ADVERTISEMENT

‘ನಡೆದಾಡೋ ದೇವರ ಬಸವ ಭಾರತ’ ಸಿದ್ಧಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಬ್‌?

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 10:58 IST
Last Updated 31 ಮಾರ್ಚ್ 2022, 10:58 IST
ಅಮಿತಾಬ್‌ ಬಚ್ಚನ್‌ ಮತ್ತು ಶಿವಕುಮಾರ ಸ್ವಾಮೀಜಿ
ಅಮಿತಾಬ್‌ ಬಚ್ಚನ್‌ ಮತ್ತು ಶಿವಕುಮಾರ ಸ್ವಾಮೀಜಿ    

ಸಂಗೀತ ನಿರ್ದೇಶಕ ಹಂಸಲೇಖ ಸಾರಥ್ಯದಲ್ಲಿ ಸಿದ್ಧಗಂಗಾ ಶ್ರೀಗಳ ಕುರಿತು ‘ನಡೆದಾಡೋ ದೇವರ ಬಸವ ಭಾರತ’ ಎಂಬ ಹೆಸರಿನಲ್ಲಿ ಕಿರುಚಿತ್ರಗಳ ಸರಣಿ ನಿರ್ಮಾಣವಾಗಲಿದ್ದು, ಇದರಲ್ಲಿ ಶ್ರೀಗಳ ಪಾತ್ರದಲ್ಲಿ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ನಟಿಸುವ ಸಾಧ್ಯತೆ ಇದೆ.

‘ಏ.1ರಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ನಡೆಯಲಿದ್ದು, ಅಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಿರುಚಿತ್ರಗಳ ಸರಣಿಗೆ ಚಾಲನೆ ನೀಡಲಿದ್ದಾರೆ. ಸಿದ್ಧಗಂಗಾ ಶ್ರೀಗಳು ಮತ್ತು ಬಸವಣ್ಣನವರ ಕುರಿತು ನಿರ್ಮಾಣ ಆಗಲಿರುವ ಈ ಸರಣಿಯಲ್ಲಿ 52 ಎಪಿಸೋಡ್‌ಗಳಿರಲಿದ್ದು, ಏಳು ಭಾಷೆಗಳಲ್ಲಿ ಇದು ಮೂಡಿಬರಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ನಿರ್ಮಾಣ ಆಗಲಿದೆ. ಅದಕ್ಕಾಗಿ ಏಳು ತಂಡಗಳಲ್ಲಿ ಸುಮಾರು 300ಕ್ಕೂ ಅಧಿಕ ತಂತ್ರಜ್ಞರು ಕೆಲಸ ಮಾಡಲಿದ್ದಾರೆ’ ಎಂದು ಹಂಸಲೇಖ ತಿಳಿಸಿದರು.

‘ಶಿವಕುಮಾರ ಸ್ವಾಮೀಜಿ ಅವರ ಪಾತ್ರದಲ್ಲಿ ಅಮಿತಾಬ್‌ ಬಚ್ಚನ್ ನಟಿಸಿದರೆ ಸೂಕ್ತ ಎಂಬುವುದು ತಂಡದ ಆಶಯ. ಹೀಗಾಗಿ ಅವರಿಗೆ ಈಗಾಗಲೇ ಕಥೆಯನ್ನು ಹೇಳಲಾಗಿದೆ. ಸದ್ಯ ಅಮಿತಾಬ್‌ ಅವರ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಆಗಿದ್ದು, ಅವರು ಚೇತರಿಸಿಕೊಂಡ ನಂತರ ಅಂತಿಮ ನಿರ್ಧಾರ ತಿಳಿಯಲಿದೆ’ ಎಂದರು ಹಂಸಲೇಖ. ರುದ್ರೇಶ್ ಅವರ ‘ರುದ್ರ ಕಿರುಚಿತ್ರ’ ಸಂಸ್ಥೆ ಮೂಲಕ ಈ ಸರಣಿಯ ನಿರ್ಮಾಣ ಆಗುತ್ತಿದ್ದು, ಐದನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಇದರ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.