ADVERTISEMENT

‘ಮಾಸ್ಟರ್’ ಚಿತ್ರದ ನಟಿಗೂ ಜನಾಂಗೀಯ ತಾರತಮ್ಯ!

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 9:34 IST
Last Updated 4 ಜೂನ್ 2020, 9:34 IST
ಮಾಳವಿಕಾ ಮೋಹನನ್‌
ಮಾಳವಿಕಾ ಮೋಹನನ್‌   

ಬಿಳಿಯರ ಜನಾಂಗೀಯ ದ್ವೇಷ ನಿನ್ನೆ–ಮೊನ್ನೆಯದಲ್ಲ. ಅದಕ್ಕೆ ನೂರಾರು ವರ್ಷಗಳ ರಕ್ತಸಿಕ್ತ ಇತಿಹಾಸವಿದೆ. ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕರಿಯ ಜನಾಂಗದ ವ್ಯಕ್ತಿ ಜಾರ್ಜ್‌ ಫ್ಲಾಯ್ಡ್‌ ಅವರ ದಾರುಣ ಸಾವು ಈ ದ್ವೇಷಕ್ಕೊಂದು ಸಣ್ಣ ನಿದರ್ಶನವಷ್ಟೇ. ಈ ಅನ್ಯಾಯದ ವಿರುದ್ಧ ಈಗ ಜಗತ್ತಿನಾದ್ಯಂತ ಹೋರಾಟದ ಕೂಗು ಎದ್ದಿದೆ. ಈ ನಡುವೆಯೇ ತಮಿಳು ನಟ ದಳಪತಿ ವಿಜಯ್‌ ನಟನೆಯ ‘ಮಾಸ್ಟರ್‌’ ಚಿತ್ರದ ನಾಯಕಿ ಮಾಳವಿಕಾ ಮೋಹನನ್‌ ತಾವು ಶಾಲಾ ದಿನಗಳಲ್ಲಿ ಎದುರಿಸಿದ ಜನಾಂಗೀಯ ದ್ವೇಷದ ಯಾತನೆಯ ಕಥೆಯನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜಾರ್ಜ್‌ ಫ್ಲಾಯ್ಡ್‌ ಅವರ ಸಾವಿನ ಬಗ್ಗೆ ಮರುಕ ವ್ಯಕ್ತಪಡಿಸಿರುವ ಆಕೆ, ಜನಾಂಗೀಯ ದ್ವೇಷದ ವಿರುದ್ಧ ಎಲ್ಲರೂ ಆಂದೋಲನ ನಡೆಸಬೇಕು ಎಂದು ಕರೆ ನೀಡಿದ್ದಾರೆ. ಮಾಳವಿಕಾ ಮೋಹನನ್‌ ತಾನು ಅನುಭವಿಸಿದ ಯಾತನೆಯನ್ನು ವಿವರಿಸಿರುವುದು ಹೀಗೆ: ‘ನನಗೆ ಆಗ 14 ವರ್ಷ. ನನ್ನ ಆತ್ಮೀಯ ಸ್ನೇಹಿತನೊಬ್ಬ ಹೇಳಿದ ಸಂಗತಿ ನನ್ನಲ್ಲಿ ಅಚ್ಚರಿ ಮೂಡಿಸಿತು. ಅವನ ತಾಯಿ ಎಂದಿಗೂ ಆತನಿಗೆ ಚಹ ಕುಡಿಯಲು ಕೊಡುತ್ತಿರಲಿಲ್ಲವಂತೆ. ಚಹ ಕಪ್ಪಾಗಿದ್ದುದ್ದೇ ಇದಕ್ಕೆ ಕಾರಣ. ಕಪ್ಪು ಬಣ್ಣದ ಚಹ ಕುಡಿದರೆ ಮೈಬಣ್ಣ ಕಪ್ಪಾಗುತ್ತದೆ ಎಂಬುದು ಅವನ ಅಮ್ಮನ ತರ್ಕ. ಆದರೂ, ಆತನೊಮ್ಮೆ ಚಹ ನೀಡುವಂತೆ ಪರಿಪರಿಯಾಗಿ ಕೇಳಿದನಂತೆ. ಆಗ ಅವರಮ್ಮ ನೀನು ಚಹ ಕುಡಿದರೆ ನಿನ್ನ ಸ್ನೇಹಿತೆಯ (ಮಾಳವಿಕಾ ಮೋಹನನ್‌) ಮೈಬಣ್ಣದಂತೆ ನಿನ್ನ ಮೈಬಣ್ಣವೂ ಕಪ್ಪಾಗುತ್ತದೆ ಎಂದು ನನ್ನನ್ನು ಉದಾಹರಿಸಿ ಹೇಳಿದರಂತೆ’.

