ADVERTISEMENT

ಪವನ್ ಕಲ್ಯಾಣ್‌ಗೆ ‘ಪವರ್‌ಲೆಸ್‌ ಪಿಕೆ’ ಎಂದ ವೈಎಸ್‌ಆರ್ ಕಾಂಗ್ರೆಸ್: ಏನಿದು ಜಗಳ?

ಆನ್‌ಲೈನ್ ಸಿನಿಮಾ ಟಿಕೆಟ್ ಬಗ್ಗೆ ಟಾಲಿವುಡ್, ಜಗನ್ ಸರ್ಕಾರದ ನಡುವೆ ಜಗಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2021, 8:43 IST
Last Updated 26 ಸೆಪ್ಟೆಂಬರ್ 2021, 8:43 IST
ಪವನ್ ಕಲ್ಯಾಣ್ ಹಾಗೂ ಜಗನ್ಮೋಹನ್ ರೆಡ್ಡಿ
ಪವನ್ ಕಲ್ಯಾಣ್ ಹಾಗೂ ಜಗನ್ಮೋಹನ್ ರೆಡ್ಡಿ   

ಬೆಂಗಳೂರು: ನಟ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಹಾಗೂ ಆಂಧ್ರಪ್ರದೇಶ ಸರ್ಕಾರದ ನಡುವೆ ದೊಡ್ಡ ಜಗಳ ನಡೆಯುತ್ತಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರು ಜನಸಾಮಾನ್ಯರಿಗೆ ಅನುಕೂಲ ಆಗುತ್ತದೆ ಎಂದು ಸಿನಿಮಾ ಟಿಕೆಟ್‌ಗಳನ್ನು ಸರ್ಕಾರದ ಅಧಿಕೃತ ವೆಬ್‌ಸೈಟ್ ಮೂಲಕವೇ ಮಾರಾಟ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.

ಇದರಿಂದ ವಿಚಲಿತವಾಗಿದ್ದ ಟಾಲಿವುಡ್, ‘ಇದು ನಿರ್ಮಾಪಕರನ್ನು ಮುಳುಗಿಸುವ ಕ್ರಮ‘ ಎಂದು ಮಾತನಾಡಿಕೊಂಡಿದ್ದರು. ಶುಕ್ರವಾರ ಸಂಜೆ ನಡೆದ ನಟ ಸಾಯಿ ಧರ್ಮ್ ತೇಜ್ ಅವರ ಅಭಿನಯದ ‘ರಿಪಬ್ಲಿಕ್‘ ಸಿನಿಮಾದ ಫ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಪವನ್ ಕಲ್ಯಾಣ್, ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ADVERTISEMENT

‘ಇದು ವೈಎಸ್‌ಆರ್‌ ಕಾಂಗ್ರೆಸ್ ರಿಪಬ್ಲಿಕ್ ಅಲ್ಲ, ಇದು ಇಂಡಿಯನ್ ರಿಪಬ್ಲಿಕ್‘ ಎಂದು ಗುಡುಗಿ, ಆಂಧ್ರ ಸರ್ಕಾರ ಸಿನಿಮಾ ಟಿಕೆಟ್‌ಗಳನ್ನು ತಾನೇ ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಅನೇಕ ನಿರ್ಮಾಪಕರು, ನಟ ನಟಿಯರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ರಿಪಬ್ಲಿಕ್ ಸಿನಿಮಾ ನಿರ್ದೇಶಕ ದೇವ್ ಕಟ್ಟಾ ಅವರು ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದರು.

ಇದಕ್ಕೆ ತಿರುಗಿ ಬಿದ್ದಿರುವವೈಎಸ್‌ಆರ್‌ ಕಾಂಗ್ರೆಸ್ ಪಾರ್ಟಿ ಸಚಿವರು, ಶಾಸಕರು ಪವನ್ ಕಲ್ಯಾಣ್ ಮೇಲೆ ಮಾತಿನ ದಾಳಿ ನಡೆಸಿದ್ದಾರೆ. ಅದರಲ್ಲೂ ಟ್ವಿಟರ್‌ನಲ್ಲಿ #PowerLessPK ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.

ಸಚಿವ ವೆಲ್ಲಂಪಳ್ಳಿ ಅವರು ಈ ಬಗ್ಗೆ ಮಾತನಾಡಿ, ‘ನಟ ಪವನ್ ಕಲ್ಯಾಣ್ ಒಬ್ಬ ಪೇಮೆಂಟ್ ಗಿರಾಕಿ, ತಾವು ಸಿನಿಮಾದಲ್ಲಿ ಬೇರೆಯವರು ಬರೆದು ಕೊಟ್ಟ ಡೈಲಾಗ್ ಹೊಡೆದು ಸ್ಟಾರ್ ಎನಿಸಿಕೊಂಡಿದ್ದು ಬಿಟ್ಟರೇ ಅವರ ಬಳಿ ಯಾವುದೇ ಪವರ್ ಇಲ್ಲ. ಜನಸೇನಾ ಪಾರ್ಟಿ ಮೂಲಕ ಅವರ ಅಭಿಮಾನಿಗಳು ಅವರಿಗೆ ಏಕೆ ಪವರ್ ನೀಡುತ್ತಿಲ್ಲ‘ ಎಂದು ಕಿಚಾಯಿಸಿದ್ದಾರೆ.

‘ನಮ್ಮ ಸರ್ಕಾರ ಸಿನಿಮಾ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ನೀಡುತ್ತಿರುವುದು ಜನಸಾಮಾನ್ಯರಿಗೆ ಅನುಕೂಲ ಆಗಲಿ ಎನ್ನುವ ದೃಷ್ಟಿಯಿಂದ‘ ಎಂದು ಅವರು ಹೇಳಿದ್ದಾರೆ.

ಆಂಧ್ರ ಸರ್ಕಾರದ ಈ ಯೋಜನೆ ವಿರೋಧಿಸಿರುವ ಟಾಲಿವುಡ್, ‘ಆದಾಯ ಕೊರತೆಯಿಂದ ನಲುಗುತ್ತಿರುವ ಜಗನ್ ಸರ್ಕಾರ ಈ ಮೂಲಕ ಆದಾಯ ಗಳಿಸಲು ನೋಡುತ್ತಿದೆ‘ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.