ADVERTISEMENT

‘ಅಲೆಕ್ಸಾ’ದಲ್ಲಿ ಅದಿತಿ ಆ್ಯಕ್ಷನ್‌: ನಟಿ ಅದಿತಿ ಪ್ರಭುದೇವ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 21:59 IST
Last Updated 25 ಜನವರಿ 2024, 21:59 IST
<div class="paragraphs"><p>ಅದಿತಿ ಪ್ರಭುದೇವ&nbsp;</p></div>

ಅದಿತಿ ಪ್ರಭುದೇವ 

   

ಗ್ಲ್ಯಾಮರಸ್‌ ಪಾತ್ರಗಳಲ್ಲಿ ಮಿಂಚಿರುವ ‘ಚಂದನವನದ ಮಹಾಲಕ್ಷ್ಮಿ’ ಅದಿತಿ ಪ್ರಭುದೇವ ಮೊದಲ ಬಾರಿಗೆ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಿತಿ ನಟನೆಯ ‘ಅಲೆಕ್ಸಾ’ ಇಂದು(ಜ.26) ತೆರೆಕಂಡಿದೆ. ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಿನಿಬ್ಯಾಂಕ್‌ ಹೊಂದಿರುವವರಲ್ಲಿ ಮುಂಚೂಣಿಯಲ್ಲಿದ್ದ ಅದಿತಿ, ಸದ್ಯ ಅಮ್ಮನಾಗುವ ಖುಷಿಯಲ್ಲಿದ್ದಾರೆ. ಚಿತ್ರರಂಗದಿಂದ ಸಣ್ಣ ಬ್ರೇಕ್‌ ತೆಗೆದುಕೊಂಡಿರುವ ಅವರು ಹೊಸ ನಿರೀಕ್ಷೆಗಳು, ಶೂಟಿಂಗ್‌ ಅನುಭವಗಳನ್ನು ‘ಸಿನಿಮಾ ಪುರವಣಿ’ ಜೊತೆ ಹಂಚಿಕೊಂಡರು. 

‘ಹೀರೊಗಳು ಸಾಹಸ ದೃಶ್ಯಗಳಲ್ಲಿ ನಟಿಸಿರುವುದನ್ನು ನೋಡಿದ್ದೇವೆ. ಅದನ್ನು ಆನಂದಿಸಿದ್ದೇವೆ. ಜೊತೆಗೆ ನಾಯಕಿಯರೂ ಆ್ಯಕ್ಷನ್‌ ದೃಶ್ಯಗಳಲ್ಲಿ ಮಿಂಚಿರುವುದರ ಉದಾಹರಣೆ ಇದೆ. ‘ಅಲೆಕ್ಸಾ’ ನನಗೆ ಹೊಸ ಅನುಭವ ನೀಡಿದೆ. ಇದು ಕಂಪ್ಲೀಟ್‌ ಆ್ಯಕ್ಷನ್‌ ಸಿನಿಮಾ. ಇಂತಹ ಜಾನರ್‌ನಲ್ಲಿ ನಾನು ನಟಿಸಿರುವುದು ಮೊದಲ ಬಾರಿ. ಈ ಚಿತ್ರದಲ್ಲಿ ಇನ್ವೆಸ್ಟಿಗೇಷನ್‌ ಪೊಲೀಸ್ ಆಫೀಸರ್ ಆಗಿ ‘ಅಲೆಕ್ಸಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನಗೆ ನಿಜಜೀವನದಲ್ಲಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ನಿರ್ದೇಶಕರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಎಂದ ತಕ್ಷಣ ಒಪ್ಪಿಕೊಂಡೆ. ನಿರ್ದೇಶಕ ಜೀವ ಅವರೂ ಸಾಹಸ ದೃಶ್ಯಗಳನ್ನು ಸಿನಿಮಾದಲ್ಲಿ ಸುಮ್ಮನೆ ತೂರಿಸಿಲ್ಲ. ಒಟ್ಟು ಐದು ಆ್ಯಕ್ಷನ್‌ ಸೀಕ್ವೆನ್ಸ್‌ಗಳು ಈ ಸಿನಿಮಾದಲ್ಲಿವೆ. ರವಿವರ್ಮ, ಮಾಸ್‌ ಮಾದ ಹಾಗೂ ವಿನೋದ್‌ ಹೀಗೆ ಮೂವರು ಸ್ಟಂಟ್‌ ಮಾಸ್ಟರ್ಸ್‌ ತರಬೇತಿ ನೀಡಿದ್ದಾರೆ. ಹೀಗಾಗಿ ಎಲ್ಲ ಫೈಟ್ಸ್‌ ಭಿನ್ನವಾಗಿ ಮೂಡಿಬಂದಿವೆ. ತೆರೆಯಲ್ಲಿ ಫೈಟ್ಸ್‌ ನೋಡಿ ಖುಷಿ ಪಡುತ್ತಿದ್ದ ನನಗೆ ಇದರ ಹಿಂದಿರುವ ಕಷ್ಟ ಗೊತ್ತಾಗಿದ್ದೇ ಈ ಸಿನಿಮಾದಲ್ಲಿ. ಕ್ಲೈಮ್ಯಾಕ್ಸ್‌ನಲ್ಲಿ ಡ್ಯೂಪ್‌ ಕರೆಸಿದರೂ, ಎಲ್ಲೂ ಡ್ಯೂಪ್‌ ಬಳಸದೆ ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ. ಜನ ಈ ಸಿನಿಮಾ ನೋಡಿ ಖುಷಿ ಪಡುತ್ತಾರೆ ಎನ್ನುವ ನಂಬಿಕೆ ನನಗಿದೆ’ ಎಂದು ಸಿನಿಮಾ ಅನುಭವ ಹಂಚಿಕೊಂಡರು ಅದಿತಿ.  

