ADVERTISEMENT

Sandalwood: ‘ಶಾಕುಂತಲೆ’ಯ ‘ಕಾಜಾಣ’ ಕಥೆ

ಅಭಿಲಾಷ್ ಪಿ.ಎಸ್‌.
Published 8 ಜನವರಿ 2026, 23:30 IST
Last Updated 8 ಜನವರಿ 2026, 23:30 IST
ಐಶಾನಿ ಶೆಟ್ಟಿ 
ಐಶಾನಿ ಶೆಟ್ಟಿ    

ನಟ ರಕ್ಷಿತ್‌ ಶೆಟ್ಟಿ ನಾಯಕರಾಗಿ ನಟಿಸಿದ್ದ ‘ವಾಸ್ತು ಪ್ರಕಾರ’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಐಶಾನಿ ಶೆಟ್ಟಿ ತಮ್ಮ ನಿರ್ದೇಶನದ ಮೊದಲ ಸಿನಿಮಾದ ಶೀರ್ಷಿಕೆ ಘೋಷಿಸಿದ್ದಾರೆ. ‘ಕಾಜಾಣ’ ಎಂಬ ಶೀರ್ಷಿಕೆಯ ಸಿನಿಮಾದಲ್ಲಿ ಐಶಾನಿಯೇ ಮುಖ್ಯಭೂಮಿಕೆಯಲ್ಲಿದ್ದು, 2026ರಲ್ಲೇ ಚಿತ್ರ ತೆರೆಗೆ ಬರಲಿದೆ. 

ಚಂದನವನದಲ್ಲಿ ‘ಶಾಕುಂತಲೆ’ ಎಂದೇ ಗುರುತಿಸಿಕೊಂಡಿರುವ ಐಶಾನಿ, ‘ಗಣಿ ಬಿ.ಕಾಂ ಪಾಸ್‌’, ‘ಹೊಂದಿಸಿ ಬರೆಯಿರಿ’, ‘ಧರಣಿ ಮಂಡಲ ಮಧ್ಯದೊಳಗೆ’ ಹೀಗೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ‘ಶಾಕುಂತಲೆ ಸಿನಿಮಾಸ್‌’ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದ ಅವರು, ಅದೇ ನಿರ್ಮಾಣ ಸಂಸ್ಥೆಯಡಿ ‘ಕಾಜಾಣ’ವನ್ನು ತೆರೆಗೆ ತರುತ್ತಿದ್ದಾರೆ. ‘ಕಾಜಿ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿ, ಇದೀಗ ಸಿನಿಮಾ ನಿರ್ದೇಶನಕ್ಕಿಳಿದ ಅನುಭವ ಬಿಚ್ಚಿಟ್ಟಿದ್ದಾರೆ. 

‘ಮೊದಲ ಕಿರುಚಿತ್ರ ‘ಕಾಜಿ’ ಬಳಿಕ ನಿರ್ದೇಶನದ ಆಸೆ ಮತ್ತಷ್ಟು ಚಿಗುರಿತು. ಇದಕ್ಕಾಗಿ ಸಮಯ ತೆಗೆದುಕೊಂಡೆ. ಸುಮಾರು ಎರಡು ವರ್ಷಗಳ ಹಿಂದೆ ‘ಕಾಜಾಣ’ ಕಥೆ ಹುಟ್ಟಿತು. ಒಂದು ಘಟನೆಯಿಂದ ಸ್ಫೂರ್ತಿ ಪಡೆದು ಇದನ್ನು ಬರೆದೆ. ಇದರ ಬರವಣಿಗೆ, ಚಿತ್ರಕಥೆಯೂ ನನ್ನದೇ. ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡದಲ್ಲೇ ಚಿತ್ರೀಕರಣಗೊಳ್ಳುತ್ತಿದೆ. ಅಲ್ಲಿನ ಸಂಸ್ಕೃತಿಯ ಕುರಿತ ಕೌಟುಂಬಿಕ ಸಿನಿಮಾವಿದು. ಬಹಳ ಜೀವಂತಿಕೆ ಇರುವ ಕಥೆಯಲ್ಲಿ ನಾನೇ ಮುಖ್ಯಭೂಮಿಕೆಯಲ್ಲಿದ್ದೇನೆ. ಡ್ರಾಮಾ ಜಾನರ್‌ನಲ್ಲಿ ಈ ಸಿನಿಮಾವಿದೆ’ ಎನ್ನುತ್ತಾರೆ ಐಶಾನಿ. 

