ADVERTISEMENT

ಸಂದರ್ಶನ ‘ಮದಗಜ’ದಲ್ಲಿ ಕೃಷಿಕಳಾದ ಆಶಿಕಾ

ಕೆ.ಎಂ.ಸಂತೋಷಕುಮಾರ್
Published 24 ಸೆಪ್ಟೆಂಬರ್ 2020, 15:50 IST
Last Updated 24 ಸೆಪ್ಟೆಂಬರ್ 2020, 15:50 IST
ಆಶಿಕಾ ರಂಗನಾಥ್‌
ಆಶಿಕಾ ರಂಗನಾಥ್‌   

ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯಲ್ಲಿರುವ ನಟಿಯರಲ್ಲಿ ‘ಚುಟು ಚುಟು’ ಹಾಡಿನ ಖ್ಯಾತಿಯ ಬೆಡಗಿ ಆಶಿಕಾ ರಂಗನಾಥ್‌ ಕೂಡ ಒಬ್ಬರು. ಅವರ ಕೈಯಲ್ಲಿ ಈಗ ನಾಲ್ಕೈದು ದೊಡ್ಡಸಿನಿಮಾಗಳು ಇವೆ. ಲಾಕ್‌ಡೌನ್‌ ತೆರವಾದ ಮೇಲೆ ಶೂಟಿಂಗ್‌ಗೆ ಹೋಗುತ್ತಿದ್ದಾರೆ. ಎಸ್‌. ಮಹೇಶ್‌ ಕುಮಾರ್‌ ನಿರ್ದೇಶನ ಮತ್ತು ಶ್ರೀಮುರಳಿ ನಾಯಕನಾಗಿರುವ ‘ಮದಗಜ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣಮೈಸೂರಿನಲ್ಲಿ ಭರದಿಂದ ನಡೆಯುತ್ತಿದೆ. ಚಿತ್ರೀಕರಣದ ವಿರಾಮದ ವೇಳೆ ಆಶಿಕಾ ರಂಗನಾಥ್‌ ‘ಪ್ರಜಾಪ್ಲಸ್‌’ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಸಿನಿ ಪಯಣದ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಆರು ತಿಂಗಳ ನಂತರ ಮತ್ತೆ ಬಣ್ಣ ಹಚ್ಚುವಾಗ ಏನನಿಸಿತು?

ಆರು ತಿಂಗಳು ಸುಮ್ಮನೆ ಮನೆಯಲ್ಲಿ ಕುಳಿತಾಗ ಸಮಯ ಹೇಗೆ ಕಳೆಯುವುದು ಎನ್ನುವಂತಾಗಿತ್ತು.ಉಳಿದಿರುವ ಈ ಅವಧಿಯಲ್ಲಿ ಬಿಡುವಿಲ್ಲದಂತೆ ನಿರಂತರ ಕೆಲಸ ಮಾಡಿ, ತುಂಬಿಸಿಕೊಳ್ಳಬೇಕಿದೆ. ಮೊದಲ ದಿನ ಶೂಟಿಂಗ್‌ ಸೆಟ್‌ಗೆ ಹೋದಾಗ ಅಭಿನಯ ಮರೆತೇ ಹೋಗಿದೆ ಎನಿಸಿತು. ಇದೇ ಅನುಭವಶ್ರೀಮುರಳಿ ಸರ್‌ ಮತ್ತು ಚಿಕ್ಕಣ್ಣ ಅವರಿಗೂ ಆಯಿತಂತೆ. ಈಗ ಫೋನ್‌ ಕೂಡ ನೋಡಲು ಸಮಯವಿಲ್ಲದಷ್ಟು ಬ್ಯುಸಿಯಾಗಿದ್ದೇವೆ.

ADVERTISEMENT

ಮದಗಜದಲ್ಲಿ ನಿಮ್ಮ ಪಾತ್ರದ ಬಗ್ಗೆಹೇಳಿ...

ಫಸ್ಟ್‌ ಲುಕ್‌ ನೋಡಿದ ತಕ್ಷಣಹಳ್ಳಿ ಹುಡುಗಿಯ ಪಾತ್ರವೆಂದು ಗೊತ್ತಾಗುವಂತಿದೆ. ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಸಾಮಾನ್ಯ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೆ. ಈ ಚಿತ್ರದಲ್ಲೂ ಹಳ್ಳಿ ಹುಡುಗಿಯ ಪಾತ್ರವೇ ಆಗಿದ್ದರೂ, ತುಂಬಾ ಗಟ್ಟಿಗಿತ್ತಿ ಮತ್ತು ಸಾಹಸಗಾರ್ತಿ ಕೃಷಿಕಹೆಣ್ಮಗಳು.ಗದ್ದೆಯಲ್ಲಿ ಭತ್ತದ ನಾಟಿ ಮಾಡುವೆ, ಟ್ರ್ಯಾಕ್ಟರ್‌ ಚಲಾಯಿಸುವೆ.ಅಭಿನಯಕ್ಕೆ ತುಂಬಾ ಅವಕಾಶಗಳಿರುವ ಪಾತ್ರವಿದು.

