
ನಟಿ ಭಾವನಾ, ನಟ ದಿಲೀಪ್
ಚಿತ್ರ: ಇನ್‌ಸ್ಟಾಗ್ರಾಂ
ಕೇರಳ: 2017ರಲ್ಲಿ ಕೇರಳದಲ್ಲಿ ನಡೆದ ಅಪಹರಣ, ಅತ್ಯಾಚಾರ ಪ್ರಕರಣ ಒಂದರಲ್ಲಿ ಆರೋಪಿಯಾಗಿದ್ದ ನಟ, ನಿರ್ಮಾಪಕ ದಿಲೀಪ್‌ರನ್ನು ಕೇರಳದ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯ ಆರೋಪಮುಕ್ತಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೆ ಜಾಕಿ ಸಿನಿಮಾ ನಟಿ ಭಾವನ ಮೆನನ್ ಸುದೀರ್ಘ ಪೋಸ್ಟ್ ಒಂದನ್ನು ಬರೆದುಕೊಂಡಿದ್ದಾರೆ.
ನಟಿ ಭಾವನಾ ಮೆನನ್ ಅವರು ಈ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲ, ಪ್ರಕರಣದಲ್ಲಿ ದಿಲೀಪ್ ನಿರ್ದೋಷಿ ಎಂದು ತೀರ್ಪು ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ‘ವರ್ಷಗಳ ನೋವು, ಕಣ್ಣೀರು ಮತ್ತು ಭಾವನಾತ್ಮಕ ಹೋರಾಟದ ಬಳಿಕ, ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ನ್ಯಾಯ ದೊರೆಯುವುದಿಲ್ಲ ಎಂಬುದರ ಅರಿವಿಗೆ ಬಂದಿದ್ದೇನೆ’ ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಎರ್ನಾಕುಲಂನ ಸೆಷನ್ಸ್ ನ್ಯಾಯಾಲಯ ಅತ್ಯಾಚಾರ ಪ್ರಕರಣದಲ್ಲಿ ನಟ, ನಿರ್ಮಾಪಕ ದಿಲೀಪ್‌ರನ್ನು ಆರೋಪಮುಕ್ತಗೊಳಿಸಿದೆ. ಇತರೆ 6 ಜನ ಆರೋಪಿಗಳಿಗೆ ದೋಷಿಗಳು ಎಂದು ತೀರ್ಪು ನೀಡಿದೆ. ಸದ್ಯ, ಬಿಡುಗಡೆಯಾಗಿರುವ ಆರೋಪಿ ದಿಲೀಪ್‌ಗೆ ಕ್ಲೀನ್ ಚಿಟ್ ಸಿಗುತ್ತದೆ ಎಂದು ತಾನು ನಿರೀಕ್ಷಿಸಿದ್ದೆ ಎಂದು ಹೇಳುವ ಮೂಲಕ ಭಾವನಾ ಗಮನಸೆಳೆದರು.
ಬಹುಭಾಷಾ ನಟಿ ಭಾವನಾ ಮೆನನ್ ಪೋಸ್ಟ್
8 ವರ್ಷದ 9 ತಿಂಗಳು 23 ದಿನಗಳ ದೀರ್ಘ ಮತ್ತು ನೋವಿನ ಪ್ರಯಾಣದಲ್ಲಿ ನಾನು ಕೊನೆಗೂ ಒಂದು ಸಣ್ಣ ಆಶಾಕಿರಣ ಕಂಡಿದೆ. ಅದು 6 ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ನಾನು ಅದಕ್ಕಾಗಿ ಕೃತಜ್ಞಳಾಗಿದ್ದೇನೆ. ನನ್ನ ಈ ನೋವನ್ನು ಸುಳ್ಳು ಎಂದವರಿಗೆ ಮತ್ತು ಇದೊಂದು ಕಟ್ಟುಕಥೆ ಎಂದವರಿಗೆ ಈ ಕ್ಷಣವನ್ನು ಅರ್ಪಿಸುತ್ತೇನೆ. ಇಂದಾದರೂ ನಿಮ್ಮ ಮನಸ್ಸಿಗೆ ಶಾಂತಿ ಸಿಗಲಿ ಎಂದಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ
