ADVERTISEMENT

ನಟಿ ಹರಿಪ್ರಿಯಾಗೆ ಹಾಲಿವುಡ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 15:10 IST
Last Updated 6 ಜುಲೈ 2021, 15:10 IST
ಹರಿಪ್ರಿಯಾ
ಹರಿಪ್ರಿಯಾ   

ಬೆಂಗಳೂರು: ಇತ್ತೀಚೆಗೆ ನಡೆದ ಹಾಲಿವುಡ್‌ ಅಂತರರಾಷ್ಟ್ರೀಯ ಗೋಲ್ಡನ್‌ ಏಜ್‌ ಚಿತ್ರೋತ್ಸವದಲ್ಲಿ ‘ಅಮೃತಮತಿ’ ಚಿತ್ರದಲ್ಲಿನ ಪಾತ್ರಕ್ಕಾಗಿನಟಿ ಹರಿಪ್ರಿಯಾ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ.

ಇದಕ್ಕೂ ಮುನ್ನ ನೋಯ್ಡಾದ ಎರಡು ಸಂಸ್ಥೆಗಳು ನಡೆಸಿದ ಎರಡು ಪ್ರತ್ಯೇಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಹರಿಪ್ರಿಯಾ ಅವರು ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. ಹೀಗಾಗಿ ಒಟ್ಟು ಮೂರು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅವರು ಶ್ರೇಷ್ಠ ನಟಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್‌ ಮೂಲಕ ನಿರ್ಮಾಣಗೊಂಡು ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿದ ‘ಅಮೃತಮತಿ’ ಚಿತ್ರವು ಅಟ್ಲಾಂಟ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಶ್ರೇಷ್ಠ ವಿದೇಶಿ ಭಾಷಾ ಚಿತ್ರ’ ಪ್ರಶಸ್ತಿ ಗಳಿಸಿತ್ತು. ಲಾಸ್‌ ಏಂಜಲಿಸ್‌ ಸನ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಮತ್ತು ಬರಗೂರರಿಗೆ ಶ್ರೇಷ್ಠ ಚಿತ್ರಕಥೆ ಪ್ರಶಸ್ತಿ ಲಭಿಸಿತ್ತು.

ADVERTISEMENT

ಇಲ್ಲಿಯವರೆಗೆ ಈ ಚಿತ್ರವು ಹತ್ತಕ್ಕೂ ಅಧಿಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿದೆ. ‘ಇಂತಹ ಮನ್ನಣೆಗೆ ಪಾತ್ರವಾಗುತ್ತಿರುವ ಈ ಚಿತ್ರವು ಕನ್ನಡದ ಪ್ರಾಚೀನ ಕೃತಿಯಾದ ‘ಯಶೋಧರ ಚರಿತೆ’ಯ ಪ್ರಸಂಗವನ್ನು ಆಧರಿಸಿ ಮರುವ್ಯಾಖ್ಯಾನಗೊಂಡ ಚಿತ್ರವೆನ್ನುವುದು ಒಂದು ವಿಶೇಷ’ ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪ.

ಚಿತ್ರದಲ್ಲಿ ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್‌ ಅವರು ನಟಿಸಿದ್ದು, ಸುಂದರರಾಜ್‌, ಪ್ರಮೀಳಾ ಜೋಷಾಯ್‌ ತಿಲಕ್‌, ಸುಪ್ರಿಯಾ ರಾವ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರವು ಶೀಘ್ರದಲ್ಲೇ ಮುಂಬೈ ಸಂಸ್ಥೆಯೊಂದರ ಮೂಲಕ ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.