ADVERTISEMENT

‘ಏಕೆ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ’ ಎನ್ನುವ ಪ್ರಶ್ನೆಗೆ, ‘ಮೊದಲಿನಿಂದಲೂ ನನ್ನ ಸಿನಿಗ್ರಾಫ್‌ ನೋಡಿದರೆ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡವಳು ನಾನಲ್ಲ. ಇಷ್ಟವಾಗುವ ಕಥೆಗಳನ್ನಷ್ಟೇ ಮಾಡುತ್ತೇನೆ ಎಂದು ಚಿತ್ರರಂಗಕ್ಕೆ ಬಂದಾಗಲೇ ಹೇಳಿದ್ದೆ. ಸಂಖ್ಯೆಗಳ ಹಿಂದೆ ಬಿದ್ದವಳು ನಾನಲ್ಲ. ಇತ್ತೀಚಿನ ದಿನಗಳಲ್ಲಿ ಭಿನ್ನವಾದ ಕಥೆಗಳನ್ನು ಹೇಳಬೇಕು ಎನ್ನುವ ತುಡಿತ ಹೆಚ್ಚಾಯಿತು. ಹೀಗಾಗಿ ‘ಶಾಕುಂತಲೆ ಸಿನಿಮಾಸ್‌’ ಹುಟ್ಟುಹಾಕಿದೆ. ನನ್ನ ಸ್ನೇಹಿತರು, ಸಂಬಂಧಿಕರು ನನ್ನ ಜೊತೆ ಕೈಜೋಡಿಸಿದ್ದಾರೆ. ಬೇರೆ ನಿರ್ಮಾಪಕರ ಬಳಿ ಹೋಗುವುದಕ್ಕಿಂತ ನಮ್ಮದೇ ಬ್ಯಾನರ್‌ನಲ್ಲಿ ‘ಕಾಜಾಣ’ ತರಲು ನಿರ್ಧರಿಸಿದೆವು’ ಎಂದರು. 

ಏನೀ ‘ಕಾಜಾಣ’?

‘ನನ್ನ ಕಥೆಗೆ ಸೂಕ್ತವಾಗುವ ಶೀರ್ಷಿಕೆಯ ಹುಡುಕಾಟದಲ್ಲಿ ದೊರೆತ ಪದವಿದು. ಒಂದು ಕೃತಿಯಲ್ಲಿ ‘ಕಾಜಾಣ’ದ ಬಗ್ಗೆ ಒಂದಿಷ್ಟು ಮಾಹಿತಿ ಇತ್ತು. ಕುವೆಂಪು ಅವರ ಕೃತಿಗಳ ಮುಖಪುಟದಲ್ಲೇ ಇದರ ಚಿತ್ರವಿದೆ. ಈ ಹಕ್ಕಿಯ ಗುಣಲಕ್ಷಣಗಳನ್ನು ತಿಳಿದುಕೊಂಡಾಗ, ನನ್ನ ಕಥೆಯಲ್ಲಿರುವ ನಾಯಕಿಗೆ ಹೋಲಿಕೆಯಾದವು. ಹೀಗಾಗಿ ಸಾಂಕೇತಿಕವಾಗಿ ಇದನ್ನು ಬಳಸಿದೆ. ಸಿನಿಮಾಗೆ ಪೂರಕವಾಗಿ ತಾಂತ್ರಿಕ ತಂಡವಿದೆ. ವಿಶ್ವಜಿತ್‌ ರಾವ್‌ ಅವರ ಛಾಯಾಚಿತ್ರಗಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ. ‘ರಾಕೆಟ್‌’ನಲ್ಲಿ ಪೂರ್ಣ ಅವರ ಜೊತೆ ಕೆಲಸ ಮಾಡಿದ್ದೆ’ ಎನ್ನುತ್ತಾರೆ ಐಶಾನಿ.

‘ಸಿನಿಮಾದಲ್ಲಿ ಹಾಡುಗಾರ್ತಿಯಾಗಿ ಕಾಣಿಸಿಕೊಳ್ಳುವುದಿಲ್ಲ, ಆದರೆ ಸಂಗೀತದಲ್ಲಿ ಯಾವ ರೀತಿ ಜೀವಂತಿಕೆ ಇದೆಯೋ ಅದೇ ರೀತಿ ವ್ಯಕ್ತಿತ್ವ ನನ್ನ ಪಾತ್ರಕ್ಕಿದೆ’ ಎಂದರು. 

‘ನಟನೆ–ನಿರ್ದೇಶನದಲ್ಲಿ ಮೊದಲ ಆಯ್ಕೆ ಎಂದಿಲ್ಲ. ಎರಡೂ ನನಗಿಷ್ಟ. ನಿರ್ದೇಶನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇನೆ. ಇದರಲ್ಲಿ ಯಶಸ್ಸು ಕಂಡರೆ ಇನ್ನೊಂದಿಷ್ಟು ಕಥೆಗಳನ್ನು ಹೇಳುವ ಆಸೆ ಇದೆ. ‘ಶಾಕುಂತಲೆ ಸಿನಿಮಾಸ್‌’ನಡಿ ಸದ್ಯಕ್ಕೆ ಈ ಪ್ರಾಜೆಕ್ಟ್‌ಗೆ ಆದ್ಯತೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಹೊಸಬರ ಕಥೆಗಳನ್ನೂ ಹೇಳಲಿದ್ದೇವೆ. ಭಿನ್ನವಾದ ಕಥೆಗಳು ಬರಬೇಕು ಎನ್ನುವುದೇ ನನ್ನ ಆಸೆ’ ಎಂದರು ಐಶಾನಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.