಯಾಗಿ ಸುದ್ದಿಯಾದ ಶ್ರುತಿ ಕೂಡ `ಅಳಿಮಯ್ಯ~ ಚಿತ್ರದಲ್ಲಿ ಅರ್ಜುನ್ ಸರ್ಜಾ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದವರೇ.

ಕ್ಯಾಬರೇ ನೃತ್ಯವೆಂಬುದನ್ನೇ ಸಿನಿಮಾದಿಂದ ಅಳಿಸಿ, ನಾಯಕಿಯರಿಗೇ ಅಂಥ ಪೋಷಾಕು ತೊಡಿಸಿದ ರವಿಚಂದ್ರನ್ ಮುಂದೆ ಅನೇಕರಿಗೆ ಸ್ಫೂರ್ತಿಯಾದರು. ಈಗ ಕ್ಯಾಬರೇ ಪ್ರಕಾರದಲ್ಲಿ ಐಟಂ ಗೀತೆ ಪ್ರತಿಷ್ಠಾಪಿಸಿದೆ. ಡಿಸ್ಕೋ ಶಾಂತಿ, ಸಿಲ್ಕ್‌ಸ್ಮಿತಾ ಜಾಗಕ್ಕೆ ರಚನಾ ಮೌರ್ಯ, ಮುಮೈತ್ ಖಾನ್ ಬಂದಿದ್ದಾರೆ. ಅನುರಾಧಾ ಪುತ್ರಿ ಅಭಿನಯಶ್ರೀ ಕೂಡ ಐಟಂ ಹುಡುಗಿಯೇ ಹೌದು.
 
ಇವರ ಏಕತಾನತೆಯನ್ನು ಮುರಿಯುವ ಇನ್ನೊಂದು ಪದ್ಧತಿಯೇ `ಗ್ಲಾಮರ್ ಸಾಂಗ್~. `ಗಂಡ ಹೆಂಡತಿ~ಯಲ್ಲಿ ಸಂಜನಾ ಮೈಮೇಲೆ ಐಸ್‌ಕ್ರೀಮ್ ಸುರಿದುಕೊಂಡದ್ದು, `ಇಂತಿ ನಿನ್ನ ಪ್ರೀತಿಯ~ ಚಿತ್ರದಲ್ಲಿ ಭಾವನಾ-ಕಿಟ್ಟಿ `ಮಧುವನ ಕರೆದರೆ~ ಎಂದು ನೀರಾಟವಾಡಿದ್ದು, `ಶಂಕರ್ ಐಪಿಎಸ್~ ಚಿತ್ರದಲ್ಲಿ ವಿಜಯ್ ಜೊತೆ ಕಡಲತಟದಲ್ಲಿ ರಾಗಿಣಿ ಒದ್ದಾಡಿದ್ದು, `ಶ್ರೀಹರಿಕಥೆ~ಯಲ್ಲಿ ಪೂಜಾ ಗಾಂಧಿ, ಶ್ರೀಮುರಳಿ ಜೊತೆಯಲ್ಲಿ ಹಸಿಹಸಿ ಗೀತೆಯಲ್ಲಿ ಭಾಗಿಯಾಗಿದ್ದು ಇವೆಲ್ಲವೂ ಈ ನಮೂನೆಗೆ ಸೇರಿದವು. `90~ ಚಿತ್ರದಲ್ಲಿ ಸಾಧು ಕೋಕಿಲಾ ನಾಯಕಿ ಪ್ರಜ್ಞಾಗೇ ಗ್ಲಾಮರ್ ಗೀತೆಯ ಒಡೆತನ ದಯಪಾಲಿಸಿದ್ದಾರೆ.

`ಸ್ನೇಹಾನಾ ಪ್ರೀತೀನಾ~ ಚಿತ್ರದ `ಸಕ್ಕು ಸಕ್ಕು ಸಕ್ಕು~ ಹಾಡಿನ ಯಶಸ್ಸು ಕಂಡು ಜೆನ್ನಿಫರ್ ಕೊತ್ವಾಲ್, `ಇದು ಐಟಂ ಗೀತೆಯಲ್ಲ; ಗ್ಲಾಮರ್ ಗೀತೆ. ಅದಕ್ಕೇ ಇಷ್ಟು ಸಕ್ಸಸ್ ಆಗಿದ್ದು~ ಎಂದೇ ಪ್ರತಿಕ್ರಿಯಿಸಿದ್ದರು.

ಈಗ `ಜಾನಿ ಮೇರಾ ನಾಮ್~ ಚಿತ್ರ ನೋಡಲು ಅನೇಕರಿಗೆ ರಮ್ಯಾ ಮೈಮಾಟದ ಗೀತೆಯೇ ಕುಮ್ಮಕ್ಕು ಕೊಟ್ಟಿರುವುದು ಸತ್ಯ. ಮತ್ತೆ ಮಳೆ ಹುಯ್ಯುತಿದೆ, `ಗ್ಲಾಮರ್ ಹಾಡು~ ಮೂಡುತಿದೆ! ಚಳಿಯು ಹೊಸ್ತಿಲಲ್ಲಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT