ಕಮಲ್ ಶ್ರೀದೇವಿ: ಕಿಶೋರ್
ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರೆದುರಿಗೆ ಬರುವ ನಟ ಕಿಶೋರ್ ನಟನೆಯ ‘ಕಮಲ್ ಶ್ರೀದೇವಿ’ ಇಂದು(ಸೆ.19) ತೆರೆಕಂಡಿದೆ. ಪಾತ್ರಗಳ ಆಯ್ಕೆ, ಸಿನಿಮಾ ಟಿಕೆಟ್ ದರ ಮಿತಿ ಮುಂತಾದ ವಿಷಯಗಳ ಬಗ್ಗೆ ಅವರು ಇಲ್ಲಿ ಮಾತನಾಡಿದ್ದಾರೆ.
ಪೊಲೀಸ್ ಪಾತ್ರಗಳು ಹುಡುಕಿಕೊಂಡು ಬರುತ್ತಿವೆಯಲ್ಲಾ...
(ನಗುತ್ತಾ...) ಪೊಲೀಸ್ ಹುಡುಕಿಕೊಂಡು ಬರುತ್ತಿಲ್ಲ, ಪೊಲೀಸ್ ಪಾತ್ರಗಳು ಹುಡುಕಿಕೊಂಡು ಬರುತ್ತಿವೆಯಲ್ಲ ಎಂದು ಖುಷಿಪಡಬೇಕು. ಕಥೆ ಹೇಳುವ ನಿರ್ದೇಶಕನಿಗೆ ಯಾವ ಪಾತ್ರಗಳು ಕಥೆ ಹೇಳುವುದಕ್ಕೆ ಅನುಕೂಲವಾಗುತ್ತದೆಯೋ ಆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಅದೇ ರೀತಿ ಕಲಾವಿದರ ಆಯ್ಕೆಯಲ್ಲೂ ತಂಡಗಳು ಯಾವ ಕಲಾವಿದ ಈ ಕಥೆಯನ್ನು ಪರಿಣಾಮಕಾರಿಯಾಗಿ ದಾಟಿಸಬಲ್ಲ ಎಂದು ನೋಡುತ್ತಿರುತ್ತಾರೆ. ಹೀಗಿರುವಾಗ ಇಂಥ ಪಾತ್ರಕ್ಕೆ ಒಗ್ಗಿಕೊಂಡಿರುವವರನ್ನು, ಇಮೇಜ್ ಇರುವವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅಥವಾ ಈ ಮಾದರಿಯನ್ನು ಬಿಟ್ಟು ಹೊಸ ಮುಖಗಳನ್ನು ನೋಡುತ್ತಾರೆ. ಹೊಸ ಮುಖಗಳು ಕೆಲವೊಮ್ಮೆ ಪರಿಣಾಮಕಾರಿಯಾಗಿ ಇರುತ್ತವೆ. ‘ಏಳುಮಲೆ’ ಹಾಗೂ ‘ಕಮಲ್ ಶ್ರೀದೇವಿ’ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲು ಕಥೆಯೇ ಮುಖ್ಯ ಕಾರಣ. ‘ಏಳುಮಲೆ’ಯಲ್ಲಿ ಜಾತಿ ವೈಷಮ್ಯ, ದ್ವೇಷದ ಕಥೆಯಿತ್ತು. ನಕಾರಾತ್ಮಕ ಅಂತ್ಯವಿದ್ದರೆ ಮಾಡುವುದಿಲ್ಲ ಎಂದು ‘ಏಳುಮಲೆ’ ನಿರ್ದೇಶಕ ಪುನೀತ್ ಅವರಿಗೆ ಮೊದಲೇ ಹೇಳಿದ್ದೆ. ಈ ರೀತಿಯ ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದಾಗ ಪ್ರೇಕ್ಷಕರ ಮನಸ್ಸಿನಲ್ಲಿ ಒಂದು ಭರವಸೆ ಮೂಡಿಸಬೇಕಾಗುತ್ತದೆ. ದುರಂತ ಅಂತ್ಯದ ಮೂಲಕ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಸುವುದು ಒಂದು ಕಡೆಯಾದರೆ, ಭರವಸೆಯನ್ನು ಮನಸ್ಸಿನಲ್ಲಿ ಉಳಿಸುವುದು ಅದಕ್ಕಿಂತ ಮುಖ್ಯ.