‘ಈ ಪ್ರಕರಣದಲ್ಲಿ ಮೊದಲನೇ ಆರೋಪಿ ನನ್ನ ವೈಯಕ್ತಿಕ ಚಾಲಕ ಎಂದು ಇನ್ನೂ ಹೇಳುತ್ತಿರುವವರಿಗೆ, ಈ ತೀರ್ಪು ಅರ್ಪಣೆ. ಅದು ಸಂಪೂರ್ಣ ಸುಳ್ಳು. ಅವನು ನನ್ನ ಚಾಲಕನಾಗಿರಲಿಲ್ಲ, ನನ್ನ ಉದ್ಯೋಗಿಯೂ ಅಲ್ಲ, ಮತ್ತು ನನಗೆ ತಿಳಿದಿರುವ ವ್ಯಕ್ತಿಯೂ ಅಲ್ಲ. ಅವನು 2016ರಲ್ಲಿ ನಾನು ಕೆಲಸ ಮಾಡುತ್ತಿದ್ದ ಚಲನಚಿತ್ರಕ್ಕೆ ಚಾಲಕನಾಗಿ ನಿಯೋಜಿಸಲ್ಪಟ್ಟ ಅನಾಮಿಕ ವ್ಯಕ್ತಿ. ವಿಪರ್ಯಾಸವೆಂದರೆ, ಆ ಸಮಯದಲ್ಲಿ ನಾನು ಅವನನ್ನು ಒಮ್ಮೆ ಅಥವಾ ಎರಡು ಬಾರಿ ಮಾತ್ರ ಭೇಟಿಯಾಗಿದ್ದೆ‘ ಎಂದಿದ್ದಾರೆ.
‘ಈ ತೀರ್ಪು ಅನೇಕರಿಗೆ ಅಚ್ಚರಿ ಮೂಡಿಸಬಹುದು. ಆದರೆ ನನಗೆ ಅಚ್ಚರಿ ಎನಿಸಿಲ್ಲ. 2020ರ ಆರಂಭದಲ್ಲಿ, ಈ ಪ್ರಕರಣದಲ್ಲಿ ಏನೋ ಸರಿಯಿಲ್ಲ ಎಂದು ಅನಿಸಲು ಪ್ರಾರಂಭವಾಯಿತು. ಪ್ರಕರಣವನ್ನು ನಿರ್ವಹಿಸುವ ವಿಧಾನದಲ್ಲಿ ವಿಶೇಷವಾಗಿ ಒಬ್ಬ ನಿರ್ದಿಷ್ಟ ಆರೋಪಿ ವಿಷಯಕ್ಕೆ ಬಂದಾಗ, ಪ್ರಾಸಿಕ್ಯೂಷನ್ ಬದಲಾವಣೆ ಭಯಸಿತ್ತು’.
ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರನ್ನು ಬದಲಾಯಿಸಬೇಕು ಎಂದು ಸಲ್ಲಿಸಿದ್ದ ಪ್ರತಿ ವಿನಂತಿಯನ್ನು ವಜಾಗೊಳಿಸಲಾಗಿದೆ’ ಎಂದು ಭಾವನಾ ಹೇಳಿದ್ದಾರೆ. ಈ ಕಠಿಣ ಸಂದರ್ಭದಲ್ಲಿ ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
‘ಇಷ್ಟು ವರ್ಷಗಳಲ್ಲಿ, ನಾನು ಹಲವು ಬಾರಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಅನ್ನು ಸಂಪರ್ಕಿಸಿದೆ. ಈ ನ್ಯಾಯಾಲಯವನ್ನು ನಾನು ನಂಬುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರಿಂದ ತಪ್ಪಿಸಲು ನಾನು ಮಾಡಿದ ಪ್ರತಿಯೊಂದು ಮನವಿಯನ್ನು ವಜಾಗೊಳಿಸಲಾಯಿತು’ ಎಂದಿದ್ದಾರೆ.
‘ವರ್ಷಗಳ ನೋವು, ಕಣ್ಣೀರು ಮತ್ತು ಭಾವನಾತ್ಮಕ ಹೋರಾಟದ ನಂತರ, ಒಂದು ಸಣ್ಣ ಬೆಳಕಿನ ಕಿರಣವನ್ನು ಕಂಡೆ. 6 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದೆ ಮತ್ತು ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ನನ್ನ ನೋವನ್ನು ಸುಳ್ಳು ಮತ್ತು ಕಾಲ್ಪನಿಕ ಕಥೆ ಎಂದು ಕರೆದವರಿಗೆ, ಈಗ ನೀಡಿರುವ ಶಿಕ್ಷೆಯೇ ಉತ್ತರವಾಗಿದೆ’ ಎಂದು ಅವರು ಹೇಳಿದರು.
