ADVERTISEMENT

2000 ಸಿನಿಮಾಗಳಿಗೆ ಡಿಜಿಟಲ್ ರೂಪ: ಸುನೀಲ್‌ ಪುರಾಣಿಕ್‌

ಕನ್ನಡ ಚಿತ್ರಗಳ ಆರ್ಕೈವ್ಸ್‌: ಅಕಾಡೆಮಿ ಯೋಜನೆ

ಕೆ.ಎಂ.ಸಂತೋಷ್‌ ಕುಮಾರ್‌
Published 3 ಮಾರ್ಚ್ 2020, 5:13 IST
Last Updated 3 ಮಾರ್ಚ್ 2020, 5:13 IST
ಸುನೀಲ್‌ ಪುರಾಣಿಕ್‌
ಸುನೀಲ್‌ ಪುರಾಣಿಕ್‌   

ಕನ್ನಡದ ಸುಮಾರು ಎರಡು ಸಾವಿರ ಚಿತ್ರಗಳ ಡಿಜಿಟಲೀಕರಣ, ಕನ್ನಡ ಚಿತ್ರಗಳ ಆರ್ಕೈವ್ಸ್‌ ಸೇರಿ ಹಲವು ಮಹತ್ವದ ಯೋಜನೆಗಳಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಕೈಹಾಕಿದೆ.

‌ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಅಕಾಡೆಮಿ ಕೈಗೆತ್ತಿಕೊಂಡಿರುವಚಟುವಟಿಕೆಗಳು ಮತ್ತುತಮ್ಮ ಕನಸುಗಳ ಕುರಿತು ‘ಪ್ರಜಾಪ್ಲಸ್‌’ ಜೊತೆಗೆ ಹಲವು ಮಾಹಿತಿಗಳನ್ನು ತೆರೆದಿಟ್ಟಿದ್ದಾರೆ.

ಕನ್ನಡದ ಹಲವು ಅಮೂಲ್ಯ ಸಿನಿಮಾಗಳ ನೆಗೆಟಿವ್‌ ಮತ್ತು ಪ್ರಿಂಟ್‌ಗಳು ಶಿಥಿಲಾವಸ್ಥೆಗೆ ತಲುಪಿವೆ. ಎಷ್ಟೋ ಅದ್ಭುತ ಚಿತ್ರಗಳು ಮುಂದಿನ ಪೀಳಿಗೆಗೆ ದೊರೆಯುವುದು ದುಸ್ಥರವಾಗುವ ಸ್ಥಿತಿ ಇದೆ.ಹಾಗಾಗಿ ಡಿಜಿಟಲ್‌ ರೂಪದಲ್ಲಿ ಇಲ್ಲದ ಸುಮಾರು ಎರಡು ಸಾವಿರ ಚಿತ್ರಗಳನ್ನು ಕಾಪಿಡಲು ಡಿಜಟಲೀಕರಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.ಈ ವರ್ಷ 200 ಸಿನಿಮಾಗಳ ಡಿಜಿಟಲೀಕರಣದ ಕೆಲಸಕ್ಕೆ ಸದ್ಯದಲ್ಲೇ ಚಾಲನೆ ಸಿಗಲಿದೆ ಎಂದರು.

ADVERTISEMENT

ಪುಣೆಯಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಭಾರತೀಯ ಚಲನಚಿತ್ರಗಳ ಆರ್ಕೈವ್ಸ್‌ ಮಾದರಿಯಲ್ಲೇ ರಾಜ್ಯದಲ್ಲೂ ಕನ್ನಡ ಚಲನಚಿತ್ರಗಳ ಆರ್ಕೈವ್ಸ್‌ ಸ್ಥಾಪಿಸಲಾಗುವುದು. ಪುಣೆಯಲ್ಲಿರುವ ಆರ್ಕೈವ್ಸ್‌ ಅಧ್ಯಯನ ಮಾಡಿ ಬಂದಿದ್ದೇವೆ. ದೊಡ್ಡ ಪ್ರಮಾಣದ ಅನುದಾನ ಬಯಸುವಈಯೋಜನೆಗೆ ಕೇಂದ್ರದ ನೆರವನ್ನೂನಿರೀಕ್ಷಿಸಿದ್ದೇವೆ ಎನ್ನುತ್ತಾರೆ ಅವರು.

ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಮ್ಯೂಸಿಯಂಗಳನ್ನು ಹಂಪಿ, ವಿಜಯಪುರ,ಬೇಲೂರು– ಹಳೆಬೀಡು, ಬೆಂಗಳೂರು, ಮೈಸೂರು ಸೇರಿ ಹಲವು ಕಡೆ ತೆರೆಯಲಾಗುತ್ತಿದೆ. ಪ್ರವಾಸಿಗರಿಗೆ ಅಲ್ಲಿ ಕನ್ನಡ ಚಿತ್ರರಂಗದ ಇತಿಹಾಸ, ಬೆಳವಣಿಗೆ, ಚಿತ್ರರಂಗದ ಸಾಧಕರ ಬಗ್ಗೆತಿಳಿಯುವ ಅವಕಾಶ ಕಲ್ಪಿಸಲಾಗುವುದು. ಹಾಗೆಯೇ ಚಿತ್ರರಂಗದಲ್ಲಿ ಕೃತಿ ಚೌರ್ಯ ತಪ್ಪಿಸಲು ‘ಸ್ಟೋರಿ ಬ್ಯಾಂಕ್‌’ ತೆರೆಯಲಾಗುವುದು. ಕಥೆಗಾರರು, ಗೀತ ಸಾಹಿತಿಗಳು, ಸಂಭಾಷಣೆಗಾರರಿಗೆ ವಂಚನೆಯಾಗುವುದನ್ನು ತಪ್ಪಿಸುವುದು ಇದರ ಉದ್ದೇಶ ಎಂದರು.