ಪೊಲೀಸ್ ಪಾತ್ರಗಳ ಆಯ್ಕೆಯಲ್ಲೂ ಎಚ್ಚರಿಕೆ ಇರಬೇಕು. ನಾವು ಜನಗಳಿಗಾಗಿ ಸಿನಿಮಾ ಮಾಡುತ್ತಿರುವಾಗ, ಅವರಿಗೆ ನಾವು ಉತ್ತರದಾಯಿತ್ವರಾಗಿರುತ್ತೇವೆ. ಅವರ ಕಡೆಗಿನ ಬದ್ಧತೆ ಎಚ್ಚರಿಕೆಯಿಂದ ಪಾತ್ರಗಳ ಮಾಡಿಕೊಳ್ಳುವಂತೆ ಮಾಡುತ್ತದೆ.
ಕಮಲ್ ಶ್ರೀದೇವಿ’ಯ ಕಥೆಯೇನು?
‘ಕಮಲ್ ಶ್ರೀದೇವಿ’ ಒಂದು ಹೆಣ್ಣಿನ ಕೊಲೆಯ ಸುತ್ತ ನಡೆಯುವ ಕಥೆ. ಇವತ್ತಿಗೆ ಬಹಳ ಪ್ರಸ್ತುತವಾದ ವಿಷಯ ಈ ಸಿನಿಮಾದಲ್ಲಿದೆ. ನನಗೆ ಇದರಲ್ಲಿ ಕುತೂಹಲಕಾರಿಯಾಗಿ ಅನಿಸಿದ್ದು, ಇದರಲ್ಲಿ ಶಂಕಿತರಾಗಿ ಬರುವವರೆಲ್ಲರೂ ಸಮಾಜದ ಬೇರೆ ಬೇರೆ ವರ್ಗದಿಂದ ಬಂದವರು. ಇವರೆಲ್ಲರೂ ಒಂದು ಹೆಣ್ಣನ್ನು ಹೇಗೆ ನೋಡುತ್ತಾರೆ, ಒಂದು ಹೆಣ್ಣನ್ನು ಕೇವಲ ಭೋಗದ ವಸ್ತುವನ್ನಾಗಿ ನೋಡಿದಾಗ ಏನೇನಾಗುತ್ತದೆ?, ‘ಶ್ರೀದೇವಿ’ ಕೊಲೆಯಾಗುವ ಮಟ್ಟಕ್ಕೆ ಘಟನೆಗಳು ಏಕೆ ಹೋಗುತ್ತದೆ? ಎನ್ನುವುದು ಕಥೆ. ಮುಖ್ಯವಾಗಿ ಸಮಾಜವು ಹೆಣ್ಣನ್ನು ನೋಡುವ ದೃಷ್ಟಿಕೋನದ ಬಗ್ಗೆ ಜನರನ್ನು ಎಚ್ಚರಗೊಳಿಸಿ, ಯೋಚನೆಗೆ ಹಚ್ಚುವ ಕಥೆ ಇದು. ನಟಿ ಸಂಗೀತಾ ಭಟ್ ಮೂಲಕ ಈ ಸಿನಿಮಾ ಒಪ್ಪಿಕೊಂಡೆ. ಸ್ನೇಹಕ್ಕಾಗಿ ಸಿನಿಮಾ ಒಪ್ಪಿಕೊಳ್ಳುವವನು ನಾನಲ್ಲ. ಕಥೆ ಇಷ್ಟವಾದ ಕಾರಣ ಒಪ್ಪಿಕೊಂಡೆ. ಸಂಗೀತಾ ಅವರಿಗೆ ಬಹಳ ಸವಾಲಿನ ಪಾತ್ರ ಇದರಲ್ಲಿತ್ತು. ಇಂತಹ ಸೂಕ್ಷ್ಮವಾದ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯ ಅವರಿಗೆ ಇದ್ದೇ ಇದೆ. ಹೊಸ ನಿರ್ದೇಶಕರಾದರೂ ಸುನಿಲ್‌ಗೆ ಬಹಳ ಸ್ಪಷ್ಟತೆ ಇತ್ತು. ಸೂರಿ ಗರಡಿಯಿಂದ ಬಂದಿರುವ ಕಾರಣ ಅವರ ಸ್ಟೈಲ್, ಪ್ರಭಾವವೂ ಸಿನಿಮಾದಲ್ಲಿ ಕಾಣಿಸುತ್ತದೆ.
