ADVERTISEMENT

ಹೇ ಜಲೀಲ; ಕನ್ವರ್ ಲಾಲಾ: ಇದು ಅಂಬಿ– ದೊಡ್ಡಣ್ಣನ ನೆನಪು

ಕೆ.ಎಚ್.ಓಬಳೇಶ್
Published 29 ನವೆಂಬರ್ 2018, 19:30 IST
Last Updated 29 ನವೆಂಬರ್ 2018, 19:30 IST
   

ಅಂಬಿಯ ಅಂಕಲ್‌ ಭದ್ರಾವತಿಯಲ್ಲಿದ್ದರು. ಅವರ ಹೆಸರು ಭೀಮೆಗೌಡ್ರು. ಅವರನ್ನು ನೋಡಲು ಅಂಬರೀಷ್‌ ಬರುತ್ತಿದ್ದರು. ನಾನಾಗ ಅಲ್ಲಿಯೇ ಇದ್ದೆ. ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದು ಅಲ್ಲಿಯೇ. ಚಿತ್ರವೊಂದರಲ್ಲಿ ನಟಿಸಲು ಬೆಂಗಳೂರಿಗೆ ಬಂದೆ. ಮೋತಿಮಾಲ್‌ ಹೋಟೆಲ್‌ನಲ್ಲಿ ಮೊದಲ ದಿನದ ಶೂಟಿಂಗ್‌. ಪಂಡರಿಬಾಯಿ, ಸುಂದರ್‌ಕೃಷ್ಣ ಅರಸ್‌ ಕೂಡ ಆ ಚಿತ್ರದಲ್ಲಿ ನಟಿಸುತ್ತಿದ್ದರು. ಅಂಬಿಯದು ಪೊಲೀಸ್‌ ಇನ್‌ಸ್ಪೆಕ್ಟರ್‌ ಪಾತ್ರ. ಅವರ ಬಳಿಗೆ ತೆರಳಿ ಪರಿಚಯಿಸಿಕೊಂಡೆ. ಭದ್ರಾವತಿಯಲ್ಲಿನ ಭೇಟಿ ಬಗ್ಗೆ ನೆನಪಿಸಿದೆ. ನಮ್ಮಿಬ್ಬರ ಸ್ನೇಹಕ್ಕೆ ಬೆಸುಗೆ ಬಿದ್ದಿದ್ದು ಅಲ್ಲಿಯೇ. ಅವರ ಜೊತೆಗೆ 39 ಚಿತ್ರಗಳಲ್ಲಿ ನಟಿಸಿದ್ದೇನೆ.

ಕಲಿಯುಗದ ಕರ್ಣನ ಕೊನೆಯ ದಿನಗಳಲ್ಲಿ ಅವರೊಟ್ಟಿಗೆ ಹೆಚ್ಚು ಕಳೆದಿದ್ದು ನನ್ನ ಪುಣ್ಯ. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘವು ನಾನು, ಅಂಬಿ, ರಾಕ್‌ಲೈನ್‌ ವೆಂಕಟೇಶ್‌ ಅವರನ್ನು ಮತ್ತಷ್ಟು ಹತ್ತಿರ ಮಾಡಿತು. ಮೂವರ ಮೇಲೆ ಗುರುತರ ಜವಾಬ್ದಾರಿ ಇತ್ತು. ಅಂಬರೀಷ್‌ ಮಹಾನ್‌ ಶಕ್ತಿ. ಅಂತಹವರ ಮುಂದಾಳತ್ವದಡಿ ಸಂಘದ ಕಟ್ಟಡ ಕಟ್ಟಬೇಕು. ಇಲ್ಲವಾದರೆ ಇನ್ಯಾವತ್ತೂ ಕಟ್ಟಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆವು. ಹಳೆಯ ಸಂಘ ಹೊಸ ರೂಪ ಪಡೆಯಿತು. ವಿಷ್ಣು ಸರ್‌, ಅಂಬಿ ಮನೆಯಲ್ಲಿ ಹಲವು ಸುತ್ತಿನ ಮೀಟಿಂಗ್‌ಗಳು ನಡೆದವು.

