ADVERTISEMENT

ಸುಹಾಸಿನಿ ಹರೆಯದ ವರ್ಷನ್‌ನಲ್ಲಿ ಶ್ರುತಿ ಹರಿಹರನ್!

ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಹಳ್ಳಿ ಲುಕ್‌ನಲ್ಲಿ ಸುದೀಪ್, ಶ್ರುತಿ

ಪದ್ಮನಾಭ ಭಟ್ಟ‌
Published 28 ಜೂನ್ 2018, 6:46 IST
Last Updated 28 ಜೂನ್ 2018, 6:46 IST
‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಶ್ರುತಿ ಹರಿಹರನ್ ಮತ್ತು ಸುದೀಪ್
‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಶ್ರುತಿ ಹರಿಹರನ್ ಮತ್ತು ಸುದೀಪ್   

ಸುದೀಪ್ ಅವರು ‘ಅಂಬಿ ನಿಂಗ್ ವಯಸ್ಸಾಯ್ತೋ’ ಎಂದು ಹೇಳಿ ಹಲವು ತಿಂಗಳು ಕಳೆದಿವೆ. ಅಂಬರೀಶ್ ಜನ್ಮದಿನದಂದು ಅವರು ಬುಲೆಟ್ ಮೇಲೆ ಹೋಗುತ್ತಿರುವ ಒಂದು ಖಡಕ್ ಟ್ರೇಲರ್ ರಿಲೀಸ್ ಮಾಡಿ ದೂಳೆಬ್ಬಿಸಿದ್ದೂ ಆಗಿದೆ. ಆಗೀಗ ಚಿತ್ರದ ಕುರಿತು ಒಂದೊಂದು ಸಣ್ಣಪುಟ್ಟ ಸುಳಿವು ನೀಡಿ ಅಭಿಮಾನಿಗಳ ಎದೆಯೊಳಗೆ ಕುತೂಹಲದ ಒಗ್ಗರಣೆ ಹಾಕುತ್ತಲೇ ಬಂದಿದೆ ಚಿತ್ರತಂಡ.

ಈ ಚಿತ್ರದಲ್ಲಿ ಅಂಬರೀಶ್ ಜತೆ ಶ್ರುತಿ ಹರಿಹರನ್ ಮತ್ತು ಸುದೀಪ್ ಜೋಡಿಯಾಗಿ ನಟಿಸುತ್ತಿದ್ದಾರೆ ಎಂಬುದು ತುಂಬ ಹಿಂದೆಯೇ ಬಹಿರಂಗವಾಗಿತ್ತು. ಆದರೆ ಅವರು ಯಾವ ರೀತಿಯ ನೋಟದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗಿರಲಿಲ್ಲ. ಆದರೆ ಈಗ ತಂಡ ಬಿಡುಗಡೆ ಮಾಡಿರುವ ಕೆಲವು ಸ್ಥಿರಚಿತ್ರಗಳಿಂದ ಪಾತ್ರದ ನೋಟ ಸ್ಪಷ್ಟವಾಗಿ ಸಿಕ್ಕಂತಾಗಿದೆ.

ಕಾಡಿನ ನಡುವೆ ಕಲ್ಲ ಮೇಲೆ ಲಂಗ ದಾವಣಿ ತೊಟ್ಟ ಶ್ರುತಿ ಹರಿಹರನ್ ತಿನಿಸಿನ ಡಬ್ಬದ ಮುಚ್ಚಳ ತೆಗೆದು ಕೂತಿರುವ, ಪಕ್ಕಾ ಹಳ್ಳಿ ಹುಡುಗನ ಗೆಟಪ್‌ನಲ್ಲಿ ಬೀಸುವ ಗಾಳಿಗೆ ಮೈಯೊಡ್ಡಿ ಗೆಳತಿಯನ್ನು ನೋಡುತ್ತ ಕೂತಿರುವ ಸುದೀಪ್ ಅವರ ಪಾತ್ರದ ಕುರಿತು ಸಾಕಷ್ಟು ಸುಳಿವು ನೀಡುವಂತಿದೆ.

