
ನವದೆಹಲಿ: ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ತಂದೆ ಸುನಿಲ್ ಮಲ್ಹೋತ್ರಾ ನಿಧನರಾಗಿದ್ದಾರೆ.
ತಂದೆ ಸಾವಿಗೆ ಕಂಬನಿ ಮಿಡಿದಿರುವ ನಟ ಸಿದ್ಧಾರ್ಥ್, ಸಾಮಾಜಿಕ ಮಾಧ್ಯಮ ಇನ್ಸ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರು ಪ್ರಾಮಾಣಿಕ, ನಿಷ್ಠಾವಂತ ಮತ್ತು ಸಂಸ್ಕಾರವಂತ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.
'ತಮ್ಮ ಮೌಲ್ಯಗಳಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಕಠಿಣತೆಯಿಲ್ಲದ ಶಿಸ್ತು, ಅಹಂಕಾರವಿಲ್ಲದ ಶಕ್ತಿ ಅವರದಾಗಿತ್ತು. ಜೀವನ ಅವರನ್ನು ಅತೀವವಾಗಿ ಪರೀಕ್ಷಿಸಿದಾಗಲೂ ಅವರು ಎದೆಗುಂದಿರಲಿಲ್ಲ' ಎಂದು ಸಿದ್ಧಾರ್ಥ್ ಬರೆದುಕೊಂಡಿದ್ದಾರೆ.
'ವಿಶೇಷವಾಗಿ ಅನಾರೋಗ್ಯದ ಸಮಯದಲ್ಲಿ ತಮ್ಮ ತಂದೆಯ ಧೈರ್ಯವನ್ನು ಸಿದ್ಧಾರ್ಥ್ ಶ್ಲಾಘಿಸಿದ್ದಾರೆ. ಅವರು ಎಂದಿಗೂ ಆತ್ಮ ವಿಶ್ವಾಸ ಕಳೆದುಕೊಂಡಿರಲಿಲ್ಲ' ಎಂದು ಹೇಳಿದ್ದಾರೆ.
'ಮರ್ಚೆಂಟ್ ನೇವಿಯ ಕ್ಯಾಪ್ಟನ್ ಆಗಿದ್ದ ಅವರು, ಸಮುದ್ರವನ್ನೇ ಆಳುವುದರಿಂದ ಹಿಡಿದು, ಆರೋಗ್ಯ ಸಮಸ್ಯೆಯನ್ವು ಶಾಂತಯುತವಾಗಿ ಮತ್ತು ಧೈರ್ಯದಿಂದ ಎದುರಿಸುವವರೆಗೆ ಎಂದಿಗೂ ರಾಜಿ ಮಾಡಿಕೊಂಡಿರಲಿಲ್ಲ. ಪಾರ್ಶ್ವವಾಯು ಅವರನ್ನು ವೀಲ್‌ಚೇರ್‌ಗೆ ಸೀಮಿತಗೊಳಿಸಿದಾಗಲೂ, ಅವರ ಆತ್ಮಸ್ಥೈರ್ಯ ಅಚಲವಾಗಿತ್ತು' ಎಂದು ಸಿದ್ಧಾರ್ಥ್ ಹೇಳಿದ್ದಾರೆ.
ಅಪ್ಪಾ, ನಿಮ್ಮ ಪ್ರಾಮಾಣಿಕತೆಯೇ ನನಗೆ ಆಸ್ತಿ. ನಿಮ್ಮ ಶಕ್ತಿ ಪ್ರತಿದಿನ ನನಗೆ ಮಾರ್ಗದರ್ಶನ ನೀಡುತ್ತದೆ. ನಿಮ್ಮ ಅಚಲವಾದ ನಿಲುವು ಇಂದಿಗೂ ಈ ಕುಟುಂಬವನ್ನು ಒಂದುಗೂಡಿಸಿಟ್ಟಿದೆ. ನೀವು ನಿದ್ರೆಯಲ್ಲೇ ಶಾಂತವಾಗಿ ನಮ್ಮನ್ನು ಅಗಲಿದ್ದೀರಿ, ಆದರೆ ನೀವು ಬಿಟ್ಟುಹೋದ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ಇಂದು ನಾನೇನಾಗಿದ್ದೇನೋ ಅದು ನಿಮ್ಮಿಂದಾಗಿ. ನಿಮ್ಮ ಹೆಸರು, ನೀವು ಜೀವನದಲ್ಲಿ ಅಳವಡಿಸಿಕೊಂಡಿರುವ ಮೌಲ್ಯಗಳನ್ನು ನಾನು ಯಾವಾಗಲೂ ಮುಂದುವರಿಸಿಕೊಂಡು ಹೋಗುತ್ತೇನೆ. ಲವ್ ಯು ಡ್ಯಾಡ್ ಎಂದು ಬರೆದುಕೊಂಡಿದ್ದಾರೆ.
ಆದಾಗ್ಯೂ ಸುನಿಲ್ ಮಲ್ಹೋತ್ರಾ ಅವರ ಸಾವಿಗೆ ನಿಖರ ಕಾರಣ ಅಥವಾ ಯಾವಾಗ ನಿಧನರಾಗಿದ್ದಾರೆ ಎಂಬ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.