ಸಂಘದ ಸ್ಥಳ ಸಂಬಂಧ ವಿವಾದ ತಲೆದೋರಿತು. ಕೊನೆಗೆ, ಸುಪ್ರೀಂ ಕೋರ್ಟ್‌ವರೆಗೂ ಹೋಯಿತು. ಎಲ್ಲ ಅಡೆತಡೆ ನಿವಾರಣೆಯಾಯಿತು. ಶುಭ ಗಳಿಗೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಸ್ಮರಣೀಯ. ಒಂದು ವರ್ಷದಲ್ಲಿ ಕಟ್ಟಡ ಪೂರ್ಣಗೊಳಿಸುವ ಯೋಜನೆ ರೂಪಿಸಿದೆವು. ಬಳಿಕ ಈ ಯೋಜನೆ ಮತ್ತೊಂದು ವರ್ಷಕ್ಕೆ ವಿಸ್ತರಣೆಗೊಂಡಿತು. ಸಂಘದ ಕಟ್ಟಡ ನಿರ್ಮಾಣದ ಹಿಂದೆ ಅಂಬಿಯ ಪರಿಶ್ರಮ ಹೆಚ್ಚಿದೆ. ಅದನ್ನು ಮರೆಯಲು ಸಾಧ್ಯವಿಲ್ಲ.

ADVERTISEMENT

ವಾರದಲ್ಲಿ ನಾಲ್ಕು ದಿನ ಅವರ ಮನೆಯ ಟೇಬಲ್‌ನಲ್ಲಿ ಅವರೊಟ್ಟಿಗೆ ಕುಳಿತು ಊಟ ಮಾಡದಿದ್ದರೆ ನನಗೆ ಸಮಾಧಾನವೇ ಇರುತ್ತಿರಲಿಲ್ಲ. ರಾಕ್‌ಲೈನ್‌, ದೊಡ್ಡಣ್ಣ ಹೋಗಲೇ ಬೇಕಿತ್ತು. ಹೋಗದಿದ್ದರೆ ‘ಆರತಿ ತಟ್ಟೆ ಕಳುಹಿಸಬೇಕೇನ್ರೊ ನನ್‌ ಮಕ್ಳ...’ ಎಂಬ ಪ್ರೀತಿಯ ಬೈಗುಳ ಮೊಬೈಲ್‌ನಲ್ಲಿ ಕೇಳಿಬರುತ್ತಿತ್ತು. ಅವರ ಜೊತೆಗೆ ಕುಳಿತಾಗ ಸಮಯ ಸರಿಯುತ್ತಿದ್ದುದೇ ಗೊತ್ತಾಗುತ್ತಿರಲಿಲ್ಲ. ಕೆಲವೊಂದು ದಿನ ರಾತ್ರಿ 3 ಗಂಟೆವರೆಗೂ ಹರಟೆ ಮುಂದುವರಿದಿದ್ದು ಇದೆ.

ಪುತ್ರ ಅಭಿಷೇಕ್‌ ಮದುವೆ ಬಗ್ಗೆ ನಮ್ಮೊಂದಿಗೆ ಎಂದಿಗೂ ಅವರು ಪ್ರಸ್ತಾಪಿಸಿರಲಿಲ್ಲ. ಆದರೆ, ಮಗ ನಟಿಸುತ್ತಿದ್ದ ‘ಅಮರ್‌’ ಚಿತ್ರದ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇತ್ತು. ಮಡಿಕೇರಿಯಲ್ಲಿ ಈ ಚಿತ್ರದ ಶೂಟಿಂಗ್‌ ನಡೆಯುತ್ತಿತ್ತು. ಆ ವೇಳೆಯೇ ಅಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿತು. ಚಿತ್ರತಂಡ ಶೂಟಿಂಗ್‌ ಮುಗಿಸಿಕೊಂಡು ಬೇರೆ ಸ್ಥಳಕ್ಕೆ ತೆರಳಿದ ಮಾರನೇ ದಿನವೇ ಈ ಹಿಂದೆ ಚಿತ್ರೀಕರಣ ನಡೆಸಿದ ಸ್ಥಳದಲ್ಲಿ ಪ್ರವಾಹ ತಲೆದೋರುತ್ತಿತ್ತು. ಅಂತೂ ಶೂಟಿಂಗ್‌ ಮುಗಿಸಿಕೊಂಡು ಬಂದರು. ಆದರೆ, ಸಿನಿಮಾ ರಿಲೀಸ್‌ ಆಗುವ ಮೊದಲೇ ಅಂಬಿ ನಮ್ಮನ್ನು ಬಿಟ್ಟುಹೋದರು. ಅದೊಂದು ದುರದೃಷ್ಟ.

