ADVERTISEMENT

ಹೃನ್ಮನ ಸೆಳೆದಳಾ ಹಂಸ ಗಮನೆ...

​ಪ್ರಜಾವಾಣಿ ವಾರ್ತೆ
Published 25 ಮೇ 2024, 0:30 IST
Last Updated 25 ಮೇ 2024, 0:30 IST
<div class="paragraphs"><p>ಅದಿತಿ ರಾವ್‌ ಹೈದರಿ</p></div>

ಅದಿತಿ ರಾವ್‌ ಹೈದರಿ

   

ಮೂವತ್ತು ಕೆಜಿ ಭಾರದ ಘಾಗ್ರಾ, ಮೈಗಪ್ಪುವ ಮಲ್‌ಮಲ್‌ ಚೋಲಿ, ಗೊಂಡೆ ಇರುವ ನೀಳ ಕೃಷ್ಣವೇಣಿಯನ್ನು ಅಲುಗಾಡಿಸುತ್ತ ಅದಿತಿರಾವ್‌ ಹೈದರಿ ನಡೆಯುತ್ತಿದ್ದರೆ... ’ಹೀರಾಮಂಡಿ‘ಯ ಸೌಂದರ್ಯವೇ ಮೈವೆತ್ತಂತೆ!

ಸಂಜಯ್‌ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ವೆಬ್‌ಸಿರೀಸ್‌ ಹೀರಾಮಂಡಿ ಬಿಡುಗಡೆಯಾಗಿ ಮೂರು ವಾರಗಳೇ ಕಳೆದಿವೆ. ವೆಬ್‌ ಸಿರೀಸ್‌ ಕತ್ತಲೆಯಲ್ಲಿಯೇ ಮಾಡಿದಂತಿದೆ, ಪಂಜಾಬಿ ಬಳಸುವ ಕಾಲದಲ್ಲಿ ಉರ್ದು ನ್ಯೂಸ್‌ ಪೇಪರ್‌ ಓದುವುದನ್ನು ತೋರಿಸಲಾಗಿದೆ, ನಿಜವಾದ ಹೀರಾಮಂಡಿಯಲ್ಲಿ ಕಲಾವಿದೆಯರು ತೀರ ಬಡತನದಲ್ಲಿ ಬದುಕುತ್ತಿದ್ದರು. ಇಲ್ಲಿ ತೋರಿದಂತೆ ಬಲಶಾಲಿಗಳಾಗಿ, ಅಧಿಕಾರ ಶಾಹಿಗಳಾಗಿ ಇರಲಿಲ್ಲ, ನಿಜವಾದ ಹೀರಮಾಂಡಿಯ ಹವೇಲಿಗಳು ಹೀಗಿರಲಿಲ್ಲ ಎಂದೆಲ್ಲ ಹತ್ತಾರು ದೋಷಗಳನ್ನು ಎತ್ತಿ ಹಿಡಿಯುತ್ತಿರುವ ಟೀಕಾಕಾರರು ಒಂದೆಡೆ ಬಿಡುವಿಲ್ಲದಂತೆ ಬರೆಯುತ್ತಿದ್ದಾರೆ. ಇನ್ನೊಂದೆಡೆ ಅಷ್ಟೇ ಪ್ರಮಾಣದ ಮೆಚ್ಚುಗೆಯೂ ಹರಿದು ಬಂದಿದೆ. 

ADVERTISEMENT

ಅದಿತಿ ರಾವ್‌ ಹೈದರಿ

ಹೊಗಳುವವರು, ಟೀಕಾಕಾರರು, ವ್ಯಂಗ್ಯ ಆಡುವವರು ಎಲ್ಲರೂ ಬಾಯ್ತೆರೆದು, ಬೆಕ್ಕಸಬೆರಗಾಗಿ ನೋಡುತ್ತಲೇ ಮೌನದ ಮೊರೆಹೋಗುವ ಕ್ಷಣವೆಂದರೆ ’ಸ್ವಾನ್‌ವಾಕ್‌‘ ಎಂಬ ಹಂಸನಡಿಗೆಯ ನೃತ್ಯ. ನೀಳಕಾಯದ ಚೆಲುವೆ ಅದಿತಿ ರಾವ್‌ ಹೈದರಿ ಗೆಜ್ಜೆಯ ನಾದ ಹರಡಿಸುತ್ತ, ಕಗ್ಗತ್ತಲೆಯ ರಾತ್ರಿಯ ಮಿಂಚು ನಡೆದಂತೆ ನಡೆಯುತ್ತಿದ್ದರೆ ಹೃದಯದ ಮಿಡಿತಗಳು ಬಡಿತಗಳಾಗಿ ಬದಲಾಗುತ್ತವೆ. ಈ ಶಾಟ್‌ಗಾಗಿ ಹದಿನೆಂಟು ಸಲ ರಿಟೇಕ್‌ ಆಯಿತು ಎಂದು ಕಪಿಲ್‌ ಶರ್ಮಾ ಶೋನಲ್ಲಿ ಹೇಳಿದ ಅದಿತಿ, ಸಂಜಯ್‌ ಲೀಲಾ ಬನ್ಸಾಲಿ ಅವರ ಪರ್ಫೆಕ್ಷನ್‌ ಕುರಿತೂ ಹೇಳಿದರು.

ಒಮ್ಮೆ ಜಡೆ ಸರಿಯಾಗಲಿ ಅಲುಗಾಡಲಿಲ್ಲವೆಂದು, ಇನ್ನೊಮ್ಮೆ ಕತ್ತು ಸರಿಯಾದ ಕೋನದಲ್ಲಿ ಬಾಗಲಿಲ್ಲವೆಂದು, ನೋಡಿದ ದೃಷ್ಟಿ ಸರಿಇರಲಿಲ್ಲ, ಮಾದಕವಾಗಿರಕೂಡದು, ಮುಗ್ಧ, ಸ್ನಿಗ್ಧ ಸೌಂದರ್ಯದಲ್ಲಿ ನವಿರಾದ ಬೇಡಿಕೆ ಇರಬೇಕು ಎಂದು ಕೇಳುತ್ತಿದ್ದರು.. ಅರ್ಥೈಸಿಕೊಳ್ಳುವುದರಲ್ಲಿ, ಅದರಲ್ಲಿಯ ನಾಜೂಕು (ನಜಾಕತ್‌)ತನ ನಮ್ಮ ಮೈಮರೆಯಿಸುತ್ತಿತ್ತು ಎಂದೂ ನೆನಪಿಸಿಕೊಂಡಿದ್ದಾರೆ. 

ಈ ಸ್ವಾನ್‌ ವಾಕ್‌ ಕುರಿತು ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ರೀಲ್‌ಗಳು, ಮೀಮ್‌ಗಳೂ ಜನಪ್ರಿಯವಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.