‘ಕೊಸ್ಟಾವೊ’ ಬಳಿಕ ಹಿಂದಿಯಿಂದ ಪ್ರತಿಕ್ರಿಯೆ ಹೇಗಿದೆ?
ಹಿಂದಿಯಿಂದ ಆಫರ್‌ಗಳು ಬರುತ್ತಲೇ ಇರುತ್ತವೆ. ಆದರೆ ಕುತೂಹಲಕಾರಿಯಾದ ಕಥೆಗಳು ಬಂದಿಲ್ಲ. ಕರೆ ಮಾಡಿದವರೆಲ್ಲರೂ ‘ಫ್ಯಾಮಿಲಿ ಮ್ಯಾನ್’ ಜ್ಞಾಪಕದಲ್ಲಿ ಇಟ್ಟುಕೊಂಡು ಮಾತನಾಡುತ್ತಾರೆ. ದೊಡ್ಡ ಪ್ರಾಜೆಕ್ಟ್‌ಗಳು ಸದ್ಯಕ್ಕೆ ಯಾವುದೂ ಇಲ್ಲ. ಕನ್ನಡದಲ್ಲೇ ಹಲವು ಸಿನಿಮಾಗಳನ್ನು ಮಾಡುತ್ತಿದ್ದೇನೆ.
ರಂಗಭೂಮಿಯಲ್ಲಿ ಸಕ್ರಿಯರಾಗಿದ್ದೀರಿ...
ಹೌದು. ಹಲವು ಹೊಸ ವಿಷಯಗಳನ್ನು ಈ ವೇದಿಕೆ ಮೂಲಕ ಕಲಿಯುತ್ತಿದ್ದೇನೆ. ಇದು ಸವಾಲುಗಳನ್ನೂ ಒಡ್ಡಿದೆ. ‘ಲವ್ ಲೆಟರ್ಸ್’ಗೆ ಹೆಚ್ಚಿನ ಪೂರ್ವತಯಾರಿಗೆ ಅಗತ್ಯವಿಲ್ಲ. ಆರಂಭದಲ್ಲಷ್ಟೇ ಒಂದಿಷ್ಟು ವರ್ಕ್‌ಶಾಪ್‌ಗಳನ್ನು ಮಾಡಿದ್ದೆವು. ಹೀಗಾಗಿ ನನ್ನ ಸಿನಿಮಾಗಳ ಒತ್ತಡದ ನಡುವೆ ಇದನ್ನೂ ನಿಭಾಯಿಸಿದೆ. ಬೇರೆ ಮಾದರಿಯ ನಾಟಕಗಳನ್ನು ಮಾಡಲು ಸಾಧ್ಯವೇ ಎನ್ನುವುದು ನನಗೆ ಗೊತ್ತಿಲ್ಲ. ಸಿನಿಮಾ–ರಂಗಭೂಮಿಯಲ್ಲಿ ಜೊತೆಯಾಗಿ ಹೆಜ್ಜೆ ಇಡುವ ಆಸೆ ಇದೆ. ‘ಲವ್ ಲೆಟರ್ಸ್’ಗೆ ಜನರ ಪ್ರತಿಕ್ರಿಯೆಯೂ ಅದ್ಭುತವಾಗಿತ್ತು. ರಂಗಮಂದಿರಗಳು, ಚಿತ್ರಮಂದಿರಗಳು ತುಂಬುವುದು ಸಮಾಜದ ಸ್ವಾಸ್ಥ್ಯವನ್ನು ಹೇಳುತ್ತದೆ. ಒಳ್ಳೆಯ ಸಿನಿಮಾಗಳಿಗೆ ಜನರು ಬಂದು ನೋಡಿದಾಗ ಅವರ ಆಲೋಚನೆ ಆರೋಗ್ಯಕರವಾಗಿದೆ ಎಂದರ್ಥ. ಇವತ್ತಿನ ದ್ವೇಷ ರಾಜಕಾರಣ ನಡೆಯುತ್ತಿರುವ ಸಂದರ್ಭದಲ್ಲಿ ಜನ ತೆರೆದ ಮನಸ್ಸಿನಿಂದ ಇರುವುದು ಖುಷಿ ಕೊಡುತ್ತದೆ, ಭರವಸೆಯನ್ನೂ ನೀಡುತ್ತದೆ.
