ADVERTISEMENT

ನಟ ಮನು ವಿರುದ್ಧ ಅತ್ಯಾಚಾರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಮೇ 2025, 11:33 IST
Last Updated 22 ಮೇ 2025, 11:33 IST
<div class="paragraphs"><p>ನಟ ಮಡೆನೂರು ಮನು&nbsp;&nbsp;</p></div>

ನಟ ಮಡೆನೂರು ಮನು  

   

ಬೆಂಗಳೂರು: ಸಹ ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ನಟ ಮಡೆನೂರು ಮನು ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಗುರುವಾರ ಸಂಜೆ ವಶಕ್ಕೆ ಪಡೆದುಕೊಂಡರು.

33 ವರ್ಷದ ಸಹ ನಟಿ ನೀಡಿದ ದೂರಿನ ಮೇರೆಗೆ ನಟನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 351(2), 352, 69, 89, 64(2)ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಪ್ರಕರಣ ದಾಖಲಾದ ಬಳಿಕ ಮಡೆನೂರು ಮನು ಅವರು ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದರು. ಅವರು ಇರುವ ಸ್ಥಳವನ್ನು ಪತ್ತೆಹಚ್ಚಿ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು’ ಎಂದು ಪೊಲೀಸರು ಹೇಳಿದರು.

‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ಮಡೆನೂರು ಮನು ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರವು ಶುಕ್ರವಾರ ಬಿಡುಗಡೆ ಆಗುತ್ತಿದೆ. ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲೂ ಮನು ಅಭಿನಯಿಸಿದ್ದರು.

ದೂರಿನಲ್ಲಿ ಏನಿದೆ?:

‘ಬೆಂಗಳೂರಿನ ಬಡಾವಣೆಯೊಂದರಲ್ಲಿ ಕಳೆದ ಐದು ವರ್ಷಗಳಿಂದ ವಾಸವಿದ್ದೇನೆ. ಮಡೆನೂರು ಮನು ಅವರೇ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. ಕಿರುತೆರೆ ವಾಹಿನಿಯೊಂದರಲ್ಲಿ 2018ರಲ್ಲಿ ಪ್ರಸಾರವಾಗಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಮನು ಅವರ ಪರಿಚಯವಾಗಿತ್ತು. ಇಬ್ಬರೂ ಸ್ನೇಹಿತರಾಗಿದ್ದೆವು. ಮನು ಅವರಿಗೆ ಮದುವೆ ಆಗಿ ಹೆಣ್ಣು ಮಗು ಇದೆ. 2022ರ ನವೆಂಬರ್‌ 29ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಕರೆದೊಯ್ದು ಹಾಸ್ಯ ಕಾರ್ಯಕ್ರಮ ನಡೆಸಿದ್ದರು. ಕಾರ್ಯಕ್ರಮ ಮುಕ್ತಾಯವಾದ ಮೇಲೆ ಹೋಟೆಲ್‌ನ ರೂಂನಲ್ಲಿದ್ದಾಗ ನನಗೆ ಸಂಭಾವನೆ ಕೊಡುವ ನೆಪದಲ್ಲಿ ಬಂದು ಅತ್ಯಾಚಾರ ಎಸಗಿದ್ದಾನೆ’ ಎಂದು ಸಂತ್ರಸ್ತೆ ನೀಡಿರುವ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

‘ಅದೇ ವರ್ಷದ ಡಿಸೆಂಬರ್‌ 3ರಂದು ನನ್ನ ಮನೆಗೆ ಬಂದು ವಿರೋಧದ ನಡುವೆ ತಾಳಿ ಕಟ್ಟಿದ್ದಾನೆ. ನಂತರ, ಅದೇ ಮನೆಯಲ್ಲಿ ಮನು ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ನಾನು ಗರ್ಭಿಣಿಯಾಗಿದ್ದ ವಿಷಯ ತಿಳಿದು ಗರ್ಭಪಾತ ಮಾಡಿಸಿದ್ದ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

‘ಅದಾದ ಕೆಲವು ದಿನಗಳ ಬಳಿಕ ಅತ್ಯಾಚಾರ ನಡೆಸಿ ವಿಡಿಯೊ ಮಾಡಿಕೊಂಡಿದ್ದ. ಹಲ್ಲೆ ನಡೆಸಿ, ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ’ ಎಂದು ಸಂತ್ರಸ್ತೆ ಹೇಳಿದ್ದಾರೆ.

ಹಣ ಪಡೆದುಕೊಂಡಿದ್ದ ಆರೋಪ:

‘ಮನು ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸಿದ್ದು, ಈ ಚಿತ್ರಕ್ಕೆ ಲಕ್ಷಾಂತರ ರೂಪಾಯಿ ನೀಡಿದ್ದೇನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅತ್ಯಾಚಾರ ನಡೆಸಿ, ಮದುವೆಯಾದಂತೆ ನಾಟಕವಾಡಿ, ಮೋಸ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಹ ನಟಿ ದೂರಿನಲ್ಲಿ ಒತ್ತಾಯಿಸಿದ್ದಾರೆ.

