ಅಮಿತಾಭ್
ಬೆಂಗಳೂರು: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ತವರು ರಾಜ್ಯ ಉತ್ತರ ಪ್ರದೇಶದ ಜೊತೆಗಿನ ನಂಟನ್ನು ಸದಾ ಕಾಪಾಡಿಕೊಂಡು ಬಂದಿದ್ದಾರೆ.
2024 ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದಾಗ ಅಯೋಧ್ಯೆಯಲ್ಲಿ ಬಿಗ್ ಬಿ ಅವರು ದುಬಾರಿ ಬೆಲೆಗೆ ಜಮೀನು ಖರೀದಿಸಿ ಗಮನ ಸೆಳೆದಿದ್ದರು. ಇದೀಗ ಅಯೋಧ್ಯೆಯಲ್ಲಿ ಮತ್ತೊಂದು ಜಾಗವನ್ನು ಅವರು ಖರೀದಿಸಿದ್ದಾರೆ.
ಈಗ ಖರೀದಿಸಿರುವ ಹೊಸ ಜಾಗ ರಾಮ ಮಂದಿರದ ಸನಿಹವೇ ಇದೆ. ಸುಮಾರು 54,454 ಚದರ ಅಡಿ ಜಾಗ ಇದಾಗಿದೆ. ಈ ಜಾಗದಲ್ಲಿ ಅಮಿತಾಭ್ ಅವರು ತಮ್ಮ ತಂದೆ ಹರಿವಂಶರಾಯ್ ಬಚ್ಚನ್ ಅವರ ಸ್ಮಾರಕವನ್ನು ನಿರ್ಮಿಸಲಿದ್ದಾರೆ ಎಂದು ನ್ಯೂಸ್ 18 ವೆಬ್‌ಸೈಟ್ ವರದಿ ಮಾಡಿದೆ.
ಜಾಗ ಖರೀದಿಗೆ ಸಂಬಂಧಿಸಿದಂತೆ ಎಲ್ಲ ಒಪ್ಪಂದಗಳು ಅಂತಿಮಗೊಂಡಿವೆ. ಶೀಘ್ರದಲ್ಲಿಯೇ ಸ್ಮಾರಕ ನಿರ್ಮಾಣವಾಗಲಿದೆ ಎಂದು ತಿಳಿಸಿದೆ.
ಅಯೋಧ್ಯೆಯ ಹವೇಲಿ ಅವಧ್ ಬಳಿ ಈ ಮೊದಲು ಮನೆ ಕಟ್ಟುವ ಸಲುವಾಗಿ ನಟ ಜಾಗ ಖರೀದಿಸಿದ್ದರು. ಹೊಸ ಜಾಗದಲ್ಲಿ ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವನ್ನು ಹರಿವಂಶರಾಯ್ ಬಚ್ಚನ್ ಟ್ರಸ್ಟ್ ನೋಡಿಕೊಳ್ಳಲಿದೆ ಎಂದು ತಿಳಿದು ಬಂದಿದೆ.
ಹರಿವಂಶರಾಯ್ ಬಚ್ಚನ್ ಅವರು ಹಿಂದಿ ಭಾಷೆಯ ಖ್ಯಾತ ಕವಿ, ಸಾಹಿತಿಯಾಗಿದ್ದರು. ನಟನೆ ಜೊತೆಗೆ ಹೂಡಿಕೆಯಲ್ಲಿ ಆಸಕ್ತಿ ಹೊಂದಿರುವ ನಟ ಅಮಿತಾಭ್ ಬಚ್ಚನ್ ಅವರು ಸುಮಾರು ₹3 ಸಾವಿರ ಕೋಟಿಗೂ ಅಧಿಕ ಸಂಪತ್ತನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.