ಸಿನಿಮಾ ಟಿಕೆಟ್ ದರ ಮಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು?
ಇದೊಂದು ಒಳ್ಳೆಯ ನಡೆ. ಮನೆಯಲ್ಲಿ ಕುಳಿತು ಸಿನಿಮಾ ನೋಡಿದರೆ ಅದರ ಸಂಪೂರ್ಣ ಅನುಭವ ಸಿಗಲು ಸಾಧ್ಯವೇ ಇಲ್ಲ. ಸಿನಿಮಾ ಮಾಡುವವರು, ಸಿನಿಮಾದೊಳಗೆ ಇರುವವರು ಏನೇನೋ ವಿಷಯಗಳನ್ನು ಹೇಳಬೇಕು ಎಂದು ಪ್ರಾಮಾಣಿಕವಾಗಿ ಶ್ರಮಪಟ್ಟಿರುತ್ತೇವೆ. ಪ್ರೇಕ್ಷಕನೊಬ್ಬ ಸಿನಿಮಾದೊಳಗೆ ಸಂಪೂರ್ಣವಾಗಿ ಹೊಕ್ಕರಷ್ಟೇ ನಿರ್ದೇಶಕರು ಹೇಳಬಯಸುವ ಎಲ್ಲಾ ಅಂಶಗಳು ಆತನಿಗೆ ತಲುಪುತ್ತವೆ. ಹೀಗಾದರಷ್ಟೇ ನಿರ್ದೇಶಕರು–ಪ್ರೇಕ್ಷಕರ ನಡುವೆ ಅತ್ಯಂತ ಪರಿಣಾಮಕಾರಿಯಾದ ಸಂಭಾಷಣೆಯೊಂದು ನಡೆಯುತ್ತದೆ. ಈ ಅನುಭವಕ್ಕೆ ಯಾವುದೂ ಅಡೆತಡೆಯಾಗಬಾರದು. ಇಂತಹ ವಾತಾವರಣ ಚಿತ್ರಮಂದಿರದೊಳಗಷ್ಟೇ ಸಿಗಲು ಸಾಧ್ಯ. ಹಿಂದೆಲ್ಲಾ ಸಿನಿಮಾ ಕ್ಲಬ್ ಇರುತ್ತಿದ್ದವು, ಮಕ್ಕಳನ್ನು ಶಾಲೆಯಿಂದ ಸಿನಿಮಾಗೆ ಕರೆದೊಯ್ಯುತ್ತಿದ್ದರು. ಈಗ ಇದ್ಯಾವುದೂ ಇಲ್ಲ. ಸಿನಿಮಾಗಳನ್ನು ನೋಡಿ ಅವುಗಳ ಅನುಭವಗಳನ್ನು, ವಿಷಯಗಳನ್ನು ಮಾತುಗಳಲ್ಲಿ ಬಳಸುತ್ತಿದ್ದೆವು.
