ADVERTISEMENT

ಚಿತ್ರನಿರ್ಮಾಣಕ್ಕೂ ಸೈ ಎಂದ ನಟರು

ಪೃಥ್ವಿರಾಜ್ ಎಂ ಎಚ್
Published 3 ನವೆಂಬರ್ 2019, 19:45 IST
Last Updated 3 ನವೆಂಬರ್ 2019, 19:45 IST
   

ಬೇರೊಬ್ಬರ ನಿರ್ದೇಶನ, ಬೇರೊಬ್ಬರ ನಿರ್ಮಾಣ, ನಿರ್ದೇಶಕ ಹೇಳಿದಂತೆಯೇ ನಟಿಸಬೇಕು. ಸೂಚಿಸಿದಂತೆಯೇ ಕುಣಿಯಬೇಕು. ಆದರೆ ಭಿನ್ನ ಎನಿಸುವಂತಹ ಪ್ರಯೋಗಾತ್ಮಕ ಪಾತ್ರಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸೆ ಹಲವು ನಟರಲ್ಲಿ ತುಡಿಯುತ್ತಿರುತ್ತದೆ. ಇಂತಹ ಅಭಿರುಚಿಗಳೇ ಅಭಿರುಚಿಗಳೇ ಅವರನ್ನು ನಿರ್ಮಾಪಕರನ್ನಾಗಿ ಮಾಡುತ್ತಿವೆ. ಕೆಲವು ಖ್ಯಾತ ನಾಯಕ ನಟರು ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಗಳನ್ನು ಆರಂಭಿಸಿ ಹೊಸರಬರಿಗೆ ಅವಕಾಶ ನೀಡುತ್ತಿದ್ದಾರೆ. ಈ ಕುರಿತು ಪೃಥ್ವಿರಾಜ್‌ ಮಾಹಿತಿ ನೀಡಿದ್ದಾರೆ

ಕಿಂಗ್ ಆಫ್ ದಿ ಹಿಲ್‌

ಅರ್ಜುನ್‌ ರೆಡ್ಡಿ ಚಿತ್ರದ ಮೂಲಕ ಖ್ಯಾತಿ ಗಳಿಸಿದ ವಿಜಯ್‌ ದೇವರಕೊಂಡ, ತಮ್ಮ ಹೆಸರಿನ ಇಂಗ್ಲಿಷ್‌ ಅರ್ಥ ನೀಡುವ ಕಿಂಗ್ ಆಫ್‌ ದಿ ಹಿಲ್‌ ಹೆಸರನ್ನೇ ತಮ್ಮ ಚಿತ್ರ ನಿರ್ಮಾಣ ಸಂಸ್ಥೆಗೆ ಶೀರ್ಷಿಕೆ ಮಾಡಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾದ ‘ನೋಟಾ’ ಚಿತ್ರದ ನಿರ್ಮಾಣದಲ್ಲೂ ಈ ಸಂಸ್ಥೆ ಕೆಲಸ ಮಾಡಿತ್ತು.

ADVERTISEMENT

ಈ ಸಂಸ್ಥೆಯ ಮೂಲಕ ವಿಜಯ್‌ ಅವರು ‘ಮೀತೊ ಮಾತ್ರಾಮೇ ಚೆಬುತಾ’ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದು, ಸಮೀರ್‌ ಎಂಬ ಹೊಸ ನಿರ್ದೇಶಕನನ್ನು ಪರಿಚಯಿಸುತ್ತಿದ್ದಾರೆ. ‘ಪೆಳ್ಳಿ ಚೂಪುಲು’ ಚಿತ್ರದಲ್ಲಿ ವಿಜಯ್‌ ಅವರಿಗೆ ನಾಯಕ ನಟನ ಪಾತ್ರ ನೀಡಿ ಪ್ರೋತ್ಸಾಹಿಸಿದ ನಿರ್ದೇಶಕ ತರುಣ್ ಭಾಸ್ಕರ್ ಅವರನ್ನು ಈ ಚಿತ್ರದಲ್ಲಿ ನಾಯಕ ನಟನಾಗಿ ವಿಜಯ್ ತೋರಿಸುತ್ತಿರುವುದು ವಿಶೇಷ.

