ADVERTISEMENT

ಮನೆಯಲ್ಲೇ ಇದ್ದು ಬೇಜಾರಾಗಿದೆ: ಅನಂತ್‌ನಾಗ್‌ ಅಂತರಂಗದ ಮಾತು

ಕೆ.ಎಂ.ಸಂತೋಷಕುಮಾರ್
Published 22 ಅಕ್ಟೋಬರ್ 2020, 20:30 IST
Last Updated 22 ಅಕ್ಟೋಬರ್ 2020, 20:30 IST
ಅನಂತ್‌ನಾಗ್‌
ಅನಂತ್‌ನಾಗ್‌   

ಕೋವಿಡ್‌ ಅನ್‌ಲಾಕ್‌ನಿಂದಾಗಿ ಚಿತ್ರೋದ್ಯಮದಲ್ಲಿ ಒಂದಿಷ್ಟು ಚಟುವಟಿಕೆಗಳು ಶುರುವಾಗಿದ್ದರೂ ಬಾಲ ನಟರು ಮತ್ತು ಹಿರಿಯ ನಟರ ಪಾಲಿಗೆ ಪರಿಸ್ಥಿತಿ ಇನ್ನೂ ಪೂರಕವಾಗಿಲ್ಲ. ಸುರಕ್ಷತಾ ಕ್ರಮಗಳೊಂದಿಗೆ ಚಿತ್ರೀಕರಣ ಆರಂಭಿಸಲು ಅನುಮತಿ ಸಿಕ್ಕರೂ ಚಿಕ್ಕಮಕ್ಕಳು ಮತ್ತು ಹಿರಿಯರು ಪಾಲ್ಗೊಳ್ಳಲು ಅವಕಾಶ ಇಲ್ಲದಿರುವುದರಿಂದ ಮಕ್ಕಳು ಮತ್ತು ವೃದ್ಧರ ಪಾತ್ರಗಳಿರುವ ಚಿತ್ರಗಳನ್ನು ಪೂರ್ಣಗೊಳಿಸುವ ಪರಿಸ್ಥಿತಿಯೂ ಸದ್ಯಕ್ಕೆ ಇಲ್ಲದಂತಾಗಿದೆ.

ಸ್ಯಾಂಡಲ್‌ವುಡ್‌ನ ಜನಪ್ರಿಯ ಮತ್ತು ಬಹುಬೇಡಿಕೆಯ ನಟ ಅನಂತ್‌ನಾಗ್‌ ಕೋವಿಡ್‌ ಕಾರಣಕ್ಕೆ ಮುಂಜಾಗ್ರತೆ ವಹಿಸಿದ್ದು, ಅವರು ಏಳೆಂಟು ತಿಂಗಳಿನಿಂದ ಮನೆ ಬಿಟ್ಟು ಹೊರಗೆ ಕಾಲಿಟ್ಟಲ್ಲ.

‘ನಾನು ನಮ್ಮ ಊರಿಗೆ ಹೋಗಿ ಬೆಂಗಳೂರಿಗೆ ಬಂದವನು, ಮಾರ್ಚ್‌ 10ನೇ ತಾರೀಖಿನಿಂದ ಮನೆಯಿಂದ ಹೊರಬಂದೇ ಇಲ್ಲ. ಬರೋಬರಿ ಏಳು ತಿಂಗಳು ತುಂಬಿ ಎಂಟಕ್ಕೆ ಬಿದ್ದಿದೆ. ನನಗೆ ಈಗಾಗಲೇ 70 ವರ್ಷ ದಾಟಿದೆ. ನಮ್ಮ ಕುಟುಂಬ ವೈದ್ಯರು ಕೂಡ ಕೊರೊನಾ ರೋಗಕ್ಕೆ ವ್ಯಾಕ್ಸಿನ್‌ ಬರುವವರೆಗೂ ಮನೆಯಿಂದ ಆಚೆ ಕಾಲಿಡಲೇಬೇಡಿ ಎಂದಿದ್ದಾರೆ. ಮನೆಯಲ್ಲೇ ಇದ್ದು ಬಹಳ ಬೇಜಾರು ಬಂದುಬಿಟ್ಟಿದೆ. ದಿನವೂ ಶುಂಠಿ, ಅರಿಸಿನ ಇತ್ಯಾದಿ ಮನೆ ಮದ್ದಿನ ಕಷಾಯ ಕುಡಿದುಕೊಂಡು ಕಾಲ ಕಳೆಯುತ್ತಿರುವೆ. ನಾನು ಸದ್ಯ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಹೋಗುತ್ತಿಲ್ಲ’ ಎಂದು ಹಿರಿಯ ನಟ ಅನಂತ್‌ ನಾಗ್‌ ‘ಪ್ರಜಾಪ್ಲಸ್‌’ ಜತೆಗೆ ಮಾತಿಗಿಳಿದರು.

ADVERTISEMENT

‘ಯೋಗರಾಜ್‌ ಭಟ್ಟರ ‘ಗಾಳಿಪಟ–2’ ಮತ್ತು ರಿಷಭ್‌ ಶೆಟ್ಟಿ ಅವರ ‘ರುದ್ರಪ್ರಯಾಗ’ ಹಾಗೂ ಇನ್ನೊಬ್ಬ ಹೊಸ ನಿರ್ದೇಶಕರ ‘ಬೆಂಗಳೂರು’ ಸಿನಿಮಾಗಳಲ್ಲಿ ನಟಿಸುತ್ತಿರುವೆ. ಕೊರೊನಾ ಕಾರಣಕ್ಕೆ ಈ ಚಿತ್ರಗಳ ಚಿತ್ರೀಕರಣ ಸದ್ಯ ಸ್ಥಗಿತಗೊಂಡಿದೆ. ಈ ಚಿತ್ರಗಳು ಯಾವಾಗ ಚಿತ್ರೀಕರಣ ಶುರುಮಾಡುತ್ತವೋ ಗೊತ್ತಿಲ್ಲ’ ಎಂದು ಮಾತು ವಿಸ್ತರಿಸಿದರು.

ಬಹು ನಿರೀಕ್ಷೆಯ ‘ಕೆಜಿಎಫ್‌ ಚಾಪ್ಟರ್‌ 2’ ಸಿನಿಮಾದಿಂದ ಹೊರಗುಳಿದ ಬಗ್ಗೆ ಮಾತಿಗೆಳೆದರೆ ಅವರಿಂದ ಬಂದ ಉತ್ತರ ‘ನೋ ಕಮೆಂಟ್ಸ್‌’ ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.