ಸಿನಿಮಾ ಕ್ಷೇತ್ರದಿಂದ ಧಾರಾವಾಹಿ ಲೋಕಕ್ಕೆ ಕಾಲಿಟ್ಟು ಜನಪ್ರಿಯರಾದ ನಟಿ ಐಶ್ವರ್ಯಾ ಪಿಸ್ಸೆ ಕಿರುತೆರೆ ಜತೆಗೆ ಮತ್ತೆ ಹಿರಿತೆರೆಯಲ್ಲಿಯೂ ಸಕ್ರಿಯರಾಗುತ್ತಿದ್ದಾರೆ. ಅವರು ತಮ್ಮ ಸಿನಿಪಯಣ ಕುರಿತು ಮಾತನಾಡಿದ್ದಾರೆ.
‘ಸಿನಿಮಾವೊಂದು ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಿದ್ಧವಿದೆ. ಶೀರ್ಷಿಕೆ ಅಂತಿಮವಾಗಿಲ್ಲ. ಶೀಘ್ರದಲ್ಲಿ ಸಿನಿಮಾ ತಂಡದಿಂದ ಚಿತ್ರದ ಇನ್ನಷ್ಟು ವಿವರಗಳು ಹೊರಬರಲಿವೆ. ಪೂರ್ಣಪ್ರಮಾಣದ ನಾಯಕಿಯಾಗಿ ಇದು ನನ್ನ ಮೊದಲ ಸಿನಿಮಾ. ಜತೆಗೆ ಎರಡು ಧಾರಾವಾಹಿಗಳಲ್ಲಿ ನಟಿಸುತ್ತಿರುವೆ. ಹೀಗಾಗಿ ಸಿನಿಮಾಕ್ಕೆ ಹೆಚ್ಚು ಸಮಯ ನೀಡಲು ಆಗುತ್ತಿಲ್ಲ’ ಎಂದು ಮಾತು ಪ್ರಾರಂಭಿಸಿದರು ಐಶ್ವರ್ಯಾ.
‘ಸಂತು ಸ್ಟ್ರೈಟ್ ಫಾವರ್ಡ್’ ಚಿತ್ರದಲ್ಲಿ ಯಶ್ ತಂಗಿಯಾಗಿ ಇವರ ಸಿನಿಪಯಣ ಪ್ರಾರಂಭವಾಯಿತು. ಬಳಿಕ ಶಿವರಾಜ್‌ಕುಮಾರ್ ನಟನೆಯ ‘ಶ್ರೀಕಂಠ’ ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ ಇವರು ಸಿನಿಮಾಕ್ಕಿಂತ ಹೆಚ್ಚಾಗಿ ಗುರುತಿಸಿಕೊಂಡಿದ್ದು ಕಿರುತೆರೆಯಲ್ಲಿ.
‘ನನಗೆ ಸಿನಿಮಾಗಳಿಗಿಂತ ಧಾರಾವಾಹಿಗಳಲ್ಲಿಯೇ ಒಲವು ಹೆಚ್ಚು. ಪ್ರಸ್ತುತ ‘ಮಾಂಗಲ್ಯ’ ಧಾರಾವಾಹಿಯಲ್ಲಿ ನಟಿಸುತ್ತಿರುವೆ. ಜತೆಗೆ ತೆಲುಗಿನಲ್ಲೊಂದು ಧಾರಾವಾಹಿ ಸಾವಿರ ಸಂಚಿಕೆಗಳನ್ನು ಪೂರೈಸಿದೆ. ನನ್ನನ್ನು ಜನ ಸಿನಿಮಾಕ್ಕಿಂತ ಹೆಚ್ಚಾಗಿ ಕಿರುತೆರೆಯಿಂದಲೇ ಗುರುತಿಸುತ್ತಾರೆ ಅನ್ನಿಸುತ್ತದೆ. ಇತ್ತೀಚೆಗಷ್ಟೇ ‘ಮಾಂಗಲ್ಯ’ ಧಾರಾವಾಹಿಯ ಪ್ರಚಾರಕ್ಕಾಗಿ ಧಾರವಾಡಕ್ಕೆ ಹೋಗಿದ್ದೆವು. ಅಲ್ಲಿನ ಜನರ ಪ್ರೀತಿ ಕಂಡು ಅಚ್ಚರಿಯಾಯಿತು. ಅವರು ‘ಮಯೂರಿ’ ಪಾತ್ರಕ್ಕೆ ನೀಡುತ್ತಿರುವ ಪ್ರೀತಿಗೆ ನಿಜಕ್ಕೂ ನಾನು ಋಣಿ. ಎಲ್ಲಿಗೆ ಹೋದರೂ ನನ್ನ ಧಾರಾವಾಹಿ ಪಾತ್ರಗಳಿಂದ ಗುರುತು ಹಿಡಿಯುತ್ತಾರೆ’ ಎನ್ನುತ್ತಾರೆ.