ಚಲನಚಿತ್ರೋತ್ಸವದ ಸಿದ್ಧತೆಗೆ ಯಾವುದೇ ಅಡೆತಡೆ, ಅವ್ಯವ್ಯಸ್ಥೆ, ಗೊಂದಲಎದುರಾಗದಂತೆ, ಚಿತ್ರೋತ್ಸವದ ಚಟುವಟಿಕೆಗಳ ವರ್ಷಪೂರ್ತಿ ಜಾರಿಯಲ್ಲಿರುವಂತೆ ಅಕಾಡೆಮಿ ಅಡಿಯಲ್ಲೇ ಚಲನಚಿತ್ರೋತ್ಸವದ ಶಾಶ್ವತ ಘಟಕ ಸ್ಥಾ‍ಪಿಸಲು ಉದ್ದೇಶಿಸಲಾಗಿದೆ. ಸರ್ಕಾರದಅನುಮತಿ ಪಡೆದು, ಈ ವರ್ಷವೇ ಇದಕ್ಕೆ ಚಾಲನೆ ಕೊಡಲಾಗುವುದು ಎಂದರು.

ಅಕಾಡೆಮಿಯ ಎರಡೂವರೆ ಎಕರೆ ಜಾಗದ ರಕ್ಷಣೆಗಾಗಿ ಕಾಂಪೌಂಡ್‌ ನಿರ್ಮಿಸಲಾಗುವುದು. ಅಕಾಡೆಮಿಯಲ್ಲಿ ನಿರ್ಮಿಸಿರುವ ಸ್ಟುಡಿಯೊದಲ್ಲಿ ನಾಲ್ಕು ಗೋಡೆಗಳನ್ನು ಬಿಟ್ಟರೆ ಒಳಗಡೆ ಏನೂ ಇಲ್ಲ. ಇದನ್ನುಚಿತ್ರಗಳ ಸೆನ್ಸಾರ್‌, ಪ್ರೀಮಿಯರ್‌ ಶೋ, ಸಿನಿಮಾ ಹಬ್ಬ ಆಯೋಜಿಸಲು ಸೂಕ್ತವಾಗುವಂತೆ ರೂಪಿಸುವ ಯೋಜನೆ ಇದೆ. ಹಾಗೆಯೇ ಸಿನಿಮಾಕ್ಕೆ ಸಂಬಂಧಿಸಿದ ಗ್ರಂಥಾಲಯ ತೆರೆಯಲಾಗುವುದು. ಅಕಾಡೆಮಿಯ ಚಟುವಟಿಕೆಗಳಿಗೆ ₹12 ಕೋಟಿ ಅನುದಾನ ಕೇಳಿದ್ದೆವು. ಮುಖ್ಯಮಂತ್ರಿ ತಕ್ಷಣ ₹5 ಕೋಟಿ ನೀಡಿದ್ದಾರೆ. ಇದರಲ್ಲಿ ಯಾವ ಯೋಜನೆಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಬೇಕೆನ್ನುವುದನ್ನು ಸದ್ಯದಲ್ಲೇ ನಿರ್ಧರಿಸಲಾಗುವುದು ಎಂದರು.

ತುಳು, ಕೊಂಕಣಿ, ಬ್ಯಾರಿ, ಬಂಜಾರ, ಕೊಡವ ಭಾಷೆಗಳಲ್ಲಿ ಒಳ್ಳೆಯ ಚಿತ್ರಗಳು ತಯಾರಾಗುತ್ತಿವೆ. ಈ ಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಅಕಾಡೆಮಿಯಿಂದ ಪ್ರಾದೇಶಿಕ ಚಲನಚಿತ್ರೋತ್ಸವ ನಡೆಸಲು ಸಿನಿಮಾ ಸಂಕೀರ್ಣ ಆರಂಭಿಸಲು ಯೋಜಿಸಿದ್ದೇವೆ.

ಅಲ್ಲದೆ, ಚಿತ್ರರಂಗದ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರು ಪಡುವ ಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಇವರಿಗೆ ಜೀವನ ಭದ್ರತೆ ಕಲ್ಪಿಸುವ ಪಿಂಚಣಿ ಬೇಡಿಕೆಯನ್ನು ಮುಖ್ಯಮಂತ್ರಿ ಬಳಿ ಮಂಡಿಸಿದ್ದೇನೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಹುದಿನಗಳ ಈ ನನ್ನ ಕನಸು ಈಡೇರಿದರೆಅಕಾಡೆಮಿಯ ಅಧ್ಯಕ್ಷನಾಗಿದ್ದಕ್ಕೂ ಸಾರ್ಥಕತೆ ಸಿಗಲಿದೆ ಎನ್ನುತ್ತಾರೆ ಪುರಾಣಿಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.