ADVERTISEMENT

ದಳಪತಿ ವಿಜಯ್‌ ’ಬೀಸ್ಟ್‌‘ ಹಾಗೂ ಕೆಜಿಎಫ್ ಚಾಪ್ಟರ್ 2 ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 11:50 IST
Last Updated 30 ಮಾರ್ಚ್ 2022, 11:50 IST
ಬೀಸ್ಟ್‌
ಬೀಸ್ಟ್‌   

ಚೆನ್ನೈ: ತಮಿಳು ನಟ ದಳಪತಿ ವಿಜಯ್‌ ಅವರ ’ಬೀಸ್ಟ್‌‘ ಸಿನಿಮಾ ಬಗ್ಗೆ ಹೊಸ ಮಾಹಿತಿ ಹೊರ ಬಿದ್ದಿದೆ. ’ಬೀಸ್ಟ್‌‘ ನ ಟೀಸರ್ ಇಂದು ಸಂಜೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಟೀಸರ್ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೆ,ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರು 'ನಾಳೆ..' ಎಂದಷ್ಟೇ ಟ್ವಿಟರ್ ಪೋಸ್ಟ್ ನಿನ್ನೆ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಟೀಸರ್ ಬಿಡುಗಡೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ. ಇದಕ್ಕಾಗಿ ವಿಜಯ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಬೀಸ್ಟ್‌ ಸಿನಿಮಾದ ಪೋಸ್ಟರ್‌ ನೋಡಿದರೆ ಇದೊಂದು ಮಾಸ್‌ ಸಿನಿಮಾ ಎಂಬುದು ಗೊತ್ತಾಗುತ್ತದೆ. ಸನ್‌ ಪಿಕ್ಚರ್‌ ನಿರ್ಮಾಣದ ಈ ಚಿತ್ರಕ್ಕೆ ನೆಲ್ಸನ್‌ ದಿಲೀಪ್‌ಕುಮಾರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪೂಜಾ ಹೆಗ್ಡೆ ಮತ್ತು ವಿಜಯ್‌ ಜೊತೆಯಾಗಿ ನಟಿಸುತ್ತಿದ್ದಾರೆ.

ADVERTISEMENT

ಇನ್ನು ಬೀಸ್ಟ್ ಸಿನಿಮಾ ಕೂಡ ಏಪ್ರಿಲ್ 13 ರಂದು ಬಿಡುಗಡೆಯಾಗುತ್ತಿದೆ. ಒಂದು ದಿನ ತಡವಾಗಿ ಅಂದರೆ ಏಪ್ರಿಲ್ 14 ರಂದು ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಲಿದೆ. ಬಾಕ್ಸ್‌ ಆಫಿಸ್‌ನಲ್ಲಿ ಎರಡೂ ಚಿತ್ರಗಳಿಗೆ ಘರ್ಷಣೆ ಏರ್ಪಡಲಿದೆ ಎಂದು ಸಿನಿಮಾ ತಜ್ಞರು ಹೇಳುತ್ತಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಟ್ರೈಲರ್ ಬಿಡುಗಡೆಯಾದ ದಿನ ಬೀಸ್ಟ್ ನಿರ್ದೇಶಕ ನೆಲ್ಸನ್ ಟ್ರೈಲರ್‌ಗೆ ಶುಭ ಕೋರಿದ್ದರು. ತಾವು ಚಿತ್ರ ನೋಡಲು ಕಾತರರಾಗಿದ್ದೇವೆ ಎಂದಿದ್ದರು. ಇನ್ನು ನಟ ಯಶ್ ಕೂಡ ಬೀಸ್ಟ್‌ ಸಿನಿಮಾಕ್ಕೆ ಶುಭಾಶಯ ಕೋರಿದ್ದರು.

ಕೆಜಿಎಫ್ ಚಾಪ್ಟರ್ 2 ನಿರ್ದೇಶಕ ನೆಲ್ಸನ್ ಅವರಿಗೆ ಶುಭಾಶಯ ಹೇಳಿದ್ದು, ಬೀಸ್ಟ್‌ ಚಿತ್ರ ವೀಕ್ಷಿಸುವುದಾಗಿ ಹೇಳಿದ್ದಾರೆ. ಒಟ್ಟಾರೆ ಎರಡು ದೊಡ್ಡ ಚಿತ್ರಗಳು ಹಿಂದೆ ಮುಂದೆ ಬಿಡುಗಡೆಯಾಗುತ್ತಿರುವುದು ಯಾವ ಚಿತ್ರಕ್ಕೆ ಹೊಡೆತ ಬೀಳಲಿದೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.