ADVERTISEMENT

ನಟಿ ಜಯಂತಿ ಆರೋಗ್ಯದಲ್ಲಿ ಚೇತರಿಕೆ: ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 7:45 IST
Last Updated 4 ಆಗಸ್ಟ್ 2020, 7:45 IST
ಜಯಂತಿ
ಜಯಂತಿ   

ಆಸ್ತಮಾ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ನಟಿ ಜಯಂತಿ ಅವರು ಚೇತರಿಸಿಕೊಳ್ಳುತ್ತಿದ್ದು, ಇನ್ನೊಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳುವ ನಿರೀಕ್ಷೆಯಿದೆ. ಡಾ.ಸತೀಶ್‌ ನೇತೃತ್ವದ ವೈದ್ಯರ ತಂಡ ಅವರಿಗೆ ಕಳೆದ ಮೂವತ್ತೊಂದು ದಿನಗಳಿಂದಲೂ ಚಿಕಿತ್ಸೆ ನೀಡುತ್ತಿದೆ. ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ.

ಕಳೆದ ಮೂವತ್ತು ವರ್ಷಗಳಿಂದಲೂ ಜಯಂತಿ ಆಸ್ತಮಾದಿಂದ ಬಳಲುತ್ತಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಅವರು ತಮ್ಮ ಪುತ್ರ ಕೃಷ್ಣಕುಮಾರ್‌ ಜೊತೆಗೆ ಹಂಪಿಯ ವೀಕ್ಷಣೆಗೆ ತೆರಳಿದ್ದರು. ಏಕಾಏಕಿ ಲಾಕ್‌ಡೌನ್‌ ಘೋಷಣೆಯಾದ ಪರಿಣಾಮ ಅಲ್ಲಿನ ಹೋಟೆಲ್‌ವೊಂದರಲ್ಲಿ ತಂಗಿದ್ದರು. ಲಾಕ್‌ಡೌನ್‌ ತೆರವಾದ ಬಳಿಕ ಬೆಂಗಳೂರಿಗೆ ಮರಳಿದ್ದ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹಾಗಾಗಿ, ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಅಮ್ಮ ನಿಯಮಿತವಾಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಾರಿ ಆಸ್ತಮಾದ ತೀವ್ರತೆ ಹೆಚ್ಚಾದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. 19 ದಿನಗಳ ಕಾಲ ಐಸಿಯುನಲ್ಲಿದ್ದರು. ಈಗ ಬೆಡ್‌ಗೆ ಸ್ಥಳಾಂತರಿಸಲಾಗಿದೆ. ಅವರ ಆರೋಗ್ಯ ಸಾಕಷ್ಟು ಸುಧಾರಿಸಿದೆ. ವೈದ್ಯರ ಸಲಹೆ ಮೇರೆಗೆ ಇನ್ನೊಂದು ವಾರದೊಳಗೆ ಮನೆಗೆ ಮರಳುತ್ತೇವೆ’ ಎಂದು ಜಯಂತಿ ಅವರ ಪುತ್ರ ಕೃಷ್ಣಕುಮಾರ್‌ ‘ಪ್ರಜಾಪ್ಲಸ್’ಗೆ ತಿಳಿಸಿದರು.

ADVERTISEMENT

ಬೆಳ್ಳಿ ಬದುಕಿಗೆ ಸುವರ್ಣ ಸಂಭ್ರಮ

ಜಯಂತಿ ಅವರ ವೃತ್ತಿಬದುಕಿಗೆ ಐವತ್ತು ವರ್ಷಗಳು ತುಂಬಿವೆ. ಅವರು ಕ್ಯಾಮೆರಾ ಎದುರಿನ ಪಯಣ ಆರಂಭಿಸಿದ್ದು ‘ಜಗದೇಕವೀರ’ನ ಕಥೆಯ ಪುಟ್ಟ ಪಾತ್ರದ ಮೂಲಕ. ಆದರೆ, ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸಿದ್ದು, 1968ರಲ್ಲಿ ತೆರೆಕಂಡ ‘ಜೇನುಗೂಡು’ ಚಿತ್ರದಲ್ಲಿ.

ಅವರ ಮೂಲ ಹೆಸರು ಕಮಲಕುಮಾರಿ. ಅದು ‘ಚಂದವಳ್ಳಿಯ ತೋಟ’ ಸಿನಿಮಾದ ಸಂದರ್ಭ. ಇದು ಅವರ ನಟನೆಯ ದ್ವಿತೀಯ ಚಿತ್ರವೂ ಹೌದು. ಕಮಲಕುಮಾರಿ ಹೆಸರು ಉದ್ದವಾಯಿತು ಎಂದರಂತೆ ನಿರ್ದೇಶಕರು. ಆಗ ಅವರೇ ‘ಜಯಂತಿ’ ಎಂದು ಮರುನಾಮಕರಣ ಮಾಡಿದರಂತೆ.

ತಮ್ಮ ಅಭಿನಯ ಚಾತುರ್ಯದಿಂದಲೇ ‘ಅಭಿನಯ ಶಾರದೆ’ ಎನ್ನುವ ಪ್ರಶಂಸೆಗೆ ಪಾತ್ರವಾಗಿರುವ ಅವರು, ಕನ್ನಡದಲ್ಲಿ 190ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಣ್ಣುಮಕ್ಕಳು ಬಣ್ಣದಲೋಕ ಪ್ರವೇಶಿಸಲು ಹಿಂಜರಿಯುತ್ತಿದ್ದ ದಿನಗಳಲ್ಲಿ ಚಿತ್ರರಸಿಕರ ಕಣ್ಮಣಿಯಾಗಿದ್ದು ಅವರ ಹೆಗ್ಗಳಿಕೆ.

ಗ್ಲಾಮರಸ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಯುವ ಪ್ರೇಕ್ಷಕರ ಮನಸ್ಸಿನಲ್ಲೂ ಮಿಂಚಿನಹೊಳೆ ಹರಿಸಿದರು. ಇದಕ್ಕೆ ಅವರ ನಟನೆಯ ನಾಲ್ಕನೇ ಚಿತ್ರ ‘ಮಿಸ್‌ ಲೀಲಾವತಿ’ ನಿದರ್ಶನವಾಗಿದೆ. ಇದಕ್ಕೆ ಆರಂಭದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದು ಸಾಹುಕಾರ್‌ ಜಾನಕಿ. ಜಯಂತಿ ಅವರದ್ದು ಜಾನಕಿಯ ಸ್ನೇಹಿತೆಯ ಪಾತ್ರ.

ಹೀರೊಯಿನ್‌ ಪಾತ್ರಕ್ಕೆ ಅಗತ್ಯವಿದ್ದ ಸ್ವಿಮ್ಮಿಂಗ್‌ ಕಾಸ್ಟ್ಯೂಮ್‌ ಧರಿಸಲು ನಿರ್ದೇಶಕ ಎಂ.ಆರ್‌. ವಿಠ್ಠಲ್‌ ಹೇಳಿದರೂ ಜಾನಕಿ ಒಪ್ಪಲಿಲ್ಲವಂತೆ. ಕೊನೆಗೆ, ಆ ಪಾತ್ರ ಜಯಂತಿ ಪಾಲಾಯಿತು. ‘ಜೇಡರಬಲೆ’ ಚಿತ್ರದಲ್ಲೂ ಸ್ವಿಮ್‌ ಸೂಟ್‌ನಲ್ಲಿ ಕಾಣಿಸಿಕೊಂಡ ಅವರು ಆ ಕಾಲದ ಪಡ್ಡೆಹುಡುಗರ ನಿದ್ದೆಕೆಡಿಸಿದ್ದು ಉಂಟು.

ಜಯಂತಿ ನಟಿಸಿದ ಜನಪ್ರಿಯ ಸಿನಿಮಾಗಳಾದ ‘ಚಂದವಳ್ಳಿಯ ತೋಟ’, ‘ಚಕ್ರತೀರ್ಥ’, ‘ಮಿಸ್‌ ಲೀಲಾವತಿ’, ‘ಮಣ್ಣಿನ ಮಗಳು’, ‘ಎಡಕಲ್ಲು ಗುಡ್ಡದ ಮೇಲೆ’, ‘ಭಲೇ ಬಸವ’, ‘ಬೆಟ್ಟದ ಹುಲಿ’, ‘ಶ್ರೀಕೃಷ್ಣ ದೇವರಾಯ’, ‘ಕಸ್ತೂರಿ ನಿವಾಸ’, ‘ಬಹದ್ದೂರ್‌ ಗಂಡು’ ಇಂದಿಗೂ ಕನ್ನಡಿಗರ ಮನದಲ್ಲಿ ಬೆಚ್ಚಗೆ ಕುಳಿತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.