ಉಡುಪಿ ಜಿಲ್ಲೆಯ ಕಾಪುವಿನ ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಅವರಿಗೆ ಅಂಬಿಯ ಜಾತಕ ತೋರಿಸಿದ್ದೆ. ಜಾತಕ ನೋಡಿದ್ದ ಅವರು ಮತ್ಯುಂಜಯ ಹೋಮ, ಆಯುಷ್ಯ ಹೋಮ ಮಾಡಿಸುವಂತೆ ಸೂಚಿಸಿದ್ದರು. ಎಲ್ಲಾ ಸಿದ್ಧತೆಯೂ ನಡೆದಿತ್ತು. ಈ ನಡುವೆಯೇ ಜ್ಯೋತಿಷಿಯೂ ಹುಷಾರು ತಪ್ಪಿದರು. ಅವರಿಗೆ ತೀವ್ರ ಜ್ವರ ಬಂದಿತು. ಇನ್ನೊಂದೆಡೆ ಕೇಂದ್ರ ಸಚಿವ ಅನಂತ್‌ಕುಮಾರ್‌ ನಿಧನರಾದರು. ಹೋಮ ನಡೆಸಲು ಮತ್ತೊಂದು ದಿನ ನಿಗದಿಪಡಿಸಲು ತೀರ್ಮಾನಿಸಿದೆವು. ಆದರೆ, ಕಾಲ ಸರಿದು ಹೋಯಿತು.

ಆದರೆ, ಅಂಬರೀಷ್‌ಗೆ ಜ್ಯೋತಿಷದ ಮೇಲೆ ನಂಬಿಕೆ ಇದ್ದಿದ್ದು ಕಡಿಮೆ. ತನ್ನ ಸ್ವಸ್ವಾಮರ್ಥ್ಯದ ಮೇಲೆ ಅವನಿಗೆ ನಂಬಿಕೆಗೆ ಜಾಸ್ತಿ. ಏನನ್ನೂ ಆಸೆಪಟ್ಟವನಲ್ಲ. ಎಲ್ಲರಿಗೂ ಕೊಟ್ಟ ಕೈ ಅವನದು. ಪರರಿಂದ ತೆಗೆದುಕೊಂಡಿದ್ದು ಕಡಿಮೆ. ಅವನ ಮನೆಗೆ ಬರುವ ಎಲ್ಲರೂ ಊಟ, ತಿಂಡಿ ತಿಂದುಕೊಂಡೇ ಹೋಗಬೇಕಿತ್ತು.

ಮರೆಯಲಾಗದ ನೆನಪು

ಅದು ‘ಮಸಣದ ಹೂವು’ ಚಿತ್ರದ ಶೂಟಿಂಗ್. ಕಾರವಾರದ ಅಂಕೋಲ ಕಡಲತೀರದಲ್ಲಿ ಚಿತ್ರೀಕರಣ. ಇದು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಕೊನೆಯ ಚಿತ್ರವೂ ಹೌದು. ಒಳ್ಳೆಯ ಸಿನಿಮಾ. ಸೂರ್ಯಾಸ್ತದ ಕೊನೆಯ ದೃಶ್ಯ ತೆಗೆಯುವ ಸಂದರ್ಭವದು. ಪುಟ್ಟಣ್ಣ ಶೂಟಿಂಗ್‌ ಪೂರ್ಣಗೊಳಿಸಿದರು. ದಿಗಂತದತ್ತ ತದೇಕ ಚಿತ್ತ ನೆಟ್ಟರು. ಬಳಿಕ ‘ನಾನು ನನ್ನ ಕೆಲಸ ಮಾಡಿದ್ದೇನೆ. ಉಳಿದಿದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು’ ಅಂದ್ರು.