ADVERTISEMENT

2005ರಲ್ಲಿ ಬಿಡುಗಡೆಯಾದ ಸಾಯಿ ಪ್ರಕಾಶ್ ನಿರ್ದೇಶನದ ‘ಮಹಾರಾಜ’ ಚಿತ್ರದಲ್ಲಿ ಸುದೀಪ್ ನಾಯಕನಾಗಿ ನಟಿಸಿದ್ದರು. ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಸುದೀಪ್‌ ಅವರ ಗೆಟಪ್ ಆಗಿನ ಹಳ್ಳಿ ‘ಮಹಾರಾಜ’ನನ್ನು ನೆನಪಿಸುವಂತಿದೆ.

ಬಹುತೇಕ ಸಿನಿಮಾಗಳಲ್ಲಿ ನಗರವಾಸಿ ಮಾಡರ್ನ್‌ ಲುಕ್‌ನಲ್ಲಿಯೇ ಕಾಣಿಸಿಕೊಂಡಿದ್ದ ಶ್ರುತಿ ಹರಿಹರನ್ ಕೂಡ ಲಂಗ ದಾವಣಿ ತೊಟ್ಟು ಹಳ್ಳಿ ಪೋಕರಿಯಾಗಿ ಮಿಂಚುತ್ತಿದ್ದಾರೆ. ಸುಹಾಸಿನಿ ಈ ಚಿತ್ರದಲ್ಲಿ ಅಂಬರೀಶ್ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಅವರ ಪಾತ್ರದ ಹದಿಹರೆಯದ ವರ್ಷನ್‌ನಲ್ಲಿ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ.

ಈ ಪಾತ್ರದ ಕುರಿತು ಶ್ರುತಿ ಹರಿಹರನ್ ತುಂಬ ಉತ್ಸಾಹದಿಂದ ಮಾತನಾಡುತ್ತಾರೆ. ‘ಈ ಚಿತ್ರದಲ್ಲಿ ನಾನು ಕಾಣಿಸಿಕೊಳ್ಳುವ ಕಥೆ ನಡೆಯುವುದು 1980ರ ದಶಕದಲ್ಲಿ. ಆಗ ಕರ್ನಾಟಕದಲ್ಲಿ ಹಳ್ಳಿ– ನಗರಗಳಲ್ಲಿ ಜೀವನ ಹೇಗಿತ್ತು ಎಂಬುದನ್ನು ತೋರಿಸಲಾಗಿದೆ. ಸುಹಾಸಿನಿ ಅವರ ಪಾತ್ರದ ಫ್ಲ್ಯಾಶ್ ಬ್ಯಾಕ್‌ನಲ್ಲಿ ನಾನು ನಟಿಸುತ್ತಿದ್ದೇನೆ’ ಎಂದು ಅವರು ಮಾಹಿತಿ ನೀಡುತ್ತಾರೆ.

‘ಆಗಿನ ಕಾಲಕ್ಕೆ ಚೆನ್ನಾಗಿ ಓದಿದ, ನಗರದಿಂದ ಹಳ್ಳಿಗೆ ಬಂದ ಹುಡುಗಿಯ ಪಾತ್ರ ನನ್ನದು. ಬೋಲ್ಡ್ ಹುಡುಗಿ, ಯಾವುದಕ್ಕೂ ನಾಚಲ್ಲ, ಹೆದರಲ್ಲ. ಅಂಥ ಹುಡುಗಿ ಅಂಬಿಯನ್ನು ಭೇಟಿಯಾದಾಗ ಏನಾಗುತ್ತದೆ ಎನ್ನುವುದೇ ಕಥೆ’ ಎಂದು ಕಥೆಯ ಸುಳಿವು ನೀಡುತ್ತಾರೆ ಶ್ರುತಿ.

ತಮಿಳಿನ ‘ಪಾ. ಪಾಂಡಿ’ ಚಿತ್ರದ ಕಥೆಯನ್ನೇ ಕನ್ನಡದ ಜಾಯಮಾನಕ್ಕೆ ಒಗ್ಗಿಸಿ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾವನ್ನು ರೂಪಿಸಲಾಗಿದೆ. ಸ್ವತಃ ಸುದೀಪ್ ಅವರೇ ಈ ಚಿತ್ರದ ಕಥೆ, ಚಿತ್ರಕಥೆಯಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಜಾಕ್ ಮಂಜು ಅವರ ಜತೆ ಜಂಟಿಯಾಗಿ ನಿರ್ಮಾಣವನ್ನೂ ಮಾಡಿದ್ದಾರೆ. ಗುರುದತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ.

ಈಗಾಗಲೇ ಚಿತ್ರೀಕರಣ ಮುಗಿದಿದ್ದು ಪೋಸ್ಟ್‌ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.