ADVERTISEMENT

ಇಂದ್ರಜಿತ್ ಲಂಕೇಶ್‌ ಗಂಡಸಾಗಿದ್ದರೆ ಆಡಿಯೊ ಬಿಡುಗಡೆ ಮಾಡಲಿ: ದರ್ಶನ್‌ ಸವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜುಲೈ 2021, 14:44 IST
Last Updated 17 ಜುಲೈ 2021, 14:44 IST
ನಟ ದರ್ಶನ್‌
ನಟ ದರ್ಶನ್‌    

ಬೆಂಗಳೂರು: ಇಂದ್ರಜಿತ್‌ ಲಂಕೇಶ್‌ ಗಂಡಸಾಗಿದ್ದರೆ, ಲಂಕೇಶ್‌ ಅವರಿಗೆ ಹುಟ್ಟಿದ್ದರೆ ನನ್ನ ಆಡಿಯೊ ಬಿಡುಗಡೆ ಮಾಡಲಿ ಎಂದು ನಟ ದರ್ಶನ್‌ ಅವರು ಸವಾಲು ಹಾಕಿದ್ದಾರೆ.

ಮೈಸೂರಿನ ಸಂದೇಶ್‌ ಹೋಟೆಲ್‌ನಲ್ಲಿ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಅವರ ಆಡಿಯೊವೊಂದಿದೆ ಎಂದು ಇಂದ್ರಜಿತ್‌ ಲಂಕೇಶ್‌ ಅವರು ಹೇಳಿದ್ದರು. ಅಲ್ಲದೆ, ಇಂದ್ರಜಿತ್‌ ದರ್ಶನ್‌ ಅವರ ವಿರುದ್ಧ ಅಸಾಂವಿಧಾನಿಕ ಪದ ಬಳಸಿದ್ದಾರೆ ಎನ್ನಲಾಗಿದ್ದು, ಆಕ್ರೋಶಗೊಂಡ ದರ್ಶನ್‌ ಶನಿವಾರ ಸಂಜೆ ಸುದ್ದಿಗೋಷ್ಠಿ ನಡೆಸಿದರು.

‘ನನ್ನ ವಿರುದ್ಧ ಅವನು (ಇಂದ್ರಜಿತ್‌ ಲಂಕೇಶ್‌) ಗಂಡಸ್ತನಕ್ಕೆ ಸಂಬಂಧಿಸಿದ ಪದ ಬಳಕೆ ಮಾಡಿದ್ದಾರೆ. ಆದರೆ, ನಾನು ಅವನಿಗೆ ಸವಾಲು ಹಾಕುತ್ತಿದ್ದೇನೆ, ಆಡಿಯೊ ಬಿಡುಗಡೆ ಮಾಡಲಿ,’ ಎಂದು ಸವಾಲು ಹಾಕಿದರು.

‘ನನ್ನನ್ನು ಅನಕ್ಷರಸ್ಥ ಎಂದು ಅವನು ಹೇಳಿದ್ದಾನೆ. ಆದರೆ, ನಾನು ಎಸ್ಸೆಸ್ಸೆಲ್ಸಿ ಪಾಸು ಮಾಡಿದ್ದೇನೆ. ಚೆನ್ನೈ ಸಿನಿಮಾ ತರಬೇತಿ ಸಂಸ್ಥೆಯಿಂದ ನಾನು ಪ್ರಮಾಣ ಪತ್ರ ಪಡೆದುಬಂದಿದ್ದೇನೆ.ನಾನು ಸಂಗೊಳ್ಳಿ ರಾಯಣ್ಣ ಆಗೋಕೂ ರೆಡಿ, ಕುರುಕ್ಷೇತ್ರ ಮಾಡೋಕೂ ರೆಡಿ, ಮೆಜೆಸ್ಟಿಕ್‌ ಮಾಡಿ ಲಾಂಗ್‌ ಹಿಡ್ಕೊಂಡು ನಿಲ್ಲೋಕೂ ರೆಡಿ. ನನ್ನ ಸಿನಿಮಾ ಶಿಕ್ಷಣ ಸಾಕು. ಇಂದ್ರಜಿತ್‌ ತುಂಬಾ ಓದಿದ್ದಾರಲ್ಲಾ. ಅವರು ನೆಟ್ಟಗೆ ಒಂದು ಸಿನಿಮಾ ನಿರ್ದೇಶನ ಮಾಡಲು ಹೇಳಿ ನೋಡೋಣ’.

25 ಕೋಟಿ ಪ್ರಕರಣ ದೊಡ್ಡಮನೆ (ರಾಜ್‌ಕುಮಾರ್‌ ಮನೆ) ಕಡೆಗೆ ಹೋಗುತ್ತಿದೆ. ಹಾಗಾಗಿಯೇ ನಾನು ಈಗ ಮಾತಾಡುತ್ತಿದ್ದೇನೆ. ನನ್ನ ತಂದೆ ಮತ್ತು ನಾನು ಆ ಮನೆ ಅನ್ನ ತಿಂದೇ ಮುಂದೆ ಬಂದವರು. ವಿಚಾರ ಅಲ್ಲಿಗೆ ಹೋದ ನಂತರ ನನಗೆ ಬೇಸರವಾಗಿ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದು ಅವರು ನಿರ್ಮಾಪಕ ಉಮಾಪತಿ ಅವರ ವಿರುದ್ಧ ಕಿಡಿ ಕಾರಿದರು.

