ಅಜಯ್ ರಾವ್
ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ ಚಿತ್ರ ಏ.18 ರಂದು ತೆರೆ ಕಾಣುತ್ತಿದೆ. ತಮ್ಮದೇ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿರುವ ಅವರು, ಚಿತ್ರ ಹಾಗೂ ಸಿನಿಪಯಣದ ಕುರಿತು ಮಾತನಾಡಿದ್ದಾರೆ.
ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ...
ಪಾತ್ರದ ಹೆಸರು ಭರತ್. ವಕೀಲನ ಪಾತ್ರ. ಭರತಖಂಡವನ್ನು ಪ್ರತಿನಿಧಿಸುವವ. ಭರತ ಎಂದರೆ ಪುರುಷ, ಹೆಣ್ಣಿನ ರಕ್ಷಣೆಗಾಗಿ, ಧರ್ಮಕ್ಕಾಗಿ ಹೋರಾಡುವವನು. ಇಲ್ಲಿ ಹೆಣ್ಣು ಎಂದರೆ ಪ್ರಕೃತಿ ಎಂಬ ಅರ್ಥವೂ ಇದೆ. ನ್ಯಾಯಾಲಯದಲ್ಲಿ ನ್ಯಾಯ, ನೀತಿ, ಧರ್ಮಕ್ಕಾಗಿ ಹೋರಾಟ ಮಾಡುತ್ತೇನೆ.
ಹೆಣ್ಣಿನ ಶೋಷಣೆಯ ವಿರುದ್ಧ ಯುದ್ಧವೇ?
ಏಳು ವರ್ಷದ ಪುಟಾಣಿ ಮೇಲೆ ಅತ್ಯಾಚಾರವಾಗುತ್ತದೆ. ನ್ಯಾಯಲಯದ ಮೆಟ್ಟಿಲು ಹತ್ತಿದ ಈ ಪ್ರಕರಣದಲ್ಲಿ ಎಷ್ಟು ವರ್ಷವಾದರೂ ನ್ಯಾಯ ಸಿಗುವುದಿಲ್ಲ. ಮಗುವಿನ ತಾಯಿ ಒಂಟಿಯಾಗಿ ನ್ಯಾಯಕ್ಕಾಗಿ ಹೋರಾಡುತ್ತಾಳೆ. ಕೊನೆಗೆ ನ್ಯಾಯ ಸಿಗದಿದ್ದಾಗ ಆಕೆಯೇ ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಾಳೆ. ಇಲ್ಲಿ ತಪ್ಪು ಕಾನೂನು ಕೈಗೆತ್ತಿಕೊಂಡ ತಾಯಿಯದ್ದಾ ಅಥವಾ ನ್ಯಾಯವನ್ನು ನೀಡಲು ವಿಫಲವಾದ ವ್ಯವಸ್ಥೆಯದ್ದಾ ಎಂಬುದೇ ಚಿತ್ರದ ಕಥೆ. ಎಷ್ಟೋ ಪ್ರಕರಣಗಳಿಗೆ ಎಷ್ಟು ವರ್ಷವಾದರೂ ಮುಕ್ತಿ ಸಿಗುವುದಿಲ್ಲ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯ, ನ್ಯಾಯಾಧೀಶರು ಇಲ್ಲ. ಹೀಗಾಗಿ ತೀರ್ಪು ನೀಡುವಲ್ಲಿ ವಿಳಂಬವಾಗುತ್ತಿದೆ. ಆದರೆ ಹಸಿವಿರುವಾಗಲೇ ಊಟ ಸಿಗಬೇಕು. ಆ ನಿಟ್ಟಿನಲ್ಲಿ ನ್ಯಾಯಾಲಯದ ವ್ಯವಸ್ಥೆಯತ್ತ ಬೆಳಕು ಚೆಲ್ಲುವ ಚಿತ್ರ.
ಇಂಥ ಗಂಭೀರ ವಿಷಯದ ಸಿನಿಮಾವನ್ನು ಜನ ಚಿತ್ರಮಂದಿರದಲ್ಲಿ ನೋಡುತ್ತಾರೆಂಬ ವಿಶ್ವಾಸವಿದೆಯಾ?
