ADVERTISEMENT

ವೈರಲ್ ಆಯ್ತು ‘ರಿಯಲ್‌ಸ್ಟಾರ್‘‌ನ‌ ಸಾವಯವ ತರಕಾರಿ ಕೃಷಿ !

ಉಪೇಂದ್ರ ಈಗ ಸಾವಯವ ಕೃಷಿಕ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 7:01 IST
Last Updated 14 ಜೂನ್ 2020, 7:01 IST
ಉಪೇಂದ್ರ ತಾವು ಬೆಳೆದ ತರಕಾರಿ, ಹೂವನ್ನು ತೋರಿಸುತ್ತಿರುವ ನಟ ಉಪೇಂದ್ರ
ಉಪೇಂದ್ರ ತಾವು ಬೆಳೆದ ತರಕಾರಿ, ಹೂವನ್ನು ತೋರಿಸುತ್ತಿರುವ ನಟ ಉಪೇಂದ್ರ   

ನಟ, ನಿರ್ದೇಶಕ ಉಪೇಂದ್ರ ವಿಭಿನ್ನ ಸಿನಿಮಾಗಳ ನಿರ್ದೇಶಕರೆಂದೇ ಪ್ರಸಿದ್ಧಿ. ‘ಶ್!‘, ‘ಓಂ‘ ನಂತಹ ವಿಶಿಷ್ಟ ಸಿನಿಮಾಗಳನ್ನು ಕನ್ನಡ ಚಿತ್ರರಸಿಕರ ಮಡಿಲಿಗೆ ಹಾಕಿ, ಭೇಷ್ ಎನ್ನಿಸಿಕೊಂಡವರು. ನಂತರ ಸಮಾಜದಲ್ಲಿ ಬದಲಾವಣೆ ತರಬೇಕೆಂದು ಪ್ರಜಾಕೀಯ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೂ ಎಂಟ್ರಿಕೊಟ್ಟು ಸುದ್ದಿಯಾದರು.

‘ಉಪ್ಪಿಗಿಂತ ರುಚಿ ಬೇರೆ ಇಲ್ಲ...’ ಎಂದು ಹಾಡಿದ್ದ ಉಪೇಂದ್ರ ಈಗ ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು’ ಎಂದು ಗುನುಗುತ್ತಿದ್ದಾರೆ. ರೀಲ್‌ನಲ್ಲಿ ಅಲ್ಲ, ರಿಯಲ್‌ಲೈಫ್‌ನಲ್ಲಿ‌ ‘ವಿಷಮುಕ್ತ' ತರಕಾರಿ ಬೆಳೆದ ಸುದ್ದಿಯಾಗಿದ್ದಾರೆ.

ಎರಡೂವರೆ ತಿಂಗಳ ಲಾಕ್‌ಡೌನ್‌ ಅವಧಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ, ಹಣ್ಣುಗಳನ್ನು ವಿಡಿಯೊ ಮಾಡಿ, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಈ ವಿಡಿಯೊಕಳೆದ ಎರಡು ದಿನಗಳಿಂದ ಫೇಸ್‌ಬುಕ್‌, ಟ್ವಿಟರ್ ಸೇರಿದಂತೆ ಎಲ್ಲ ಜಾಲತಾಣಗಳಲ್ಲೂ ವೈರಲ್ ಆಗಿದೆ.

ADVERTISEMENT

ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ತೋಟ ಸೇರಿದ್ದ ಉಪೇಂದ್ರ, ತರಕಾರಿ ಕೃಷಿ ಮಾಡಲು ಶುರು ಮಾಡಿದರು.ಇವರು ಕೃಷಿ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಜೊತೆಗೆ ಹಲವಾರು ಜನರಿಗೆ ಸ್ಫೂರ್ತಿ ತಂದಿವೆ.‌

ಅಂದು ನಾಟಿ ಮಾಡಿದ ತರಕಾರಿ, ಹೂವಿನ ಸಸಿಗಳು ಎರಡು ತಿಂಗಳ ನಂತರ ಫಸಲು ಕೊಟ್ಟಿವೆ. ಈಗ ಈ ತರಕಾರಿಗಳನ್ನು ಬೆಳೆದ ವಿಧಾನ ವಿವರಿಸುವ ವಿಡಿಯೊವೊಂದನ್ನು ಉಪೇಂದ್ರ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೊದಲ್ಲಿ ಉಪೇಂದ್ರ ತೋಟದಲ್ಲಿ ತಾವು ಬೆಳೆದಿರುವ ಬದನೆಕಾಯಿ, ಅವರೆ, ಸೌತೆಕಾಯಿ, ಚಂಡುಹೂವು ತೋರಿಸುತ್ತಾ, ರಾಸಾಯನಿಕ ರಹಿತ ತರಕಾರಿ ಬೆಳೆದಿರುವ ಕುರಿತು ಮಾತನಾಡಿದ್ದಾರೆ.