‘ಉದ್ದೇಶಪೂರ್ವಕ ದೂರು’

‘ಇದು ಉದ್ದೇಶಪೂರ್ವಕ ದೂರು ಎಂದು ಗೊತ್ತಾಗುತ್ತಿದೆ. ಮೇ 23ರಂದು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಬಿಡುಗಡೆ ಇರುವಾಗ ಎಫ್‌ಐಆರ್‌ ದಾಖಲಿಸುವ ಅವಶ್ಯಕತೆ ಇರಲಿಲ್ಲ. ತಾನು ಸುಮ್ಮನಿದ್ದರೂ ಬೇರೆಯವರು ಬಿಡುತ್ತಿಲ್ಲ ಈ ರೀತಿ ಮಾಡು ಎಂದು ಹೇಳುತ್ತಿದ್ದಾರೆ ಎಂದು ಆಕೆ ಹೇಳಿದ್ದಾಳೆ. ಅವರು ಯಾರು ಎಂದು ನನ್ನ ಬಳಿ ಹೇಳಿದ್ದಾಳೆ. ಇಬ್ಬರು ಹೀರೊಗಳು ಮತ್ತು ಒಬ್ಬ ಲೇಡಿ ಡಾನ್‌ ಸೇರಿ ಹನ್ನೆರಡು ಜನ ನನ್ನ ಸಾವು ಬಯಸುತ್ತಿದ್ದರು. ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡಿದ್ದೇನೆ. ಎಲ್ಲ ಸಾಕ್ಷ್ಯವನ್ನು ಮುಂದಿಡುತ್ತೇನೆ. ನನ್ನ ಸಿನಿಮಾಕ್ಕೆ ಮೋಸ ಆಗಬಾರದು. ನಿರ್ಮಾಪಕರು ನಿರ್ದೇಶಕರಿಗೆ ಮೋಸ ಆಗಬಾರದು. ಕಾನೂನು ರೀತಿ ನಾನು ಸಾಕ್ಷ್ಯಗಳನ್ನು ಬಹಿರಂಗಪಡಿಸುತ್ತೇನೆ’ ಎಂದು ವಿಡಿಯೊದಲ್ಲಿ ಮಡೆನೂರು ಮನು ಹೇಳಿದ್ದಾರೆ.

‘ಕೆಟ್ಟ ದೃಷ್ಟಿಯಲ್ಲಿ ನೋಡುವುದಿಲ್ಲ ಎಂಬ ನಂಬಿಕೆ ಇತ್ತು’
‘ಒಂದೇ ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ಇಬ್ಬರೂ ಕೆಲಸ ಮಾಡಿದ್ದೇವೆ. ಮನು ಆಪ್ತ ಸ್ನೇಹಿತ ಆಗಿದ್ದ. ಕಾರ್ಯಕ್ರಮ ಮುಗಿದ ಮೇಲೆ ಮಡೆನೂರು ಮನು ಹಲವು ದಿನ ರಾತ್ರಿ ಸಮಯದಲ್ಲಿ ಮನೆಗೆ ಬಿಟ್ಟು ಹೋಗಿದ್ದ. ಕೆಟ್ಟ ದೃಷ್ಟಿಯಲ್ಲಿ ನೋಡುವುದಿಲ್ಲ ಎಂಬ ನಂಬಿಕೆ ಇತ್ತು. ಯಾವಾಗ ತಲೆಯಲ್ಲಿ ಕೆಟ್ಟ ಆಲೋಚನೆ ಬಂತೋ ಗೊತ್ತಿಲ್ಲ’ ಎಂದು ಸಂತ್ರಸ್ತೆ ಹೇಳಿದರು.
ವಾಟ್ಸ್‌ಆ್ಯಪ್‌ ಚಾಟ್‌ ಪರಿಶೀಲನೆ
‘ನೀನು ಏನೇ ಕೋಪ ಮಾಡಿಕೊಂಡರೂ ನೀನು ನಮ್ಮ ಹುಡುಗೀನೇ. ನನ್ನ ಜೀವ ಇರೋವರೆಗೂ ನಾನು ನಿನ್ನ ಕೈ ಬಿಡಲ್ಲ... ಕೈ ಬಿಡಲ್ಲ... ಪರಿಸ್ಥಿತಿ ಸ್ವಲ್ಪ ಕೆಟ್ಟಿದೆ. ನಾನು ಸ್ವಲ್ಪ ನಿಂಗೆ ಟೈಮ್ ಕೊಡೋಕೆ ಆಗ್ತಿಲ್ಲ. ಸ್ವಲ್ಪ ಎಲ್ಲ ಸರಿ ಹೋಗುತ್ತೆ. ಐ ಲವ್ ಯು.. ಮಿಸ್ ಯೂ..’ ಎಂದು ಮಡೆನೂರು ಮನು ಅವರು ವಾಟ್ಸ್‌ಆ್ಯಪ್‌ನಲ್ಲಿ ಸಹ ನಟಿಗೆ ಕಳುಹಿಸಿದ್ದರು ಎನ್ನಲಾದ ಸಂದೇಶವನ್ನು ಪರಿಶೀಲನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.