ನಾನಿ ವಾಲ್‌ಪೋಸ್ಟರ್‌

ಚಿತ್ರರಂಗದಲ್ಲಿ ಅವಕಾಶಗಳಿಗಾಗಿ ಅಲೆದ ದಿನಗಳು ಇನ್ನೂ ನೆನಪಿವೆ. ಹೈದಾರಾಬಾದ್‌ನ ಸತ್ಯಂ ಥಿಯೇಟರ್ ಮುಂದೆ ನಿಂತು ಅಲ್ಲಿದ್ದ ಸಿನಿಮಾ ಪೋಸ್ಟರ್‌ಗಳನ್ನು ಹಲವು ಬಾರಿ ಗಮನಿಸುತ್ತಿದ್ದೆ. ಹೀಗಾಗಿ ಸಿನಿಮಾ ಪೋಸ್ಟರ್‌ಗಳೆಂದರೆ ನನಗೆ ಎಲ್ಲಿಲ್ಲದ ಮೋಜು ಎಂದು ಹೇಳುವ ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ, ತಮ್ಮ ನಿರ್ಮಾಣ ಸಂಸ್ಥೆಗೆ ‘ವಾಲ್‌ಪೋಸ್ಟರ್‌ ಸಿನಿಮಾ’ ಎಂದು ಹೆಸರಿಟ್ಟಿದ್ದಾರೆ.

‘ಯೂಟ್ಯೂಬ್, ಫೇಸ್‌ಬುಕ್‌, ಟ್ವಿಟರ್‌ ಎಂದು ಹಲವು ಸಾಮಾಜಿಕ ಮಾಧ್ಯಮಗಳು ಬಳಕೆಗೆ ಬಂದಿದ್ದರೂ ವಾಲ್‌ಪೋಸ್ಟರ್‌ ನೀಡುವ ಖುಷಿಯೇ ಬೇರೆ. ಹೀಗಾಗಿ ಈ ಶೀರ್ಷಿಕೆಯನ್ನು ಇಟ್ಟಿದ್ದೇನೆ’ ಎಂದು ಹೇಳಿದ್ದಾರೆ.

ಈ ನಿರ್ಮಾಣಸಂಸ್ಥೆಯ ಮೂಲಕ ಅ! ಎಂಬ ಸಿನಿಮಾ ನಿರ್ಮಿಸಿದ್ದಾರೆ. ನಟ ವಿಶ್ವಕ್‌ಸೇನ್‌ಗೆ ನಾಯಕ ನಟನ ಅವಕಾಶ ನೀಡಿ ಮತ್ತೊಂದು ಚಿತ್ರವನ್ನೂ ಅವರು ನಿರ್ಮಿಸುತ್ತಿದ್ದಾರೆ.

ಶಾರುಕ್‌ಖಾನ್ ಮೆಣಸಿನಕಾಯಿ

ಬಾಲಿವುಡ್‌ ಬಾದ್‌ಷಾ ಎಂದೇ ಕರೆಸಿಕೊಳ್ಳುವ ಶಾರುಕ್‌ ಖಾನ್ ಅವರು ‘ರೆಡ್‌ ಚಿಲ್ಲೀಸ್‌’ ಎಂಬ ಹೆಸರಿನಲ್ಲಿ ರೆಸ್ಟೊರೆಂಟ್ ಆರಂಭಿಸುವ ಯೋಜನೆ ರೂಪಿಸಿದ್ದರಂತೆ, ಆದರೆ ಅಷ್ಟರಲ್ಲಿ ಚಿತ್ರವೊಂದನ್ನು ನಿರ್ಮಿಸಬೇಕಾಗಿ ಬಂದಾಗ ಈ ಹೆಸರನ್ನೇ ಚಿತ್ರಕ್ಕೆ ಇಡಬೇಕಾಯಿತು ಎಂದು ಅವರು ಹೇಳಿದ್ದಾರೆ. ರಾ ಒನ್‌, ಚೆನ್ನೈ ಎಕ್ಸ್‌ಪ್ರೆಸ್‌, ಜೀರೊ ಚಿತ್ರಗಳು ಈ ಸಂಸ್ಥೆಯ ಮೂಲಕವೇ ನಿರ್ಮಾಣವಾಗಿವೆ.