‘ಅನುರೂಪ’ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ಅದಾದ ಬಳಿಕ ‘ಗಿರಿಜಾ ಕಲ್ಯಾಣ’, ‘ಸರ್ವಮಂಗಲ ಮಾಂಗಲ್ಯೆ’, ‘ಸುಂದರಿ’ ಧಾರಾವಾಹಿಗಳಲ್ಲಿ ನಟಿಸಿದರು. ‘ಸುಂದರಿ’ ಧಾರಾವಾಹಿಯಲ್ಲಿ ಮೈಬಣ್ಣ ಕಪ್ಪಾಗಿರುವ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡರು. ‘ಈ ಪಾತ್ರ ರೂಪಕ್ಕಿಂತ ನಟನೆ ಎಷ್ಟು ಮುಖ್ಯ ಎಂದು ತೋರಿಸಿತು. ನೋಡಲು ಸುಂದರವಾಗಿದ್ದರೂ ಪ್ರತಿನಿತ್ಯ ಕಪ್ಪು ಹುಡುಗಿಯಾಗಿ ಕಾಣಿಸಿಕೊಳ್ಳುವುದು ಸವಾಲಾಗಿತ್ತು. ಮೂರು ವರ್ಷಗಳ ಕಾಲ ಈ ಪಾತ್ರದಲ್ಲಿ ಕಾಣಿಸಿಕೊಂಡೆ’ ಎಂದರು.
‘ಸಾಕಷ್ಟು ಸಿನಿಮಾ ಅವಕಾಶಗಳು ಬರುತ್ತವೆ. ತೆಲುಗಿನಲ್ಲಿ ಸ್ಟಾರ್ ನಟರ ಸಿನಿಮಾಗಳಿಂದಲೇ ಅವಕಾಶ ಸಿಕ್ಕಿತ್ತು. ಆದರೆ ಪಾತ್ರ ಪೋಷಣೆ ಉತ್ತಮವಾಗಿರುವುದಿಲ್ಲ. ಹೀಗಾಗಿ ತಿರಸ್ಕರಿಸುತ್ತೇನೆ. ನನಗೆ ಸಿನಿಮಾದಲ್ಲಿ ಪಾತ್ರ ಗಟ್ಟಿಯಾಗಿರಬೇಕು. ಇಲ್ಲವಾದಲ್ಲಿ ಕಿರುತೆರೆಯಂತೂ ಇದ್ದೇ ಇದೆ. ಕೆಲ ಸಿನಿಮಾ ಕಥೆಗಳನ್ನು ಕೇಳಿರುವೆ. ಒಂದೆರಡು ಅಂತಿಮ ಹಂತದಲ್ಲಿವೆ. ಕಿರುತೆರೆ ಜತೆಗೆ ಇವುಗಳನ್ನು ನಿಭಾಯಿಸುವೆ’ ಎಂದು ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.