ನಾನು ಆಸ್ತಿಯೊಂದನ್ನು ಖರೀದಿಗೆ ಕೇಳಿದೆ ಕೊಡಲಿಲ್ಲ ಎಂದು ಉಮಾಪತಿ ಹೇಳುತ್ತಾರೆ. ಆದರೆ ಒಂದೂವರೆ ವರ್ಷ ಉಮಾಪತಿ ನನ್ನ ಹೆಸರಲ್ಲಿ ಆ ಆಸ್ತಿಗೆ ಬಾಡಿಗೆ ಕಟ್ಟಿದ್ದು ಏಕೆ? ಎಂದು ದರ್ಶನ್‌ ಪ್ರಶ್ನೆ ಮಾಡಿದರು.

ನಮ್ಮತಂದೆ ಅಂಬಾಸಿಡರ್‌ ಖರೀದಿಸಿದ್ದರು. ನಾನು ಈಗ ಐಷಾರಾಮಿ ಕಾರು ಖರೀದಿಸುವ ಹಂತಕ್ಕೆ ಬೆಳೆದಿದ್ದೇನೆ. ಅದಕ್ಕೆ ನಾನು ಪಟ್ಟ ಶ್ರಮ ದೊಡ್ಡದು. ರಾಜ್‌ಕುಮಾರ್‌ ಅವರ ಮಗನೂ ನಾನು ಓಡಾಡುವಂಥ ಕಾರಿನಲ್ಲೇ ಓಡಾಡುತ್ತಾರೆ ಎಂದು ಹೇಳಿದರು.

ಮೊದಲು 25 ಕೋಟಿ ಪ್ರಕರಣವನ್ನು ಮುಗಿಸಿಬಿಡಲಿ ನಂತರ ಮಿಕ್ಕಿದ್ದು ಏನಾದ್ರೂ ಆಗಲಿ ಎಂದು ದರ್ಶನ್‌ ಹೇಳಿದ್ದಾರೆ.

ಚಿತ್ರರಂಗದಲ್ಲಿ ನಿಮ್ಮ ವಿರುದ್ಧ ಏನಾದರೂ ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಚಿತ್ರರಂಗ ಯಾರ ಅಪ್ಪನ ಆಸ್ತಿಯೂ ಅಲ್ಲ. ಯಾರು ಏನೂ ಮಾಡಲು ಆಗದು. ಶಾರೂಖ್‌ ಖಾನ್‌ ಅವರ ತಂದೆಗೂ, ಅಮೀರ್‌ ಖಾನ್‌, ಸಲ್ಮಾನ್‌ ಖಾನ್‌ ಅವರ ತಂದೆಯರಿಗೂ ಚಿತ್ರರಂಗಕ್ಕೂ ಏನಾದರೂ ಸಂಬಂಧವಿತ್ತೇ? ಅಮಿತಾಬ್‌ ಬಚ್ಚನ್‌ ಅವರಿದ್ದರೂ, ಅಭಿಷೇಕ್‌ ಬಚ್ಚನ್‌ ಅವರಿಗೆ ಏನಾದರೂ ಮಾಡಲಾಗುತ್ತಿದೆಯೇ?ಕಲೆಗೆ ಮಾತ್ರ ಸಿನಿಮಾರಂಗದಲ್ಲಿ ಬೆಲೆ ಎಂದು ಹೇಳಿದರು.

ನಾನು ಕ್ಷಮೆ ಕೋರಬೇಕು ಎಂದು ಹೇಳುತ್ತಿದ್ದಾರೆ. ನಾನು ಯಾಕೆ ಕ್ಷಮೆ ಕೇಳಲಿ. ಜಗ್ಗೇಶ್‌ ಪ್ರಕರಣದಲ್ಲೂ ಹೀಗೆ ಆಯಿತು. ನಾನು ಕ್ಷಮೆ ಕೇಳುವಂತಾಯಿತು. ಹಿರಿಯರು ಎಂದು ನಾನು ಕ್ಷಮೆ ಕೇಳಿದೆ. ಅಲ್ಲಿಯೂ ಸಾಕ್ಷಿಗಳಿದ್ದವು. ಆದರೆ, ಪ್ರತಿಸಲ ಕ್ಷಮೆ ಕೇಳನು ನಾನು ತಯಾರಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ತೋಟದಲ್ಲಿ ನಾನು ರೇವ್‌ ಪಾರ್ಟಿ ಮಾಡುವಂತಿದ್ದರೆ ನನ್ನ ತೋಟವನ್ನು ಅತ್ಯಂತ ಸುಸಜ್ಜಿತವಾಗಿ ಇಟ್ಟುಕೊಳ್ಳುತ್ತಿದ್ದೆ. 20 ಕೊಠಡಿಗಳನ್ನು ಕಟ್ಟಿಸುತ್ತಿದ್ದೆ ಎಂದು ಹೇಳಿದ್ದಾರೆ.

ಇಂದ್ರಜಿತ್‌ ಏನು ಹೇಳಿದರು?

ದರ್ಶನ್‌ ಹತಾಶರಾಗಿದ್ದಾರೆ, ವಿಚಲಿತರಾಗಿದ್ದಾರೆ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಿ ಸಾಕು. ಗಂಡಸ್ತನಕ್ಕೆ ಸಂಬಂಧಿಸಿದ ವಿಚಾರಗಳನ್ನು ಆಡಿಲ್ಲ. ಆಪದಗಳು ನನ್ನ ಭಾಯಲ್ಲಿ ಬರವುದು ಬೇಡ. ನಾನು ಯಾರನ್ನೂ ಅನಕ್ಷರಸ್ಥರು ಎಂದು ಹೇಳಿರಲಿಲ್ಲ ಎಂದು ಇಂದ್ರಜಿತ್‌ ಲಂಕೇಶ್‌ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.