ADVERTISEMENT

ಗರ್ಭಿಣಿಯಾಗಿ ಮೂರು ತಿಂಗಳು ಶೂಟಿಂಗ್‌ 

‘ಗರ್ಭಿಣಿಯಾದ ಮೊದಲ ಮೂರು ತಿಂಗಳು ನಾನು ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ! ‘ಛೂ ಮಂತರ್‌’ ಸಿನಿಮಾ ಹಾಡಿನ ಶೂಟಿಂಗ್‌ನಲ್ಲಿ ನಾನು ಭಾಗವಹಿಸಿದ್ದೆ. ನಾನು ಇದನ್ನು ಎಲ್ಲೂ ಹೇಳಿಕೊಂಡಿರಲಿಲ್ಲ. ಇಲ್ಲಿಯವರೆಗೂ ನಾಜೂಕಾಗಿರಬೇಕು ಎಂದು ಬಯಸಿದವಳು ನಾನಲ್ಲ. ಖುಷಿ ಖುಷಿಯಾಗಿದ್ದೇನೆ. ಮದುವೆ ಆದಮೇಲೂ ನಿರಂತರವಾಗಿ ಸಿನಿಮಾಗಳನ್ನು ಮಾಡುತ್ತಲೇ ಬಂದೆ. ಕುಟುಂಬಕ್ಕೆ ಸಮಯ ನೀಡಲಾಗಲಿಲ್ಲ. ಇದೀಗ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದೇನೆ. ಕುಟುಂಬಕ್ಕೆ ಸಮಯ ನೀಡುತ್ತಿದ್ದೇನೆ. ಇನ್ನು ಆರೇಳು ತಿಂಗಳು ಬಿಡುವು ಪಡೆದುಕೊಳ್ಳುತ್ತೇನೆ. ಮಗುವಾದ ಬಳಿಕ ಒಂದಿಷ್ಟು ಬದಲಾವಣೆಗಳು ಸಹಜವಾಗಿಯೇ ಆಗುತ್ತವೆ. ಹೀಗಾಗಿ ನಂತರದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಸಿನಿಮಾಗೆ ಸಿದ್ಧವಾಗಬೇಕು. ಒಳ್ಳೆಯ ಪಾತ್ರಗಳು ಬಂದರೆ ಮತ್ತೆ ಸಕ್ರಿಯವಾಗುವೆ’ ಎನ್ನುತ್ತಾರೆ ಅದಿತಿ. 

ಬರಲಿವೆ ಸಾಲು ಸಾಲು ಸಿನಿಮಾಗಳು 

ಕಳೆದ ಎರಡು ಮೂರು ವರ್ಷಗಳಲ್ಲಿ ಅತಿ ಹೆಚ್ಚು ಸಿನಿಬ್ಯಾಂಕ್‌ ಹೊಂದಿದ್ದ ನಟಿಯರ ಪೈಕಿ ಅದಿತಿ ಕೂಡ ಒಬ್ಬರಾಗಿದ್ದರು. ಎಂ.ಸಿ. ವಿಜಯ್‌ ಪ್ರಸಾದ್‌ ನಿರ್ದೇಶನದ ‘ತೋತಾಪುರಿ’ ಸರಣಿ, ಗೋಲ್ಡನ್‌ ಸ್ಟಾರ್ ಗಣೇಶ್‌ ಅವರ ಜೊತೆ ‘ತ್ರಿಬಲ್ ರೈಡಿಂಗ್‌’, ‘ಆನ’, ‘Once upon a time in ಜಮಾಲಿಗುಡ್ಡ’ ಹೀಗೆ ಅದಿತಿ ಅವರ ಸಾಲು ಸಾಲು ಸಿನಿಮಾಗಳು ಕಳೆದೆರಡು ವರ್ಷದಲ್ಲಿ ಬಿಡುಗಡೆ ಕಂಡಿವೆ. ‘ಅದೊಂದಿತ್ತು ಕಾಲ’, ‘ಮಾಫಿಯಾ’, ‘ಮ್ಯಾಟ್ನಿ’, ‘ಛೂ ಮಂತರ್‌’ ಸಿನಿಮಾಗಳು ಈ ವರ್ಷ ಬಿಡುಗಡೆ ಆಗಲಿವೆ. 

ಅದಿತಿ 
ಅದಿತಿ 
ಚಿತ್ರರಂಗದಲ್ಲಿ ನಾವಿಷ್ಟು ಸಕ್ರಿಯರಾಗಿ ಇರುತ್ತೇವೆ. ಏಕೆ ಯಾರೂ ಇಂತಹ ಕಥೆಗಳನ್ನು ನಮ್ಮ ಬಳಿ ತರುವುದಿಲ್ಲ ಎನ್ನುವ ಕೊರಗು ಇತ್ತು. ಅದು ‘ಅಲೆಕ್ಸಾ’ದಿಂದ ನೀಗಿದೆ.
–ಅದಿತಿ ನಟಿ   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.