ADVERTISEMENT

ಅಮ್ಮನ ಮನೆ ವಾತ್ಸಲ್ಯದ ಅರಮನೆ

ಕೆ.ಎಚ್.ಓಬಳೇಶ್
Published 28 ಫೆಬ್ರುವರಿ 2019, 20:00 IST
Last Updated 28 ಫೆಬ್ರುವರಿ 2019, 20:00 IST
‘ಅಮ್ಮನ ಮನೆ’ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್
‘ಅಮ್ಮನ ಮನೆ’ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್   

‘ಹಜ್’, ‘ರಿಸರ್ವೇಶನ್’, ‘ಒಂದೂರಲ್ಲಿ’, ‘ಲಾಸ್ಟ್ ಪೇಜ್’, ‘ಗೆರೆಗಳು’ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿ ರಾಜ್ಯ, ರಾಷ್ಟ್ರ ಪ್ರಶಸ್ತಿಗೆ ಭಾಜನರಾದವರು ನಿರ್ದೇಶಕ ನಿಖಿಲ್‌ ಮಂಜೂ ಲಿಂಗಯ್ಯ. ಪ್ರಯೋಗಾತ್ಮಕ ಚಿತ್ರಗಳಿಗೆ ಒಗ್ಗಿಕೊಳ್ಳುವುದೆಂದರೆ ಅವರಿಗೆ ಇಷ್ಟ. ‘ಅಮ್ಮನ ಮನೆ’ ಚಿತ್ರ ನಿರ್ದೇಶನದ ಮೂಲಕ ಅವರು ವೃತ್ತಿಬದುಕಿನ ಮತ್ತೊಂದು ಹಾದಿಗೆ ಹೊರಳಿದ್ದಾರೆ. ಈಗಿನದು ಕಮರ್ಷಿಯಲ್ ಸಿನಿಮಾದ ಸಾಹಸ. ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

* ‘ಅಮ್ಮನ ಮನೆ’ ಚಿತ್ರಕ್ಕೆ ಪ್ರೇರಣೆ ಏನು?
ಪ್ರಸ್ತುತ ಕೌಟುಂಬಿಕ ಸಂಬಂಧಗಳು ಶಿಥಿಲಗೊಂಡಿವೆ. ವಯಸ್ಸಾದ ತಂದೆ, ತಾಯಿಯ ಬಗ್ಗೆ ನಿರ್ಲಕ್ಷ್ಯ ಹೆಚ್ಚಿದೆ. ನಮಗಾಗಿ ಅವರು ಜೀವವನ್ನೇ ತೇಯ್ದಿರುತ್ತಾರೆ. ಅವರಿಗೆ ನಮ್ಮ ಅಗತ್ಯ ಬಂದಾಗ ನಾವು ಏನನ್ನೂ ಮಾಡುವುದಿಲ್ಲ. ಕೊನೆಗೊಂದು ದಿನ ವೃದ್ಧಾಶ್ರಮಕ್ಕೆ ಬಿಡುತ್ತೇವೆ. ಕೆಲವರು ರಸ್ತೆಯಲ್ಲಿ ಬಿಟ್ಟುಹೋಗಿರುವ ನಿದರ್ಶನಗಳಿವೆ.

ಮಗುವಿಗೆ ದೈಹಿಕ, ಮಾನಸಿಕವಾಗಿ ಶಕ್ತಿ ತುಂಬುವುದೇ ತಾಯಿ. ಸಮಾಜ, ಗಂಡನನ್ನು ದೂರ ಮಾಡಿಕೊಂಡು ಮಗುವನ್ನು ಆರೈಕೆ ಮಾಡುತ್ತಾಳೆ. ಬದುಕಿನ ಒಂದು ಹಂತದಲ್ಲಿ ಆಕೆ ಪಾರ್ಶ್ವವಾಯುವಿಗೆ ತುತ್ತಾಗುತ್ತಾಳೆ. ಮನೆಯವರಿಗೆ ಆಕೆ ಬೇಡವಾಗುತ್ತಾಳೆ. ಆಗ ಆತ ಕುಟುಂಬದ ನೊಗ ಹೊತ್ತು ಹೇಗೆ ಅಮ್ಮನನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ತಿರುಳು.

