ADVERTISEMENT

ವಿಭಿನ್ನ ಪ್ರೇಮಕಥೆಯ ಪಯಣ; ಐಶ್ವರ್ಯಾ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 23:30 IST
Last Updated 12 ಫೆಬ್ರುವರಿ 2026, 23:30 IST
ನಿರಂಜನ್‌, ಐಶ್ವರ್ಯಾ ಸರ್ಜಾ
ನಿರಂಜನ್‌, ಐಶ್ವರ್ಯಾ ಸರ್ಜಾ   

ಐಶ್ವರ್ಯಾ ಸರ್ಜಾ, ನಿರಂಜನ್‌ ನಟನೆಯ ‘ಸೀತಾ ಪಯಣ’ ಸಿನಿಮಾ (ಫೆ.14) ಪ್ರೇಮಿಗಳ ದಿನದಂದು ತೆರೆ ಕಾಣುತ್ತಿದೆ. ತಮಗಾಗಿಯೇ ತಂದೆ ಅರ್ಜುನ್‌ ಸರ್ಜಾ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ ಕುರಿತು ಐಶ್ವರ್ಯಾ ಮಾತನಾಡಿದ್ದಾರೆ.

‘ಚಿತ್ರದ ಶೀರ್ಷಿಕೆಯೇ ಹೇಳುವಂತೆ ಸೀತಾಳ ಪ್ರೇಮ ಪಯಣವಿದು. ಇವತ್ತಿನ ಕಾಲದ ಪ್ರೇಮಕಥೆ. ನಾನು ಚಿತ್ರದಲ್ಲಿ ಶೆಫ್‌. ನನ್ನ ಬದುಕಿನಲ್ಲಿ ನಡೆಯುವ ಒಂದಷ್ಟು ಘಟನೆಗಳೊಂದಿಗೆ ವಿಭಿನ್ನವಾದ ಪ್ರೇಮಕಥೆಯನ್ನು ನನ್ನ ತಂದೆ ಹೆಣೆದಿದ್ದಾರೆ’ ಎಂದು ಮಾತು ಪ್ರಾರಂಭಿಸಿದರು ಐಶ್ವರ್ಯಾ.

ಚಿತ್ರರಂಗದಲ್ಲಿ ಯಶಸ್ಸನ್ನು ಎದುರು ನೋಡುತ್ತಿರುವ ಇವರಿಗೆ ಇದು ನಾಲ್ಕನೆ ಸಿನಿಮಾ. 2013ರಲ್ಲಿಯೇ ತಮಿಳು ಸಿನಿಮಾದೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡದಲ್ಲಿ ಈಗಾಗಲೇ ಒಂದು ಸಿನಿಮಾ ಮಾಡಿದ್ದು, ಈ ಚಿತ್ರದ ಮೂಲಕ ತೆಲುಗಿನಲ್ಲಿಯೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ನನ್ನ ಪ್ರತಿಭೆಯನ್ನು ಗುರುತಿಸಿ ಅಪ್ಪ ಈ ಸಿನಿಮಾಗೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಹಿಂದಿನ ಸಿನಿಮಾ ‘ಪ್ರೇಮ ಬರಹ’ಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಅದಾದ ಬಳಿಕ ಅವಕಾಶಗಳು ಸಿಗಲಿಲ್ಲ. ಒಳ್ಳೆಯ ಅವಕಾಶಗಳಿಗೆ ಎದುರು ನೋಡುತ್ತಿರುವೆ. ಆದರೆ ಅವಕಾಶ ಸಿಗುವುದು ನಮ್ಮ ಕೈಯಲ್ಲಿ ಇಲ್ಲ. ಎಲ್ಲದಕ್ಕೂ ಕಾಲ ಕೂಡಿರಬೇಕು’ ಎನ್ನುತ್ತಾರೆ ಅವರು.

ADVERTISEMENT

ಬಿಕಾಂ ಪದವಿ ಮುಗಿಸಿರುವ ಇವರು, ಫ್ಯಾಷನ್‌ ವಿನ್ಯಾಸದಲ್ಲಿಯೂ ತರಬೇತಿ ಪಡೆದಿದ್ದಾರೆ. ಬಳಿಕ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಅನುಪಮ್‌ ಖೇರ್‌ ನಟನಾ ಶಾಲೆ ಸೇರಿದಂತೆ ಕೆಲವು ಕಡೆ ನಟನೆಗೆ ಸಂಬಂಧಿಸಿದ ತರಬೇತಿ ಪಡೆದಿದ್ದಾರೆ. ‘ಬಹಳ ಪ್ರೀತಿಯಿಂದ ಆಯ್ದುಕೊಂಡ ಕ್ಷೇತ್ರವಿದು. ಕುಟುಂಬದಲ್ಲಿ ಎಲ್ಲರೂ ಕಲಾವಿದರು. ಹಾಗಾಗಿ ನನ್ನಲ್ಲಿಯೂ ಅದರತ್ತ ಒಲವಿತ್ತು. ಬಾಲ್ಯದಿಂದಲೇ ಅವಕಾಶಗಳು ಬರುತ್ತಿದ್ದವು. ಆದರೆ ನಾನು ಈ ಜವಾಬ್ದಾರಿಯನ್ನು ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡುವವರಗೆ ಈ ಕ್ಷೇತ್ರಕ್ಕೆ ಬರಲಿಲ್ಲ. ಸದ್ಯ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಈ ಸಿನಿಮಾವನ್ನು ಜನ ಸ್ವೀಕರಿಸುತ್ತಾರೆ ಎಂಬ ಭರವಸೆಯಿದೆ. ಇದಾದ ಬಳಿಕ ಮುಂದಿನ ಯೋಜನೆಗಳತ್ತ ಆಲೋಚಿಸುವೆ’ ಎಂದು ಮಾತಿಗೆ ವಿರಾಮವಿತ್ತರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.