ಅಂಬರೀಷ್‌ ಮೇಕಪ್‌ನಲ್ಲಿದ್ದರು. ನಾವು ಅವರ ಸಮೀಪದಲ್ಲಿಯೇ ನಿಂತಿದ್ದೆವು. ಅಂಬಿ ಶಿಸ್ತಿನ ಬಾಲಕನಂತೆ ಕಾಣುತ್ತಿದ್ದ. ಪುಟ್ಟಣ್ಣನ ಮೇಲೆ ಅವನಿಗೆ ವಿಶೇಷ ಗೌರವ. ಅವರಿಗೂ ಜಲೀಲನ ಮೇಲೆ ಅಪಾರ ಪ್ರೀತಿ. ತನ್ನ ಶಿಷ್ಯ ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆದಿದ್ದು ಅವರಿಗೆ ಹೆಮ್ಮೆ ತಂದಿತ್ತು. ಊರಿಗೆ ಹೊರಡುವುದಿದ್ದರೆ ಹೋಗಿ ಎಂದರು ಪುಟ್ಟಣ್ಣ. ಒಮ್ಮೆಲೆ ಜಲೀಲನ ಮೊಗದಲ್ಲಿ ಸಂತಸ ಮೂಡಿತು. ಐದೇ ನಿಮಿಷದಲ್ಲಿ ಮೇಕಪ್‌ ಬದಲಾಯಿಸಿಕೊಂಡು ಹೊರಡಲು ತಯಾರಾದ.

ನನ್ನ ಕುಟುಂಬ ಆಗ ಭದ್ರಾವತಿಯಲ್ಲಿಯೇ ಇತ್ತು. ಕಾರಿನಲ್ಲಿ ಕೂರಿಸಿಕೊಂಡು ಭದ್ರಾವತಿಯಲ್ಲಿರುವ ನನ್ನ ಮನೆ ಬಾಗಿಲುವರೆಗೂ ಬಂದು ಬಿಟ್ಟುಹೋದ. ಸಂಜೆ ಶಾಲೆ ಬಿಟ್ಟಾಗ ಮನೆಗೆ ಹೊರಡಲು ಅಣಿಯಾಗುವ ಮಕ್ಕಳ ಮುಖದಲ್ಲಿ ಕಾಣುವ ಖುಷಿ ಅಂದು ಅವನಲ್ಲಿತ್ತು.

ಇನ್ನೊಂದು ಘಟನೆಯನ್ನು ನಾನಿಲ್ಲಿ ಸ್ಮರಿಸಲೇ ಬೇಕು. ಹಾವೇರಿಯಲ್ಲಿ ಕಾರ್ಯಕ್ರಮವಿತ್ತು. ಅಲ್ಲಿಗೆ ಹೋಗಲು ಮೂರು ದಿನದ ಮೊದಲೇ ತೀರ್ಮಾನಿಸಿದ್ದೆವು. ಮಧ್ಯಾಹ್ನ 2.30ಗಂಟೆಯಾದರೂ ಅಂಬರೀಷ್‌ ಪತ್ತೆಯಿಲ್ಲ. ಮೂರು ಗಂಟಗೆ ಸರಿಯಾಗಿ ನನ್ನ ಬೆಂಗಳೂರಿನ ಮನೆಯ ಮಂದೆ ಅಂಬಿ ಹಾಜರ್‌. ಜೋರಾಗಿ ಕಾರಿನ ಹಾರ್ನ್‌ ಮಾಡುತ್ತಿದ್ದ. ನಾನು ಸಾಕಷ್ಟು ತಡವಾಗಿದೆ ಎಂದೆ. ‘ಮುಚ್ಕೊಂಡು ಬಂದ್‌ ಕುಳಿತ್ಕೊ’ ಎಂದ. ತಡಬಡಾಯಿಸಿ ಶೂಟ್‌ಕೇಸ್‌ನೊಂದಿಗೆ ಹೋಗಿ ಕಾರಲ್ಲಿ ಕುಳಿತೆ. ಕಾರ್ಯಕ್ರಮ ಎಷ್ಟೊತ್ತಿಗೆ ಇದೆ ಎಂದ. ಸಂಜೆ 6 ಗಂಟೆಗೆ ಅಂದೆ. ಮೂರೇ ತಾಸಿನಲ್ಲಿ ಹಾವೇರಿಯ ಗೆಸ್ಟ್‌ಹೌಸ್‌ನ ಮುಂದೆ ಕಾರು ನಿಲ್ಲಿಸಿದ. ಅಂಬಿ ವೇಗವಾಗಿ ಕಾರು ಓಡಿಸುವುದನ್ನು ಕಂಡ ನಾನು ಅಂದು ಅಕ್ಷರಶಃ ಬೆವೆತುಹೋಗಿದ್ದೆ. ಕಾರು ಚಾಲನೆಯಲ್ಲಿನ ಅವನ ಚಾಕಚಕ್ಯತೆಗೆ ಬೆರಗಾಗಿದ್ದೆ. ಮನದಲ್ಲಿ ಭಯವೂ ಕಾಡಿತ್ತು.