ನನ್ನ ಮೇಲೆ ನಿರಂತರವಾಗಿ ಕೆಟ್ಟ ಕಾಮೆಂಟ್‌ಗಳ ಮೂಲಕ ದಾಳಿ ಮಾಡುತ್ತಿರುವವರು ಮತ್ತು ಹಣ ಪಡೆದು ಕಟ್ಟುಕಥೆಗಳನ್ನು ಹಬ್ಬಿಸುತ್ತಿರುವವರಿಗೆ ನಾನೊಂದು ಮಾತು ಹೇಳುತ್ತೇನೆ. ನಿಮಗೆ ಹಣ ಸಿಗುತ್ತಿದೆ ಎಂಬ ಕಾರಣಕ್ಕೆ ನೀವು ಮಾಡುತ್ತಿರುವ ಕೆಲಸವನ್ನು ಮುಂದುವರಿಸಬಹುದು, ಅದಕ್ಕಾಗಿ ನಿಮಗೆ ಸ್ವಾತಂತ್ರ್ಯವಿದೆ’ ಎಂದು ನಟಿ ತಿರುಗೇಟು ಕೊಟ್ಟಿದ್ದಾರೆ.
ದಿಲೀಪ್ ಮಾಜಿ ಪತ್ನಿ, ನಟಿ ಮಂಜು ವಾರಿಯರ್ ಪೋಸ್ಟ್
ಭಾವನಾ ಮೆನನ್ ಪೋಸ್ಟ್ ಬೆನ್ನಲ್ಲೇ ನಟಿ ಮಂಜು ವಾರಿಯರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗದ ಬಗ್ಗೆ ಗೌರವ ವ್ಯಕ್ತಪಡಿಸುತ್ತ, ಬದುಕುಳಿದವರಿಗೆ ನ್ಯಾಯ ಅಪೂರ್ಣ ಎಂದು ನಟಿ ಬರೆದುಕೊಂಡಿದ್ದಾರೆ.
‘ಗೌರವಾನ್ವಿತ ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಈ ಪ್ರಕರಣದಿಂದ ಪಾರಾದವರಿಗೂ ಶಿಕ್ಷೆಯಾಗುವವರೆಗೆ ನ್ಯಾಯ ಅಪೂರ್ಣವಾಗಿದೆ. ಅಪರಾಧ ಮಾಡಿದವರಿಗೆ ಮಾತ್ರ ಶಿಕ್ಷೆಯಾಗಿದೆ. ಆದರೆ, ಈ ಹೇಯ ಕೃತ್ಯವನ್ನು ಯೋಜಿಸಿದವರಿಗೂ ಶಿಕ್ಷೆಯಾಗಬೇಕು. ಯಾರೇ ಆಗಿದ್ದರು ಅವನಿಗೆ ಇನ್ನೂ ಭಯಾನಕ ಶಿಕ್ಷೆಯಾಗಬೇಕು. ಅಪರಾಧ ಕೃತ್ಯದ ಹಿಂದಿರುವ ಪ್ರತಿಯೊಬ್ಬರನ್ನೂ ಹೊಣೆಗಾರರನ್ನಾಗಿ ಮಾಡಿದಾಗ ಮಾತ್ರ ಸಂಪೂರ್ಣ ನ್ಯಾಯ ಸಿಕ್ಕಂತಾಗುತ್ತದೆ’.
ಆಗ, ಪ್ರತಿಯೊಬ್ಬ ಹುಡುಗಿ, ಪ್ರತಿಯೊಬ್ಬ ಮಹಿಳೆ ಕೂಡ ಧೈರ್ಯದಿಂದ ತಲೆ ಎತ್ತಿ, ತಮ್ಮ ಕೆಲಸದ ಸ್ಥಳಗಳಲ್ಲಿ ಹಾಗೂ ಬದುಕಿನಲ್ಲಿ ಭಯವಿಲ್ಲದೆ ನಡೆದಾಡುತ್ತಾಳೆ. ಸಂತ್ರಸ್ತೆಯ ಜೊತೆ ಆಗ, ಈಗ, ಮತ್ತು ಯಾವಾಗಲೂ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.