‘ನೋಡಿ, ಇದೆಲ್ಲ ಎರಡು ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ಬೆಳೆದಿರುವ ತರಕಾರಿಗಳು. ಇವುಗಳಿಗೆ ಒಂಚೂರು ಕ್ರಿಮಿನಾಶಕ, ರಸಗೊಬ್ಬರ ಹಾಕಿಲ್ಲ. ಕೇವಲ ದನದ ಗೊಬ್ಬರ ಮತ್ತು ನೀರು ಹಾಕಿ ಬೆಳೆಸಿದ್ದೇವೆ. ನೋಡಿ, ಎಷ್ಟು ತಾಜಾ ಇವೆ..‘ ಎಂದು ಉಪೇಂದ್ರ ಅವರು ತರಕಾರಿಗಳನ್ನು ಹಿಡಿದು ವಿವರಣೆ ನೀಡುವ ದೃಶ್ಯವಿದೆ.

‘ಈ ತರಕಾರಿಗಳಿಗೇನೂ ಹುಳ ಬೀಳಲ್ಲ ಅಂತ ಅಲ್ಲ. ಎಲ್ಲೋ, ಶೇ 5ರಷ್ಟು ಹುಳ ಬಿದ್ದಿರಬಹುದು. ಆದರೆ, ಈ ಭೂಮಿ ಮೇಲೆ ಎಲ್ಲರೂ ಬದುಕಬೇಕಲ್ಲವಾ? ಪ್ರಕೃತಿಯಲ್ಲಿ ಹುಳು–ಹುಪ್ಪಟ್ಟೆ, ಚಿಟ್ಟೆ ಎಲ್ಲವೂ ನಮ್ಮ ಜತೆ ಬದುಕಬೇಕಲ್ಲವಾ? ಇಷ್ಟು ಸಣ್ಣ ಸಮಸ್ಯೆಗಾಗಿ, ಅಲ್ಪ ಇಳುವರಿಗಾಗಿ ವಿಪರೀತ ಕ್ರಿಮಿನಾಶಕ ಹೊಡೆದು ಭೂಮಿ ಹಾಳು ಮಾಡುತ್ತಿದ್ದೇವೆ. ನೋಡಿ, ಕ್ರಿಮಿನಾಶಕ – ರಸಗೊಬ್ಬರ ಇಲ್ಲದೆಯೂ ಚೆನ್ನಾಗಿ ತರಕಾರಿ ಬೆಳೆಯಬಹುದು ಅಂತ ತೋರಿಸೋದಕ್ಕೆ, ಈ ವಿಡಿಯೊ ಹಾಕಿದ್ದೇನೆ. ಇಂಥ ತರಕಾರಿ ತಿನ್ನೋದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ‘ ಎನ್ನುತ್ತಾ ಉಪೇಂದ್ರ, ತಾವು ಬೆಳೆದಿರುವ ತರಕಾರಿ ತಾಕನ್ನು ವಿಡಿಯೊದಲ್ಲಿ ವಿವರಿಸುವ ದೃಶ್ಯವಿದೆ.

ಒಟ್ಟಾರೆ ಸಿನಿಮಾ ಕ್ಷೇತ್ರದ ರಿಯಲ್‌ ನಟ ಉಪೇಂದ್ರ, ಈಗ ಕೃಷಿ ಕ್ಷೇತ್ರಕ್ಕೂ ಜೈ ಎಂದಿದ್ದಾರೆ. ವಿಷಮುಕ್ತ ಆಹಾರ ಬೆಳೆಸುವುದಕ್ಕಾಗಿ ರೈತರನ್ನ ಉತ್ತೇಜಿಸಲು ಹೊರಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.