ಪ್ರಸ್ತುತ ಸಿನಿಮಾ ನೋಡುವುದು ದುಬಾರಿಯಾಗಿದೆ. ಒಂದು ಕುಟುಂಬ ಹೋದರೆ ಮೂರ್ನಾಲ್ಕು ಸಾವಿರ ಖರ್ಚು ಆಗುತ್ತಿದೆ. ಇದರಿಂದಾಗಿ ಒಂದು ಅದ್ಭುತವಾದ, ಅಮೂಲ್ಯವಾದ ಅನುಭವ ಕಳೆದುಕೊಳ್ಳುತ್ತಿದ್ದಾರೆ. ಜನರ ಆರ್ಥಿಕ ಸ್ಥಿತಿಯೂ ಕುಗ್ಗಿದೆ. ಸಿನಿಮಾ ಅಥವಾ ಕಲೆ ಎನ್ನುವುದು ಕೇವಲ ಮನರಂಜನೆಯಲ್ಲ. ಅದು ಹೃದಯದೊಂದಿಗಿನ ಸಾಮಾಜಿಕ ಸಂವಹನ. ಇದೊಂದಿಗೆ ಸಮಾಜದ ಮುಖಾಮುಖಿ ಆಗುತ್ತಲೇ ಇರಬೇಕು. ಬರಹಗಾರ, ಕಥೆಗಾರ, ನಿರ್ದೇಶಕ, ರಂಗಕರ್ಮಿ ಜನರ ಪ್ರತಿನಿಧಿಯಾಗಿ ಈ ವೇದಿಕೆಯನ್ನು ಬಳಸಿಕೊಳ್ಳುತ್ತಿರುತ್ತಾನೆ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುತ್ತಾರೆ. ಈ ಸಿನಿಮಾ ಅಥವಾ ಉಳಿದ ಕಲೆಗಳೆಲ್ಲವೂ ಕೋಶದ ಭಾಗವೇ. ದುಬಾರಿಯಾದ ಟಿಕೆಟ್ ದರದಿಂದ ದುಡ್ಡಿದ್ದವರಷ್ಟೇ ಸಿನಿಮಾಗೆ ತೆರೆದುಕೊಳ್ಳುವ ಅಪಾಯವೂ ಇತ್ತು. ಒಬ್ಬನ ಆರ್ಥಿಕ ಸ್ಥಿತಿಯು ಸಮಾಜದ ಜೊತೆಗಿನ ಸಂವಹನದ ಅವಕಾಶವನ್ನು ನಿರ್ಧರಿಸುತ್ತದೆ ಎಂದರೆ ಇದು ಹೆಚ್ಚು ಅಪಾಯಕಾರಿ. ಜನ ಇದೀಗ ದುಡ್ಡಿನ ಬಗ್ಗೆ ಯೋಚನೆ ಮಾಡಬೇಕಾಗಿಲ್ಲ. ಸಿನಿಮಾ ನಿರ್ಮಾಣ ಮಾಡುವವರೂ ಒಳ್ಳೆಯ ಕಥೆಗಳ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಬೇಕು. ಇದಾಗದೇ ಇದ್ದಲ್ಲಿ ಪ್ರಾಮಾಣಿಕವಾಗಿ ಸಿನಿಮಾ ಮಾಡುವವರನ್ನೂ ಜನ ನಂಬದ ಸ್ಥಿತಿ ಎದುರಾಗಲಿದೆ.
ಹೊಸ ಪ್ರಾಜೆಕ್ಟ್‌ಗಳು...
ಬರಗೂರು ರಾಮಚಂದ್ರಪ್ಪ ಅವರ ಜೊತೆಗೊಂದು ಸಿನಿಮಾ ಮಾಡುತ್ತಿದ್ದೇನೆ. ಸಂಗೀತ ನಿರ್ದೇಶಕ ಹಂಸಲೇಖ ಅವರು ನಿರ್ದೇಶಿಸುತ್ತಿರುವ ‘ಒಕೆ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಹಿಂದೆ ‘ಲಂಕೆ’ ಎಂಬ ಸಿನಿಮಾ ಮಾಡಿದ್ದ ರಾಮ್ ಪ್ರಸಾದ್ ಅವರೊಂದಿಗೆ ‘ಡಿಟಾಕ್ಸ್’ ಎಂಬ ಸಿನಿಮಾವಿದೆ. ತಮಿಳಿನಲ್ಲಿ ಹೊಸ ನಿರ್ದೇಶಕರೊಬ್ಬರ ಜೊತೆಗೊಂದು ಸಿನಿಮಾವಿದೆ. ಇದರಲ್ಲಿ ಪೊಲೀಸ್ ಪಾತ್ರ ಮಾಡುತ್ತಿದ್ದೇನೆ. ತಮಿಳಿನ ವೆಬ್ ಸರಣಿಯೊಂದರಲ್ಲಿ ಅತಿಥಿ ಪಾತ್ರದಲ್ಲಿ ಮಾಡುತ್ತಿದ್ದೇನೆ. ತೆಲುಗಿನಿಂದಲೂ ಅವಕಾಶಗಳು ಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.