ಈಗ ನಟಿಸಿರುವ ಚಿತ್ರಗಳು ಯಾವ ಹಂತದಲ್ಲಿವೆ?

‘ಕೋಟಿಗೊಬ್ಬ 3’ ಶೂಟಿಂಗ್‌ ಮುಗಿದಿದ್ದು, ಬಿಡುಗಡೆಯ ಹಂತದಲ್ಲಿದೆ. ‘ಅವತಾರಪುರುಷ’ ಚಿತ್ರದ ಒಂದು ಹಾಡು ಚಿತ್ರೀಕರಣಕ್ಕೆ ಬಾಕಿ ಇದೆ. ಶರಣ್‌ ಮತ್ತು ನನ್ನ ಕಾಂಬಿನೇಷನ್‌ನಲ್ಲಿ ಈ ಹಿಂದೆ ‘ಚುಟುಚುಟು’ ಹಾಡು ಹಿಟ್‌ ಆಗಿರುವುದರಿಂದ ಅಂಥದ್ದೇ ಸೀಕ್ವೆಲ್‌ ನಿರೀಕ್ಷೆ ಪ್ರೇಕ್ಷಕರಲ್ಲಿರುವುದುಸಹಜ. ಹಾಗಾಗಿ ಅದ್ಧೂರಿ ಹಾಡು ಚಿತ್ರೀಕರಿಸಲು ಚಿತ್ರತಂಡ ಯೋಜಿಸಿದೆ. ‘ಮದಗಜ’ ಶೂಟಿಂಗ್‌ ಮುಗಿಸಿದ ನಂತರ ‘ಅವತಾರಪುರುಷ’ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಸಮಯ ಕೊಟ್ಟಿದ್ದೇನೆ. ಈ ಎರಡು ಚಿತ್ರಗಳನ್ನು ಪೂರ್ಣಗೊಳಿಸಿ ‘ರೇಮೊ’ ಚಿತ್ರದ ಒಂದು ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವೆ.

ಎಂತಹ ಪಾತ್ರಗಳ ನಿರೀಕ್ಷೆಯಲ್ಲಿದ್ದೀರಿ

ಕಾಲೇಜು ಹುಡುಗಿ, ಹೋಮ್ಲಿ, ಕ್ಯೂಟ್‌... ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸಿರುವೆ. ಈಗ ಮಾಡುತ್ತಿರುವ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಬೋಲ್ಡ್‌, ರಫ್‌ ಅಂಡ್‌ ಟಫ್‌ ಆಗಿಯೂ ಇವೆ.ನಾನು ಈವರೆಗೆ ಮಾಡದಿರುವ, ನನಗೆ ಸವಾಲೊಡ್ಡುವಂತಹ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ.ನಾಯಕಿ ಪ್ರಧಾನ ಪಾತ್ರ ಮತ್ತು ಐತಿಹಾಸಿಕ ಕಥೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.

ಬಾಲಿವುಡ್‌–ಸ್ಯಾಂಡಲ್‌ವುಡ್‌ ನಟಿಯರು ಡ್ರಗ್ಸ್‌ನಲ್ಲಿ ಸಿಲುಕಿರುವ ಬಗ್ಗೆ ನಿಮ್ಮ ಅನಿಸಿಕೆ?

ಡ್ರಗ್ಸ್‌ನಲ್ಲಿ ಸಿಕ್ಕಿಬಿದ್ದಿರುವ ಮತ್ತು ಇನ್ನು ಹೆಸರು ಕೇಳಿಬರುತ್ತಿರುವ ನಟ– ನಟಿರೊಂದಿಗೆ ನನಗೆ ಒಡನಾಟವೂ ಇಲ್ಲ. ನಾನು ಹೊರಗೆ ಯಾವುದೇ ಪಾರ್ಟಿ, ಪಬ್ಬು, ಕ್ಲಬ್‌ಗೆ ಹೋಗುವ ಅಭ್ಯಾಸವಿಟ್ಟುಕೊಂಡಿಲ್ಲ.ಡ್ರಗ್ಸ್ ಚಿತ್ರರಂಗವಷ್ಟೇ ಅಲ್ಲ, ರಾಜಕೀಯ, ಉದ್ಯಮ ಕ್ಷೇತ್ರ ಸೇರಿಎಲ್ಲಾ ಕಡೆಯೂ ಇದೆ. ಶಾಲಾ, ಕಾಲೇಜು ಮಕ್ಕಳ ಕೈಗೆ ತುಂಬಾ ಸುಲಭವಾಗಿ ಡ್ರಗ್ಸ್ ಸಿಗುತ್ತಿದೆ. ಇದು ತಪ್ಪಬೇಕು.ಯಾರೆಲ್ಲಡ್ರಗ್ಸ್ ದಂಧೆಯಲ್ಲಿದ್ದಾರೋ ಅವರೆಲ್ಲರೂ ಸಿಕ್ಕಿಬಿದ್ದು, ಶಿಕ್ಷೆ ಅನುಭವಿಸಲಿ. ಸಮಾಜದಲ್ಲಿ ಜಾಗೃತಿ ಮೂಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.