ADVERTISEMENT

* ನಟ ರಾಘವೇಂದ್ರ ರಾಜ್‌ಕುಮಾರ್‌ ಅವರನ್ನೇ ಈ ಚಿತ್ರಕ್ಕೆ ಆರಿಸಿಕೊಂಡಿದ್ದು ಏಕೆ?
ಆರಂಭದಿಂದಲೂ ನಾನು ಪರ್ಯಾಯ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದೇ ಹೆಚ್ಚು. ತೆರೆಯ ಮೇಲೆ ಕಥೆ ಹೇಳುವಾಗ ಕಲಾವಿದರು, ತಂತ್ರಜ್ಞರು, ಲೊಕೇಶನ್‌ ಮುಖ್ಯವಾಗುತ್ತದೆ. ಹೊಸ ಕಲಾವಿದನಿಗೆ ತರಬೇತಿ ನೀಡಿ ಪಾತ್ರಕ್ಕೆ ಸಜ್ಜುಗೊಳಿಸುವುದು ಕಷ್ಟ. ನಿಜಜೀವನದಲ್ಲಿ ಇಂತಹ ಪರಿಸ್ಥಿತಿ ಎದುರಿಸಿದವರೇ ಪಾತ್ರ ನಿರ್ವಹಿಸಿದರೆ ಸಿನಿಮಾದಲ್ಲಿ ನೈಜತೆ ಕಾಣಬಹುದು. ರಾಘಣ್ಣ ಅವರ ತಾಯಿಗೂ (ಪಾರ್ವತಮ್ಮ ರಾಜ್‌ಕುಮಾರ್) ಅನಾರೋಗ್ಯ ಕಾಡಿತ್ತು. ಆಗ ಅಮ್ಮನ ಸೇವೆ ಮಾಡುತ್ತಾ ಬಂದರು. ತಾವು ಅನಾರೋಗ್ಯಕ್ಕೆ ತುತ್ತಾದರೂ ಅದನ್ನು ಮೆಟ್ಟಿನಿಂತಿದ್ದಾರೆ. ಅವರು ಸಂಭಾವಿತರೂ ಹೌದು. ನಾವು ಪ್ರೇಕ್ಷಕರ ಬಳಿಗೆ ಹೋಗುವಾಗ ನಟರೊಬ್ಬರು ಬೇಕೆ ಬೇಕು. ಹಾಗಾಗಿ, ಅವರನ್ನು ಆಯ್ಕೆ ಮಾಡಿಕೊಂಡೆವು.

* ಈ ಕಥೆ ಹುಟ್ಟಿದ ಬಗೆ ಹೇಗೆ?
ಇದು ನೈಜ ಘಟನೆ ಆಧರಿಸಿದ ಚಿತ್ರವಲ್ಲ. ಸಮಾಜದಲ್ಲಿ ನಡೆಯುತ್ತಿರುವ ಹಲವು ಘಟನೆಗಳಿಂದ ಪ್ರೇರಣೆ ಪಡೆದು ನಿರ್ಮಿಸಿರುವ ಸಿನಿಮಾ ಇದು. ತಂದೆ, ತಾಯಿ ವೃದ್ಧಾಪ್ಯದಲ್ಲಿ ಅನುಭವಿಸುವ ಸಂಕಷ್ಟದ ಸುತ್ತ ಕಥೆ ಹೊಸೆಯಲಾಗಿದೆ.

* ಒಂದೂವರೆ ದಶಕದ ಬಳಿಕ ರಾಘಣ್ಣ ಮತ್ತೆ ಬಣ್ಣಹಚ್ಚುತ್ತಿದ್ದಾರೆ. ಅವರೊಟ್ಟಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಕಲೆ ಎಲ್ಲರ ಸ್ವತ್ತು. ಮನುಷ್ಯನ ಜೊತೆಗೆಯೇ ಅದು ಮಣ್ಣಾಗುತ್ತದೆ. ಹಲವು ವರ್ಷಗಳ ಬಳಿಕ ನಟಿಸುತ್ತಿದ್ದರೂ ಅವರೊಳಗೆ ನಟಿಸಲು ಹಂಬಲ ಜೀವಂತವಾಗಿತ್ತು. ಅವರಲ್ಲಿದ್ದ ಮತ್ತೆ ಬಣ್ಣಹಚ್ಚಬೇಕೆಂಬ ಆಸೆ ನಮಗೆ ನೆರವಾಯಿತು. ನಾವು ಸಿನಿಮಾದ ಕಥೆ ಹೇಳಿದ ತಕ್ಷಣವೇ ಒಪ್ಪಿಕೊಂಡರು. ‘ಅಮ್ಮನ ಮನೆ’ ಚಿತ್ರದ ಟೈಟಲ್‌ ಬಹುಬೇಗ ಅವರಿಗೆ ಆಪ್ತವಾಯಿತು.

