ADVERTISEMENT

‘ಚಿತ್ರ ನೋಡಿ ನನ್‌ ವಯಸ್ಸೇಳಿ’

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2018, 9:18 IST
Last Updated 3 ಆಗಸ್ಟ್ 2018, 9:18 IST
ಅಂಬರೀಷ್‌
ಅಂಬರೀಷ್‌   

‘ಅಂಬಿ ನಿಂಗ್‌ ವಯಸ್ಸಾಯ್ತೋ!’ ಚಿತ್ರ ಚಂದನವನದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇದು ತಮಿಳಿನ ‘ಪವರ್‌ ಪಾಂಡಿ’ ಚಿತ್ರದ ಕನ್ನಡ ಅವತರಣಿಕೆ. ಚಿತ್ರೀಕರಣ ಪೂರ್ಣಗೊಳಿಸಿ ಮಾಧ್ಯಮದವರ ಮುಂದೆ ಮೊದಲ ಬಾರಿಗೆ ಚಿತ್ರತಂಡ ಹಾಜರಾಗಿತ್ತು.

‘ನಾನು ₹ 500 ಸಂಭಾವನೆ ಪಡೆದು ಖಳನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟೆ. ನಂತರ ಪೋಷಕ ನಟ, ನಾಯಕ ನಟ, ಜನನಾಯಕನಾದೆ. ಗುರುದತ್‌ ಗಾಣಿಗ ವಯಸ್ಸಿನಲ್ಲಿ ಚಿಕ್ಕವನಾಗಿದ್ದಾನೆ. ಅವನಿಗೂ ಉಜ್ವಲ ಭವಿಷ್ಯವಿದೆ’ ಎಂದರು ಅಂಬರೀಷ್‌. ಅವರು ಈ ಮಾತು ಹೇಳಲು ಕಾರಣವೂ ಇತ್ತು. ಗುರುದತ್‌ ವಯಸ್ಸು 26. ಅವರು ನಟ ಸುದೀಪ್‌ ಗರಡಿಯಲ್ಲಿ ಪಳಗಿದ್ದಾರೆ. ಗುರುದತ್‌ ಅವರನ್ನು ಮೊದಲ ಬಾರಿಗೆ ನೋಡಿದ ಅಂಬರೀಷ್‌ ಅವರಿಗೆ, ‘ಈ ಹುಡುಗ ನನ್ನ ಸಿನಿಮಾ ನಿರ್ದೇಶನ ಮಾಡುತ್ತಾನೆಯೇ’ ಎಂದು ಪ್ರಶ್ನೆ ಕಾಡಿತ್ತಂತೆ.

‘ಮೂರ್ತಿ ಚಿಕ್ಕದಾದರೂ ಅದರ ಕೀರ್ತಿ ದೊಡ್ಡದು. ಹಾಗಾಗಿ, ಒಪ್ಪಿಕೊಂಡೆ. ಸೆಟ್‌ನಲ್ಲಿ ಅವನ ಕೌಶಲವನ್ನು ಕಣ್ಣಾರೆ ನೋಡಿದೆ. ಚೆನ್ನಾಗಿ ನಿರ್ದೇಶನ ಮಾಡುತ್ತಾನೆ’ ಎಂದು ಮೆಚ್ಚುಗೆಯ ಪ್ರಮಾಣಪತ್ರ ನೀಡಿದರು ಅಂಬರೀಷ್‌.

ADVERTISEMENT

‘ಈ ಚಿತ್ರ ನಿರ್ಮಾಣದ ಹಿಂದೆ ಸುದೀಪ್‌ ಶ್ರಮ ಹಿರಿದು. ನಾವು ಅವನಷ್ಟು ಕೆಲಸ ಮಾಡಲು ಸಾಧ್ಯವಿಲ್ಲ. ನನಗೆ ವಯಸ್ಸಾಗಿದೆಯೋ, ಇಲ್ಲವೋ ಎನ್ನುವುದನ್ನು ಚಿತ್ರ ನೋಡಿ ನೀವೆ ಹೇಳಿ’ ಎಂದರು.

ನಿರ್ದೇಶಕ ಗುರುದತ್‍ ಗಾಣಿಗ ಅವರದು ಮೂಲತಃ ಕುಂದಾಪುರ. ‘ಸಿನಿಮಾದ ಮೇಲಿನ ಪ್ರೀತಿಯಿಂದ ಬೆಂಗಳೂರಿಗೆ ಬಂದೆ. ಸುದೀಪ್ ಅವರ ಬಳಿ ಸಿನಿಮಾದ ಒಳನೋಟಗಳನ್ನು ಕಲಿತೆ. ದೊಡ್ಡ ಚಿತ್ರಕ್ಕೆ ನಿರ್ದೇಶನ ಮಾಡಲು ಅವಕಾಶ ನೀಡಿದ್ದಾರೆ. ಚಿತ್ರದ ನಿರೂಪಣೆಯು ಮೂಲ ಚಿತ್ರಕ್ಕಿಂತ ಭಿನ್ನವಾಗಿದೆ’ ಎಂದು ವಿವರಿಸಿದರು.

