ADVERTISEMENT

ಶಿವರಾಮಣ್ಣ ಎಂದರೆ ಜ್ಞಾಪಕಕ್ಕೆ ಬರುವುದು ಶಬರಿಮಲೆ: ಶಿವರಾಜ್‌ಕುಮಾರ್‌

ಚಿತ್ರರಂಗದ ಗುರುಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 17:09 IST
Last Updated 4 ಡಿಸೆಂಬರ್ 2021, 17:09 IST
ಶಬರಿಮಲೆಗೆ ಹೊರಟ ಶಿವರಾಂ ಅವರೊಂದಿಗೆ ನಟ ಪ್ರೇಮ್‌
ಶಬರಿಮಲೆಗೆ ಹೊರಟ ಶಿವರಾಂ ಅವರೊಂದಿಗೆ ನಟ ಪ್ರೇಮ್‌   

ಬೆಂಗಳೂರು: ಶಿವರಾಂ ಅವರು ಚಿತ್ರರಂಗದ ಕಲಾವಿದರಿಗೆ ಹೇಗೆ ಹಿರಿಯ ಮಾರ್ಗದರ್ಶಕರಾಗಿದ್ದರೋ ಅದೇ ರೀತಿ ಶಬರಿಮಲೆಗೆ ಹೊರಟವರಿಗೆ ಗುರುಸ್ವಾಮಿಯಾಗಿದ್ದರು.

ಶಿವರಾಂ ಅವರು ಅಯ್ಯಪ್ಪನಪರಮ ಭಕ್ತ. ವರ್ಷಕ್ಕೆ ಕನಿಷ್ಠ ಮೂರು ಬಾರಿಯಾದರೂ ಅಯ್ಯಪ್ಪನ ಸನ್ನಿಧಿಗೆ ಹೋಗಿಬರುತ್ತಿದ್ದರು. ಡಾ.ರಾಜ್‌ಕುಮಾರ್‌ ಅವರ ಜೊತೆಗೂ ಶಬರಿಮಲೆ ಏರಿದ್ದರು. ಪ್ರಾಯ 83 ಆಗಿದ್ದರೂ ಡಿಸೆಂಬರ್‌ ಎರಡನೇ ವಾರದಲ್ಲಿ ಶಬರಿಮಲೆಗೆ ಹೊರಡಲು ಸಿದ್ಧತೆ ನಡೆಸಿದ್ದರು. ಆದರೆ ವಿಧಿಯಾಟವೇ ಬೇರೆಯದಾಗಿತ್ತು.

‘ಶಿವರಾಮಣ್ಣ ಎಂದರೆ ತಕ್ಷಣ ನೆನಪಿಗೆ ಬರುವುದು ಶಬರಿಮಲೆ’ ಹೀಗೆಂದು ಮಾತು ಆರಂಭಿಸಿದ ನಟ ಶಿವರಾಜ್‌ಕುಮಾರ್‌, ‘ನಮ್ಮನ್ನು ಶಬರಿಮಲೆಗೆ ಕರೆದುಕೊಂಡು ಹೋಗುತ್ತಿದ್ದ ರೀತಿ ಇನ್ನೂ ನೆನಪಿದೆ. ಶಿವರಾಮಣ್ಣನನ್ನೇ ನಾವು ಗುರುಸ್ವಾಮಿ ಆಗಿ ಸ್ವೀಕರಿಸಿದ್ದೆವು. ಅವರಲ್ಲಿ ಆ ಚೈತನ್ಯವಿತ್ತು’ ಎಂದು ನೆನೆದರು.

ADVERTISEMENT

‘81ನೇ ವರ್ಷದಲ್ಲಿ ಎರಡೇ ಗಂಟೆಯಲ್ಲಿ ಶಬರಿಮಲೆ ಬೆಟ್ಟವನ್ನು ಅನಾಯಾಸವಾಗಿ ಏರಿದ್ದರು. ಇದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ರಾಜ್‌ ಕುಟುಂಬ ಅಂದರೆ ಅವರಿಗೆ ಪ್ರೀತಿ ಅಭಿಮಾನ.ಹತ್ತಿರವಾದರು ದೂರವಾಗುತ್ತಿದ್ದರೆ ನೋವು ತಡೆದುಕೊಳ್ಳಲು ಹೇಗೆ ಸಾಧ್ಯ? ಶಿವರಾಮಣ್ಣ ನೀವಿಲ್ಲದಿದ್ದರೂ ನಿಮ್ಮ ನೆನಪು ಸದಾ ನಮ್ಮ ಜೊತೆ ಇರಲಿದೆ’ ಎಂದರು.

ಚಿತ್ರರಂಗದ ಪ್ರಮುಖರು ಶನಿವಾರ ಬನಶಂಕರಿಯಲ್ಲಿರುವ ಶಿವರಾಂ ಅವರ ಮನೆಯಲ್ಲಿ ಪಾರ್ಥಿವ ಶರೀರದ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.