ADVERTISEMENT

ಕಾನೂನು ಹೋರಾಟ: ರಕ್ಷಿತ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 5:31 IST
Last Updated 27 ಫೆಬ್ರುವರಿ 2020, 5:31 IST
ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ   

ಬೆಂಗಳೂರು: ಕಾಪಿರೈಟ್‌ ಉಲ್ಲಂಘಿಸಿ ‘ಕಿರಿಕ್‌ ಪಾರ್ಟಿ’ ಸಿನಿಮಾದಲ್ಲಿ ಹಾಡು ಬಳಸಿದ ಆರೋಪ ಸಂಬಂಧ ತಮ್ಮ ವಿರುದ್ಧ ನ್ಯಾಯಾಲಯ ಜಾಮೀನುರಹಿತ ವಾರಂಟ್ ಹೊರಡಿಸಿರುವುದಕ್ಕೆ ಟ್ವೀಟ್‌ ಮೂಲಕ ರಕ್ಷಿತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಸಿವಿಲ್ ಮತ್ತು ಹೈಕೋರ್ಟ್‌ನಲ್ಲಿ ಕೇಸ್ ಗೆದ್ದಿದ್ದೇವೆ. ಮತ್ತೆ ಅದೇ ಪ್ರಕರಣದ ಮೇಲೆ ಇನ್ನೊಂದು ಕೇಸ್‌ ದಾಖಲಿಸುವುದರಿಂದ ಯಾವ ಪ್ರಯೋಜನವಿದೆ. ಆರು ತಿಂಗಳ ಹಿಂದೆ ಎರಡನೇ ಪ್ರಕರಣ ದಾಖಲಿಸಿದ್ದ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ ಯಾಕೆ’ ಎಂದು ರಕ್ಷಿತ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ.

‘ನಾವು ಮತ್ತೆ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಆಗ ನಮ್ಮ ಸಿನಿಮಾ ಬಿಡುಗಡೆಗೆ ಕಷ್ಟವಾಗಿತ್ತು. ಕೊನೆಯ ಕ್ಷಣದಲ್ಲಿ ಹಾಡನ್ನು ಕತ್ತರಿಸಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು’ ಎಂದು ರಕ್ಷಿತ್ ಶೆಟ್ಟಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ADVERTISEMENT

ಲಹರಿ ಸಂಸ್ಥೆಯು ಎರಡನೇ ಪ್ರಕರಣ ದಾಖಲಿಸಿರುವ ಸಂಬಂಧ ರಕ್ಷಿತ್‌ ಶೆಟ್ಟಿ ಮತ್ತು ತಂಡ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದಕ್ಕೆ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ. 2016ರ ಡಿಸೆಂಬರ್ 30ರಂದು ಬಿಡುಗಡೆ ಆದ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ‘ಹೇಯ್‌ ಹೂ ಆರ್‌ ಯೂ’ ಹಾಡನ್ನು ಲಹರಿ ಸಂಸ್ಥೆಯ ಅನುಮತಿ ಇಲ್ಲದೆ ಬಳಸಲಾಗಿತ್ತು. ‘ಶಾಂತಿ ಕ್ರಾಂತಿ’ ಚಿತ್ರದ ಹಾಡನ್ನು ಚಿತ್ರದಲ್ಲಿ ಬಳಸಿಕೊಂಡಿದ್ದರಿಂದ ಲಹರಿ ಸಂಸ್ಥೆ 2017ರ ಜ. 11ರಂದು ದೂರು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.