ADVERTISEMENT

ಅಭಿಮಾನಿ ಹಂಚಿಕೊಂಡ ನಟ ದರ್ಶನ್‌ ನಟಿಸಿದ ಆ ಹಳೆಯ ಫೋಟೊ ಯಾವುದು?

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 10:28 IST
Last Updated 30 ಜುಲೈ 2020, 10:28 IST
ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡಿರುವ ದರ್ಶನ್‌ ಅವರ ಫೋಟೊ
ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡಿರುವ ದರ್ಶನ್‌ ಅವರ ಫೋಟೊ   

‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್ ಶಿವಮೊಗ್ಗದ ನೀನಾಸಮ್‌ನಲ್ಲಿ ತರಬೇತಿ ಪಡೆದಿರುವುದು ಎಲ್ಲರಿಗೂ ಗೊತ್ತು. ನೀನಾಸಮ್‌ನಿಂದ ಮರಳಿದ ಬಳಿಕ ಅವರು ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್‌ ಬಳಿ ಅಸಿಸ್ಟೆಂಟ್ ಕ್ಯಾಮೆರಾಮನ್‌ ಆಗಿ ಕೆಲಕಾಲ ಕಾರ್ಯ ನಿರ್ವಹಿಸಿದರು. ನಂತರ ಎಸ್. ನಾರಾಯಣ್‌ ನಿರ್ದೇಶನದ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕ್ಯಾಮೆರಾ ಎದುರಿನ ನಟನೆಯ ಪಯಣ ಆರಂಭಿಸಿದರು. ಲೈಟ್‌ಬಾಯ್‌ ಆಗಿಯೂ ಚಿತ್ರರಂಗದಲ್ಲಿ ದುಡಿದಿರುವ ದಚ್ಚು, ನಾಯಕ ನಟನಾಗುವುದಕ್ಕೂ ಮೊದಲು ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದು ಉಂಟು.

ದರ್ಶನ್‌ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿತ್ರ ‘ಮೆಜೆಸ್ಟಿಕ್’. ಪಿ.ಎನ್‌. ಸತ್ಯ ನಿರ್ದೇಶಿಸಿದ ಈ ಚಿತ್ರ ದಚ್ಚು ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿತು. ಕನ್ನಡ ಚಿತ್ರರಂಗದಲ್ಲಿ ಅವರು ಗಟ್ಟಿಯಾಗಿ ನೆಲೆಯೂರಲೂ ಸಹಕಾರಿಯಾಯಿತು. ಪ್ರಸ್ತುತ ಬಿಡುಗಡೆಗೆ ಸಿದ್ಧವಾಗಿರುವ ತರುಣ್‌ ಸುಧೀರ್ ನಿರ್ದೇಶನದ ‘ರಾಬರ್ಟ್‌’ ದರ್ಶನ್ ನಟನೆಯ 53ನೇ ಚಿತ್ರ.

ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿರುವ ದರ್ಶನ್ ಅವರಿಗೆ ಸ್ಯಾಂಡಲ್‌ವುಡ್‌ನ ‘ಬಾಕ್ಸ್‌ ಆಫೀಸ್‌ ಸುಲ್ತಾನ್’ ಎಂಬ ಬಿರುದು ಇದೆ. ಹಲವು ಸಂದರ್ಶನಗಳಲ್ಲಿ ದರ್ಶನ್‌ ತಾವು ನೀನಾಸಮ್‌ನಲ್ಲಿ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಆದರೆ, ಅಲ್ಲಿ ಕಲಿಯುವಾಗ ಅಭಿನಯಿಸಿದ ನಾಟಕಗಳ ಫೋಟೊಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ವಿರಳ.

ADVERTISEMENT

ಈಗ ಟ್ವಿಟರ್‌ನಲ್ಲಿ ‘ದರ್ಶನ್‌ ಆರ್ಮಿ’ ಹೆಸರಿನ ಖಾತೆಯಲ್ಲಿ ನೀನಾಸಮ್‌ನಲ್ಲಿ ಪ್ರದರ್ಶನಗೊಂಡ ನಾಟಕವೊಂದರಲ್ಲಿ ದರ್ಶನ್‌ ಅಭಿನಯಿಸಿರುವ ಫೋಟೊವೊಂದನ್ನು ಹಂಚಿಕೊಳ್ಳಲಾಗಿದೆ. ಅದಕ್ಕೆ ‘ಚಾಲೆಂಜಿಂಗ್‌ ಸ್ಟಾರ್ ದರ್ಶನ್‌, ನೀನಾಸಂನಲ್ಲಿದ್ದಾಗ’ ಎಂದು ಕ್ಯಾಪ್ಷನ್‌ ನೀಡಲಾಗಿದೆ. ಆದರೆ, ನಾಟಕದ ಹೆಸರು ಬರೆದಿಲ್ಲ. ಮತ್ತೊಂದೆಡೆ ಫೋಟೊದಲ್ಲಿರುವುದು ದರ್ಶನ್‌ ಅವರೇ ಎಂಬ ಕುತೂಹಲವೂ ಮೂಡಿದೆ. ಫೋಟೊಕ್ಕೆ ದಚ್ಚು ಅವರ ಹಲವು ಅಭಿಮಾನಿಗಳು ಲೈಕ್‌ ಒತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.