ವಿಷಯ ಗಂಭೀರ. ಆದರೆ ಚಿತ್ರದಲ್ಲಿ ಮನರಂಜನೆ ಅಂಶಗಳು ಇವೆ. ಇಂಥ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡೋಣ ಎಂಬ ಪರಿಸ್ಥಿತಿ ಬಂದಿದೆ. ಆದರೆ ಜನ ಇದನ್ನು ಚಿತ್ರಮಂದಿರದಲ್ಲಿ ನೋಡಿದರೆ ಮಾತ್ರ ನಿರ್ಮಾಪಕರು ಬದುಕಲು ಸಾಧ್ಯ. ಆಗ ಇನ್ನಷ್ಟು ಉತ್ತಮ ಕಂಟೆಂಟ್ ಸಿನಿಮಾಗಳು ಬರುತ್ತವೆ. ಬೇರೆ ಭಾಷೆಯ ಗಂಭೀರವಾದ ಕಥಾವಸ್ತುವಿನ ಸಿನಿಮಾಗಳನ್ನು ಪ್ರೋತ್ಸಾಹಿಸುವಂತೆ ಕನ್ನಡದ ಈ ರೀತಿ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು. ಜನರಲ್ಲಿ ನಾವು ಈ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಳ್ಳಬಹುದಷ್ಟೆ. ಅದಕ್ಕಿಂತ ಹೆಚ್ಚು ಏನೂ ಹೇಳಲು ಸಾಧ್ಯವಿಲ್ಲ. ಸಿನಿಮಾ ಚೆನ್ನಾಗಿದೆ. ಹೀಗಾಗಿ ಪ್ರೇಕ್ಷಕರು ಈ ಚಿತ್ರಕ್ಕೆ ನ್ಯಾಯ ನೀಡುತ್ತಾರೆ ಎಂಬ ವಿಶ್ವಾಸವಿದೆ.
ನಿರ್ದೇಶಕ ಪವನ್ ಭಟ್, ಈ ಹಿಂದೆ ಅಚ್ಚುಕಟ್ಟಾದ ಬಜೆಟ್‌ನಲ್ಲಿ ‘ಕಟಿಂಗ್ ಶಾಪ್’ ಎಂಬ ಉತ್ತಮ ಸಿನಿಮಾ ಮಾಡಿದ್ದರು. ಅವರು ಓರ್ವ ನಿರ್ಮಾಪಕನನ್ನು ಸಾಲದ ಸುಳಿಯಲ್ಲಿ ಸಿಲುಕಿಸುವಷ್ಟು ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡಿದ್ದಾರಾ?
ನಾನು ಶೋವೊಂದರಲ್ಲಿ ಮಾತನಾಡಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರ ಕಲ್ಪನೆಗೆ ತಕ್ಕಂತೆ ಹಾಕುತ್ತಿದ್ದಾರೆ. ನಾನು ಎಲ್ಲಿಯೂ ಈ ಸಿನಿಮಾಗಾಗಿ ಸಾಲ ಮಾಡಿದ್ದೇನೆ ಎಂದು ಹೇಳಿಲ್ಲ. ನನಗೆ ಇಷ್ಟು ಸಾಲ ಸಿಗುತ್ತದೆ. ಅಂದರೆ ಅಷ್ಟು ಆದಾಯ ತೆರಿಗೆ ಕಟ್ಟುತ್ತೇನೆ. ಅದರ ಬಗ್ಗೆ ಖುಷಿ ಇದೆ ಎಂದು ಹೇಳಿಕೊಂಡಿದ್ದೆ. ಮನೆ ಕಟ್ಟಿರುವೆ, ಬೇರೆ ಬೇರೆ ಕಾರಣಕ್ಕೆ ಸಾಲವಿದೆ. ಹಾಗಂತ ಆ ಬಗ್ಗೆ ಬೇಸರವಿಲ್ಲ. ತೀರಿಸುವ ಶಕ್ತಿ ಭಗವಂತ ಕೊಟ್ಟಿದ್ದಾನೆ. ಖುಷಿಯ ಸಂಗತಿಗಳಿಗಾಗಿ ಸಾಲ ಮಾಡಿರುವೆ. ಕಾರು ಮಾರಿದ್ದಕ್ಕೆ ನನ್ನ ಮಗಳು ಕಣ್ಣೀರು ಹಾಕುತ್ತಿರುವ ವಿಡಿಯೊ ಮೊನ್ನೆಯಿಂದ ಹರಿದಾಡುತ್ತಿದೆ. ಅದು ಎರಡು ವರ್ಷಗಳ ಹಳೆಯ ವಿಡಿಯೊ. ಅದನ್ನು ಯಾರು ವಿಡಿಯೊ ಮಾಡಿದ್ದರು, ಈಗ ಯಾರು ಪೋಸ್ಟ್ ಮಾಡಿದ್ದು ಗೊತ್ತಿಲ್ಲ. ಯಾರ ಬಳಿಯೂ ಫೋಟೊ ತೆಗೆಸಿಕೊಳ್ಳಲು, ವಿಡಿಯೊಗೆ ಅವಕಾಶ ನೀಡಲು ಭಯವಾಗುತ್ತದೆ. ಯಾರು ಯಾವ ವಿಡಿಯೊ ಮಾಡುತ್ತಾರೆ ಗೊತ್ತಾಗುವುದಿಲ್ಲ. ಅವಕಾಶ ನೀಡದಿದ್ದರೆ ಇವನಿಗೆ ಎಷ್ಟು ದುರಹಂಕಾರ ಎನ್ನುತ್ತಾರೆ.
ಸಾಕಷ್ಟು ಏಳುಬೀಳಿನ ಕುರಿತು ಮಾತನಾಡಿದ್ದೀರಿ. ಚಿತ್ರರಂಗದಲ್ಲಿನ ಈತನಕದ ಪಯಣ ಹೇಗಿತ್ತು?
ಬಹಳ ಖುಷಿಯಿದೆ. ಸಿನಿಮಾ ನೋಡುವಾಗ ಮುಂದೇನಾಗುತ್ತದೆ ಎಂಬ ಕುತೂಹಲ ಇರುತ್ತದೆ. ಇಲ್ಲದಿದ್ದರೆ ಸಿನಿಮಾ ಸಪ್ಪೆ ಎನ್ನಿಸುತ್ತದೆ. ಅದರಂತೆ ಬದುಕಿನಲ್ಲಿಯೂ ಏಳು ಬೀಳುಗಳಿರಬೇಕು. ಬೀಳದೆ ಇದ್ದರೆ ಬದುಕಿನಲ್ಲಿ ಮಜವೇ ಇರುವುದಿಲ್ಲ. ಆರೋಗ್ಯಯುತವಾದ ರಿಸ್ಕ್ ತೆಗೆದುಕೊಳ್ಳಬೇಕು. ಶ್ರಮಿಸುವ ಶಕ್ತಿ, ಸಾಮರ್ಥ್ಯವನ್ನು ದೇವರು ನೀಡಿದ್ದಾನೆ. ಕೆಲಸ ಇಲ್ಲದೇ ಕೂರುವುದು ಬದುಕಿನ ವೈಫಲ್ಯ. ಸದಾ ಕೆಲಸದಲ್ಲಿ ಮಗ್ನರಾಗಿರುವುದು, ಸವಾಲುಗಳನ್ನು ಸ್ವೀಕರಿಸುವುದು ಒಂದು ರೀತಿಯ ಯಶಸ್ಸು.
ನಿಮ್ಮ ಮುಂದಿನ ಸಿನಿಮಾಗಳ ಬಗ್ಗೆ...
ಮಂಜು ಸ್ವರಾಜ್ ನಿರ್ದೇಶನದ ರೆಟ್ರೊ ಶೈಲಿಯ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ‘ಫ್ಯಾಮಿಲಿ ಮ್ಯಾನ್’ ಚಿತ್ರ ಅರ್ಧ ಮುಗಿದಿದೆ. ಮತ್ತೊಂದು ಸಿನಿಮಾ ಪ್ರಾರಂಭದ ಹಂತದಲ್ಲಿದೆ. ‘ಯುದ್ಧಕಾಂಡ’ವನ್ನು ಜನ ಕೈಹಿಡಿದರೆ ನಮ್ಮ ನಿರ್ಮಾಣ ಸಂಸ್ಥೆಯಿಂದ ಇನ್ನಷ್ಟು ಸಿನಿಮಾ ಮಾಡುವ ಆಲೋಚನೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.