* ರಾಘಣ್ಣ ಅವರ ಪಾತ್ರದ ಬಗ್ಗೆ ಹೇಳಿ.
ತಾಯಿ, ಹೆಂಡತಿ ಮತ್ತು ಮಗಳನ್ನು ತಾಯಿಯ ರೂಪದಲ್ಲಿ ನೋಡುತ್ತಲೇ ಯಾರಿಗೂ ನೋವುಂಟು ಮಾಡದೆ ಬ್ಯಾಲೆನ್ಸ್‌ ಮಾಡುವುದೇ ಅವರ ಪಾತ್ರ. ಒಟ್ಟಾಗಿ ಸಂಸಾರದ ನೌಕೆಯಲ್ಲಿ ಪಯಣಿಸುವುದು. ಹೀರೊಯಿಸಂ ಇಲ್ಲದೇ ಹೀರೊ ಆಗುವುದೇ ಆ ಪಾತ್ರವ ವೈಶಿಷ್ಟ್ಯ. ಪ್ರತಿಯೊಬ್ಬರ ಬದುಕಿನ ನಾಯಕರು ಅವರೇ ಆಗಿರುತ್ತಾರೆ. ಅವರವರ ಕಷ್ಟ ಅವರಿಗೆ ಮಾತ್ರವೇ ಗೊತ್ತು. ತೆರೆಯ ಮೇಲಿನ ನಾಯಕರೇ ಬೇರೆ. ನಿಜಜೀವನದ ನಾಯಕರೇ ಬೇರೆ. ಅದನ್ನೇ ಚಿತ್ರದಲ್ಲಿ ಹೇಳಿದ್ದೇವೆ.

* ಚಿತ್ರದ ಮೂಲಕ ಯಾವ ಸಂದೇಶ ಹೇಳಲು ಹೊರಟಿದ್ದೀರಿ.
ಮನುಷ್ಯನಿಗೆ ತಾಳ್ಮೆ, ಶ್ರದ್ಧೆ ಇದ್ದರೆ ಹಿಮಾಲಯ ಕೂಡ ಸಣ್ಣದೊಂದು ಗುಡ್ಡವಾಗುತ್ತದೆ. ನಾವು ಸಮಾಜದಲ್ಲಿ ಸಾಧಿಸಲು ಹೊರಟಾಗ ತಾಳ್ಮೆ ಬೇಕಾಗುತ್ತದೆ. ಬಾಲ್ಯದಲ್ಲಿ ನಮಗೆ ಸೇವೆ ಸಲ್ಲಿಸಿದವರಿಗೆ ಅವರ ಮುಪ್ಪಿನಲ್ಲಿ ಆ ಸೇವೆಯನ್ನು ವಾಪಸ್‌ ನೀಡುವುದು ನಮ್ಮ ಧರ್ಮ. ಇದು ನಿಸರ್ಗದ ನಿಯಮವೂ ಹೌದು. ತಾಯಿ ಬಾಳಿನ ಮುಸ್ಸಂಜೆಗೆ ಬಂದಾಗ ಮಗುವಾಗುತ್ತಾಳೆ. ಬಾಲ್ಯದಲ್ಲಿ ನಾವು ಆಕೆಯಿಂದ ಪಡೆದಿದ್ದನ್ನು ವಾಪಸ್‌ ಕೊಡಬೇಕಿದೆ.

* ಶೂಟಿಂಗ್ ಅನುಭವದ ಬಗ್ಗೆ ಹೇಳಿ.
ರಾಘಣ್ಣ ಇಲ್ಲಿಯವರೆಗೆ 20ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಅದರಲ್ಲಿ ಆರೇಳು ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ. ಜೊತೆಗೆ, ಅವರು ವಜ್ರೇಶ್ವರಿ ಕಂಬೈನ್ಸ್‌ನ ಆಧಾರ ಸ್ತಂಭ. ಈ ಸಂಸ್ಥೆಯಡಿ 94ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿವೆ. ಈ ಬ್ಯಾನರ್‌ ಮೂಲಕ ಹಲವು ನಿರ್ದೇಶಕರು, ನಟರು, ನಟಿಯರು ಬೆಳ್ಳಿತೆರೆ ಪ್ರವೇಶಿಸಿದ್ದಾರೆ. ರಾಘಣ್ಣ ಒಂದು ದಿನವೂ ಸೆಟ್‌ಗೆ ತಡವಾಗಿ ಬರಲಿಲ್ಲ. ಚಿತ್ರೀಕರಣಕ್ಕೆ ಸಂಪೂರ್ಣ ಸಹಕಾರ ನೀಡಿದರು.

* ನಿಮ್ಮ ಮುಂದಿನ ಯೋಜನೆಗಳೇನು?
‘ಶಾಲಿನಿ ಐಎಎಸ್‌’ ಚಿತ್ರದ ಶೂಟಿಂಗ್ ಮುಗಿದಿದೆ. ಸೋನು ಗೌಡ ಈ ಚಿತ್ರದ ನಾಯಕಿ. ಪೋಸ್ಟ್‌ಪ್ರೊಡಕ್ಷನ್‌ ಹಂತದ ಕೆಲಸ ನಡೆಯುತ್ತಿದೆ. ಇನ್ನು ಮೂರು ತಿಂಗಳೊಳಗೆ ಚಿತ್ರ ತೆರೆಗೆ ಬರಲಿದೆ.

ರಾಘವೇಂದ್ರ ರಾಜ್‌ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.