‘ಆಗಸ್ಟ್‌ 10ರಂದು ಆಡಿಯೊ ಬಿಡುಗಡೆಗೆ ಸಿದ್ಧತೆ ನಡೆದಿದೆ. ಕನ್ನಡದ ಎಲ್ಲ ಸ್ಟಾರ್‌ ನಟರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ನಟ ರಜನೀಕಾಂತ್‌ ಅವರಿಗೂ ಆಹ್ವಾನ ನೀಡುತ್ತೇವೆ. ಬೆಂಗಳೂರು, ಕೇರಳ, ಊಟಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈ ತಿಂಗಳಾಂತ್ಯಕ್ಕೆ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ’ ಎಂದರು ನಿರ್ಮಾಪಕ ಜಾಕ್‍ ಮಂಜು.

ಇಪ್ಪತ್ತೆರಡು ವರ್ಷದ ಹಿಂದೆ ಸುದೀಪ್ ‘ಬ್ರಹ್ಮ’ ಚಿತ್ರದಲ್ಲಿ ನಟಿಸಿದ್ದರು. ಅದರ ಸುದ್ದಿಗೋಷ್ಠಿ ನಡೆದಿದ್ದು ಏಟ್ರಿಯಾ ಹೋಟೆಲ್‌ನಲ್ಲಿಯೇ. ಕಾರಣಾಂತರಗಳಿಂದ ಚಿತ್ರ ಅರ್ಧಕ್ಕೆ ಸ್ಥಗಿತಗೊಂಡಿತ್ತು. ‘ಬ್ರಹ್ಮ ಚಿತ್ರದ ಸುದ್ದಿಗೋಷ್ಠಿಯು ಇಲ್ಲಿಯೇ ನಡೆದಿತ್ತು. ಕಾಕತಾಳೀಯ ಎಂಬಂತೆ ಇಪ್ಪತ್ತೆರಡು ವರ್ಷದ ನಂತರ ಈ ಹಾಲ್‌ನಲ್ಲಿ ಮತ್ತೆ ಪತ್ರಿಕಾಗೋಷ್ಠಿಗೆ ಬಂದಿದ್ದೇನೆ’ ಎಂದು ಸುದೀಪ್ ಹಳೆಯ ನೆನಪಿಗೆ ಜಾರಿದರು.

‘ಅಂಬರೀಷ್‌ ಅವರ ಆರೋಗ್ಯದ ಬಗ್ಗೆ ಹೆಚ್ಚು ಮುತುವರ್ಜಿವಹಿಸಿ ಶೂಟಿಂಗ್ ಪೂರ್ಣಗೊಳಿಸಲಾಗಿದೆ. ಅವರ ಹದಿಹರೆಯದಲ್ಲಿನ ಪ್ರೀತಿಯ ತುಣುಕುಗಳು ಚಿತ್ರದಲ್ಲಿವೆ. ಮೂವತ್ತೈದು ನಿಮಿಷಗಳ ಕಾಲದ ಈ ದೃಶ್ಯಾವಳಿಯಲ್ಲಿ ನಾನು ನಟಿಸಿದ್ದೇನೆ. ನನಗೆ ಜೋಡಿಯಾಗಿ ಶ್ರುತಿ ಹರಿಹರನ್ ಇದ್ದಾರೆ. ಸುಹಾಸಿನಿ ಅವರ ಅಭಿನಯವೂ ಮನಸೆಳೆಯುತ್ತದೆ. ಅಂಬರೀಷ್‌ ಅವರನ್ನು ಅನುಕರಿಸುವುದು ಕಷ್ಟಸಾಧ್ಯ. ಅರ್ಜುನ್‍ ಜನ್ಯ ಒಳ್ಳೆಯ ಸಂಗೀತ ನೀಡಿದ್ದಾರೆ’ ಎಂದು ವಿವರಿಸಿದರು.

ಜೆಬಿನ್‌ ಜೇಕಬ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸಂಕಲನ ಕಿರಣ್‌ ಅವರದ್ದು. ರವಿವರ್ಮ ಮತ್ತು ಥ್ರಿಲ್ಲರ್‌ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.