
‘ಗೀತಾ’, ‘ಗುರುದೇವ ಹೊಯ್ಸಳ’ ಚಿತ್ರಗಳನ್ನು ನಿರ್ದೇಶಿಸಿರುವ ವಿಜಯ್ ಅವರ ಹೊಸ ಸಿನಿಮಾ ‘ಆಲ್ಫಾ’ದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು.
‘ಮೆನ್ ಲವ್ ವೆಂಜೆಂನ್ಸ್’ ಎಂಬ ಅಡಿಬರಹವಿರುವ ಈ ಸಿನಿಮಾವನ್ನು ಎಲ್.ಎ.ಪ್ರೊಡಕ್ಷನ್ಸ್‌ನಡಿ ಆನಂದ್ ಕುಮಾರ್ ನಿರ್ಮಿಸಿದ್ದಾರೆ. ನಾಯಕನಾಗಿ ಹೇಮಂತ್ ಕುಮಾರ್ ನಟಿಸಿದ್ದು, ಇದು ಇವರ ಚೊಚ್ಚಲ ಸಿನಿಮಾ.
‘ಸಂಭಾಷಣೆಕಾರ ಮಾಸ್ತಿ ಅವರ ಮೂಲಕ ಹೇಮಂತ್ ಕುಮಾರ್ ಪರಿಚಯವಾಯಿತು. ಒಂದೊಳ್ಳೆಯ ಕಥೆ ಇದ್ದರೆ ಸಿನಿಮಾ ಮಾಡೋಣ, ಆದರೆ ಪ್ರೇಮಕಥೆ ಬೇಡ ಎಂದು ಅವರು ಹೇಳಿದರು. ಆ ಸಂದರ್ಭದಲ್ಲಿ ಈ ಸಿನಿಮಾದ ಕಥೆ ಹೇಳಿದ್ದೆ. ಮಾರ್ಚ್‌ನಲ್ಲಿ ಚಿತ್ರ ಪ್ರಾರಂಭವಾಯಿತು. ಈಗ ಮುಕ್ತಾಯದ ಹಂತದಲ್ಲಿದೆ. ಫೆಬ್ರುವರಿಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು ವಿಜಯ್.
‘ಇದು ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಮಾತ್ರವಲ್ಲ, ಭಾವನಾತ್ಮಕ ಕಥೆಯೂ ಸಿನಿಮಾದಲ್ಲಿದೆ. ಇದು ಮೂರು ಜನ ಅಪ್ಪಂದಿರ ಹಾಗೂ ಮೂರು ಜನ ಮಕ್ಕಳ ಸುತ್ತ ನಡೆಯುವ ಕಥೆ. ಅಪ್ಪನ ತಂಟೆಗೆ ಯಾರಾದರೂ ಬಂದರೆ, ಮಕ್ಕಳ ಪ್ರತಿಕಾರ ಹೇಗಿರುತ್ತದೆ ಎಂದು ತಿಳಿಸುವ ಕಥೆಯೂ ಹೌದು’ ಎನ್ನುತ್ತಾರೆ ವಿಜಯ್.
ಕೇರಳ ಮೂಲದ ಗೋಪಿಕಾ ಸುರೇಶ್ ಹಾಗೂ ಕನ್ನಡದ ಅಯಾನ ಈ ಚಿತ್ರದ ನಾಯಕಿಯರು. ‘ಬಿಗ್‌ಬಾಸ್’ ಖ್ಯಾತಿಯ ಕಾರ್ತಿಕ್ ಮಹೇಶ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವಿನಾಶ್, ಅಚ್ಯುತ್ ಕುಮಾರ್, ಮಾನಸಿ ಸುಧೀರ್, ರಮೇಶ್ ಇಂದಿರಾ, ಬಾಲು ನಾಗೇಂದ್ರ, ವಿನಯ್ ಬಿದ್ದಪ್ಪ, ಮಹಾಂತೇಶ್, ರಾಘು ಶಿವಮೊಗ್ಗ ತಾರಾಬಳಗದಲ್ಲಿದ್ದಾರೆ. ಜೆ.ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಕಾರ್ತಿಕ್ ಛಾಯಾಚಿತ್ರಗ್ರಹಣ ಸಿನಿಮಾಗಿದೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಯಾನ ನಟಿಸಿದ್ದಾರೆ. ಹೇಮಂತ್‌ಗೆ ಜೋಡಿಯಾಗಿ ಗೋಪಿಕಾ ಸುರೇಶ್ ಬಣ್ಣಹಚ್ಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.