ಮುಂಬೈ: ನಟ ಸೈಫ್ ಅಲಿ ಖಾನ್ ಚಾಕು ಇರಿತ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ, ಕೃತ್ಯ ಎಸಗಿದ ನಂತರ ಶಂಕಿತ ಆರೋಪಿಯು ದಾದರ್‌ನ ಮೊಬೈಲ್ ಅಂಗಡಿಯೊಂದರಲ್ಲಿ ಇಯರ್‌ಫೋನ್ ಖರೀದಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ.
ಬುಧವಾರ ತಡರಾತ್ರಿ 2.30ರ ವೇಳೆ ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ಆರೋಪಿಯು ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸೈಫ್ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಶಂಕಿತನ ಚಲನವಲನಗಳ ಬಗ್ಗೆ ತನಿಖೆ ಪ್ರಾರಂಭಿಸಿರುವ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆಗೆ ಮುಂದಾಗಿದ್ದಾರೆ. ಶುಕ್ರವಾರ ದಾದರ್‌ನ ಮೊಬೈಲ್ ಅಂಗಡಿಯೊಂದಕ್ಕೆ ಭೇಟಿಕೊಟ್ಟಿರುವ ಪೊಲೀಸರು, ಶಂಕಿತನ ಬಗ್ಗೆ ಕೆಲ ಮಾಹಿತಿಗಳನ್ನು ಕಲೆಹಾಕಿದ್ದಾರೆ.
‘ಶಂಕಿತ ಆರೋಪಿಯು ನಮ್ಮ ಅಂಗಡಿಗೆ ಭೇಟಿ ನೀಡಿ ₹50ರ ಬೆಲೆಯ ಇಯರ್‌ಫೋನ್‌ವೊಂದನ್ನು ಖರೀದಿಸಿದ್ದಾನೆ. ಆತ ₹100 ಕೊಟ್ಟಿದ್ದು, ಚಿಲ್ಲರೆ ಹಿಂದಿರುಗಿಸಿದ್ದೇನೆ. ನಂತರ ಅವನು ಇಲ್ಲಿಂದ ಹೊರಟು ಹೋಗಿದ್ದಾನೆ’ ಎಂದು ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುವ ಹಸನ್ ಸುದ್ದಿಸಂಸ್ಥೆ ಪಿಟಿಐಗೆ ಹೇಳಿದ್ದಾರೆ.
‘ಶುಕ್ರವಾರ ಕೆಲ ಪೊಲೀಸರು ನಮ್ಮ ಅಂಗಡಿಗೆ ಭೇಟಿ ನೀಡಿ ಸಿಸಿಟಿವಿ ತುಣುಕಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಅವರು ಶಂಕಿತನ ಬಗ್ಗೆ ವಿಚಾರಿಸಿದ್ದು, ಆತ ಏನು ಮಾಡಿದ್ದನು ಎಂಬ ಬಗ್ಗೆ ಆಗ ನನಗೆ ತಿಳಿದಿರಲಿಲ್ಲ’ ಎಂದು ಹೇಳಿದ್ದಾರೆ.
‘ಶಂಕಿತ ಆರೋಪಿಗೆ ಇಯರ್‌ಫೋನ್ ಕೊಟ್ಟಿರುವುದು, ಆನಂತರ ಪೊಲೀಸರು ಬಂದು ಸಿಸಿಟಿವಿ ತುಣುಕಗಳನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಕೆಲಸದಾತ ನನಗೆ ತಿಳಿಸಿದ್ದಾನೆ’ ಎಂದು ಅಂಗಡಿ ಮಾಲೀಕ ಶಕೀರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.