‘ನನ್ನ ಸ್ನೇಹಿತ ಮಹಾರಾಷ್ಟ್ರ ಮೂಲದವನಾಗಿದ್ದ. ಆತ ಬಿಳಿ ಮೈಬಣ್ಣ ಹೊಂದಿದ್ದ. ನಾನು ಗೋದಿಬಣ್ಣ ಹೊಂದಿದ್ದ ಮಲಯಾಳಿ ಹುಡುಗಿ. ಹೈಸ್ಕೂಲ್‌ ಹಂತದಲ್ಲಿ ನನ್ನ ಆತ್ಮೀಯ ಸ್ನೇಹಿತನ ತಾಯಿಯಿಂದಲೇ ಜನಾಂಗೀಯ ದೌರ್ಜನ್ಯದ ಪದ ಕೇಳಿ ನನಗೆ ಬೇಸರವಾಯಿತು’ ಎಂದಿದ್ದಾರೆ.

ADVERTISEMENT

ಇಂದಿಗೂ ಭಾರತೀಯ ಸಮಾಜದಲ್ಲಿ ಮೈಬಣ್ಣದ ಮೇಲೆ ವ್ಯಕ್ತಿಗಳ ಸ್ಥಾನಮಾನ ಅಳೆಯುವ ಮನಸ್ಥಿತಿ ಜೀವಂತವಾಗಿದೆ. ಕಪ್ಪುಬಣ್ಣದ ವ್ಯಕ್ತಿಯನ್ನು ‘ಕಾಳ’ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತ ಮತ್ತು ಈಶಾನ್ಯ ಭಾರತದ ಜನರ ನಡುವೆಯೇ ಇಂತಹ ತಾರತಮ್ಯದ ಮನಸ್ಥಿತಿ ಹೆಚ್ಚಿದೆ. ಕಪ್ಪುಬಣ್ಣದ ವ್ಯಕ್ತಿಗಳನ್ನು ‘ಮದ್ರಾಸಿ’ಗಳೆಂದು ಅಪಹಾಸ್ಯ ಮಾಡುವುದು ಸರ್ವೇಸಾಮಾನ್ಯ. ಕಪ್ಪು ಜನರನ್ನು ‘ನಿಗ್ರೊ‘ಗಳೆಂದು ಕರೆಯಲಾಗುತ್ತದೆ. ಬಿಳಿಯರು ಮಾತ್ರವೇ ಸುಂದರ ವ್ಯಕ್ತಿಗಳೆಂಬ ಮನೋಧರ್ಮ ಬೇರೂರಿದೆ ಎಂದು ಹೇಳಿದ್ದಾರೆ ಮಾಳವಿಕಾ.

‘ಜಾಗತಿಕ ಜನಾಂಗೀಯ ದ್ವೇಷ, ಸಂಘರ್ಷದ ಬಗ್ಗೆ ನಾವಿಂದು ಮಾತನಾಡಬೇಕಿದೆ. ಸಮಾಜ, ಕುಟುಂಬ, ಸ್ನೇಹಿತರೊಟ್ಟಿಗೆ ಇರುವಾಗ ನಡೆಯುವ ಇಂತಹ ಸಂಘರ್ಷಗಳ ಬಗ್ಗೆಯೂ ಅರಿವು ಹೊಂದಬೇಕಿದೆ. ಬಣ್ಣದ ಮೇಲೆ ಜನರ ವ್ಯಕ್ತಿತ್ವ ನಿರ್ಧರಿಸುವುದು ಸಲ್ಲದು. ಅವರ ಒಳ್ಳೆಯತನ ಮತ್ತು ಮಾನವೀಯ ಮೌಲ್ಯಗಳೇ ನಮ್ಮೆಲ್ಲರಿಗೂ ಮಾದರಿಯಾಗಬೇಕು’ ಎಂದು ಆಶಿಸಿದ್ದಾರೆ.

ಅಂದಹಾಗೆ ಮಾಳವಿಕಾ ಮೋಹನನ್‌ ನಾಲ್ಕು ವರ್ಷದ ಹಿಂದೆ ಪ್ರೀತಂ ಗುಬ್ಬಿ ನಿರ್ದೇಶಿಸಿದ್ದ ಕನ್ನಡದ ‘ನಾನು ಮತ್ತು ವರಲಕ್ಷ್ಮಿ’ ಚಿತ್ರದಲ್ಲೂ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.