ವಂಡರ್‌ಬಾರ್ ಫಿಲ್ಮ್ಸ್‌

ವಂಡರ್‌ಬಾರ್ ಎಂಬುದು ಜರ್ಮನ್ ಪದ. ಇಂಗ್ಲಿಷ್‌ನ ವಂಡರ್‌ಫುಲ್‌ ಪದಕ್ಕೆ ಸಮಾನ ಅರ್ಥವುಳ್ಳ ಪದ ಇದು. ಈ ಪದವನ್ನೇ ತಮ್ಮ ನಿರ್ಮಾಣ ಸಂಸ್ಥೆಗೆ ಶೀರ್ಷಿಕೆಯಾಗಿ ಇಟ್ಟಿರುವ ನಟ ಧನುಷ್‌, ಈ ಮೂಲಕ 7 ವರ್ಷದಲ್ಲಿ 10 ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ. ಇದರಲ್ಲಿ ಕಾಕಾ ಮತ್ತು ಮುಟ್ಟೈ ವಿಸರಣೈ ಚಿತ್ರಗಳು ರಾಷ್ಟ್ರ ಪ್ರಶಸ್ತಿ ಪಡೆದರೆ, ವಘುವರನ್ ಬಿಟೆಕ್‌ ಮತ್ತು ತಂಗ ಮಗನ್‌ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ.

ಗ್ರೇಜಿಂಗ್ ಗೋಟ್ಸ್‌

ಗ್ರೇಜಿಂಗ್ ಗೋಟ್ ಎಂದರೆ, ಮೇಯುತ್ತಿರುವ ಮೇಕೆ ಎಂದು ಅರ್ಥ. ನಿರ್ದೇಶಕರು, ಗುಣಮಟ್ಟದ ಸಿನಿಮಾಗಳನ್ನು ತೆಗೆಯಬೇಕು, ಹಚ್ಚ ಹಸಿರಿನಂತಹ ಆಲೋಚನೆಗಳನ್ನು ಸಾಕಾರಗೊಳಸಬೇಕು ಎಂದು ಕನಸು ಕಾಣುವ ಯುವ ಸಮುದಾಯಕ್ಕೆ ಪ್ರೋತ್ಸಾಹವೆಂಬ ಉತ್ತಮ ಮೇವು ನೀಡುತ್ತೇವೆ ಎಂಬ ಅರ್ಥದಲ್ಲಿ ನಮ್ಮ ಚಿತ್ರ ನಿರ್ಮಾಣ ಸಂಸ್ಥೆಗೆ ಗ್ರೇಜಿಂಗ್ ಗೋಟ್ಸ್ ಎಂದು ಹೆಸರಿಟ್ಟಿದ್ದೇವೆ’ ಎಂದು ಹೇಳುತ್ತಾರೆ ಅಕ್ಷಯ್‌ಕುಮಾರ್. ಈ ಚಿತ್ರದ ಮೂಲಕ ‘ಓ ಮೈ ಗಾಡ್‌, ಸಿಂಗ್ ಈಜ್ ಬ್ಲಿಂಗ್‌’ ಎಂಬ ಚಿತ್ರಗಳನ್ನು ಅವರು ನಿರ್ಮಸಿದ್ದಾರೆ.

ಇಟಾಕಿ ಎಂಟರ್‌ಟೈನ್‌ಮೆಂಟ್ಸ್‌

ಟಾಲಿವುಡ್‌ ಮತ್ತು ಕೊಲಿವುಡ್‌ನಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ನಟ ಸಿದ್ದಾರ್ಥ್‌, ಇಟಾಕಿ ಎಂಟರ್‌ಟೈನ್‌ಮೆಂಟ್ಸ್ ಹೆಸರಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ‘ಲವ್‌ ಫೆಲ್ಯೂರ್‌’ ಎಂಬ ಚಿತ್ರವನ್ನು ನಿರ್ಮಿಸುವುದಕ್ಕಾಗಿ ಅವರು ನಿರ್ಮಾಪಕರಾಗಿ ಬದಲಾದರು. ಈ ಚಿತ್ರದ ನಂತರ ಅವರು ‘ಗೃಹಂ’ ಎಂಬ ಹಾರರ್ ಚಿತ್ರವನ್ನು ತೆಲುಗು, ತಮಿಳು ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ನಿರ್ಮಿಸಿದರು.

ಲ್ಯಾಟಿನ್‌ ಭಾಷೆಯಲ್ಲಿ ಇಟಾಕಿ ಎಂದರೆ, ‘ಸ್ವಚ್ಛವಾದ’ ಎಂಬ ಅರ್ಥವಿದೆ. ಸ್ವಚ್ಛವಾದ ಮನರಂಜನೆಯನ್ನು ಪ್ರೇಕ್ಷಕರಿಗೆ ಒದಗಿಸಬೇಕು ಎಂಬುದು ನಮ್ಮ ಉದ್ದೇಶ ಹೀಗಾಗಿ ಈ ಹೆಸರು ಇಟ್ಟಿದ್ದೇವೆ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.