ಅಂಬರೀಷ್‌ ನನ್ನನ್ನು ‘ಹೇ.. ಎಲ್ಲಿದ್ದಿಯೋ ನನ್‌ ಮಗನೇ...’ ಎಂದೇ ಕರೆಯುತ್ತಿದ್ದರು. ಆ ಕರೆಯಲ್ಲಿ ಪ್ರೀತಿ ಇತ್ತು. ಅಭಿಮಾನವೂ ಇರುತ್ತಿತ್ತು.

3ಎ ಕನಸು

ಕಲಾವಿದರ ಸಂಘದ ಕಟ್ಟಡದಲ್ಲಿ ಸುಸಜ್ಜಿತ ಜಿಮ್‌ ನಿರ್ಮಿಸಬೇಕೆಂಬುದು ಅಂಬಿಯ ಕನಸಾಗಿತ್ತು. ನಟ, ನಟಿಯರು, ‍ಪೋಷಕ ನಟ, ನಟಿಯರು ಸೇರಿದಂತೆ ಎಲ್ಲ ಕಲಾವಿದರೂ ಅಲ್ಲಿ ನಿತ್ಯವೂ ದೈಹಿಕ ಕಸರತ್ತು ಮಾಡಬೇಕು. ಅಲ್ಲಿಯೇ ಸ್ನಾನ ಮಾಡಿಕೊಂಡು ಶೂಟಿಂಗ್‌ ಸ್ಥಳಕ್ಕೆ ತೆರಳುವ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಅವರ ಆಸೆಯಾಗಿತ್ತು.

ಅಂಬಿ ಆ್ಯಕ್ಟಿಂಗ್ ಅಕಾಡೆಮಿ(3ಎ) ಸ್ಥಾಪಿಸುವ ಗುರಿಯಿದೆ. ಇದಕ್ಕಾಗಿ ಪುಣೆಯ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಸಂಬಂಧ ಮಾತುಕತೆ ನಡೆಯುತ್ತಿದೆ. ಚಿತ್ರರಂಗ ಪ್ರವೇಶಿಸುವ ಹೊಸಬರಿಗೆ ಆರರಿಂದ ಒಂದು ವರ್ಷದ ತರಬೇತಿ ನೀಡಿದರೆ ಸಾಲದು. ಸಂಕಲನ, ಅಭಿನಯ ಸೇರಿದಂತೆ ಎಲ್ಲ ತರಬೇತಿ ನೀಡಬೇಕಿದೆ. ಮೂರು ದಿನ ತರಗತಿ ಮತ್ತು ಮೂರು ದಿನ ತರಬೇತಿ ನೀಡುವ ಗುರಿಯಿದೆ. ಅಂಬಿಯ ಎಲ್ಲ ಕನಸುಗಳನ್ನು ಈಡೇರಿಸಲು ಬದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.