ವಿನಯ್ ರಾಜ್‌ಕುಮಾರ್, ಅದಿತಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಅಂದೊಂದಿತ್ತು ಕಾಲ’ ಚಿತ್ರದ ‘ಅರೇರೇ ಯಾರೋ ಇವಳು’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಶಾಲೆಯ ಮಕ್ಕಳು ಈ ಹಾಡು ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಕೀರ್ತಿ ಕೃಷ್ಣಪ್ಪ ಚಿತ್ರವನ್ನು ನಿರ್ದೇಶಿಸಿದ್ದಾರೆ.
‘ಚಿತ್ರದ ಮೊದಲ ಹಾಡು ‘ಮುಂಗಾರು ಮಳೆಯೆ..’ ದೊಡ್ಡ ಹಿಟ್ ಆಗಿದೆ. ಸಾಕಷ್ಟು ಜನ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಈ ಹಾಡನ್ನು ಅಭಿಮಾನಿಗಳು ರೀಲ್ಸ್ ಮಾಡಿದ್ದನ್ನು ನಾನೂ ನೋಡಿರುವೆ. ಲಕ್ಷಾಂತರ ಜನರಿಗೆ ಈ ಹಾಡು ತಲುಪಿರುವುದು ಖುಷಿಯ ವಿಷಯ. ಈಗ ನಮ್ಮ ಚಿತ್ರದ ಎರಡನೇ ಹಾಡು ‘ಅರೆರೆ...’ ಬಿಡುಗಡೆಗೊಂಡಿದೆ. ಇದು ನನ್ನ ನೆಚ್ಚಿನ ಗೀತೆ. ಇದನ್ನೇ ಮೊದಲು ಬಿಡುಗಡೆ ಮಾಡಿ ಎಂದು ನಿರ್ದೇಶಕರಿಗೆ ಹೇಳಿದ್ದೆ. ಇದರ ವಿಷ್ಯುವಲ್ಸ್ ತುಂಬಾ ಚೆನ್ನಾಗಿದೆ. ಈ ಚಿತ್ರದಲ್ಲಿ ನಾನು ಹದಿನಾರು ವರ್ಷದ ಹುಡುಗನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವೆ. ಹೀಗೆ ಕಾಣಿಸಿಕೊಳ್ಳುವುದು ಸವಾಲಾಗಿತ್ತು. ಸಾಧ್ಯವೇ ಇಲ್ಲ ಅಂದಿದ್ದೆ. ಈಗ ನೋಡಿದ್ರೆ ಪರ್ವಾಗಿಲ್ಲ. ನಾಲ್ಕು ವರ್ಷ ಫೇಲಾಗಿ 10ನೇ ಕ್ಲಾಸಿಗೆ ಬಂದವನ ರೀತಿ ಕಾಣಿಸುತ್ತಿದ್ದೇನೆ. ಪ್ರಪಂಚದ ಬಗ್ಗೆ ಜಾಸ್ತಿ ಗೊತ್ತಿಲ್ಲದ ಮುಗ್ಧ ಹುಡುಗನ ಪಾತ್ರ. ಇದಕ್ಕಾಗಿ ತೂಕ ಇಳಿಸಬೇಕಿತ್ತು. ಶಾಲಾ ದಿನಗಳಲ್ಲಿ ಇಷ್ಟಪಟ್ಟ ಹುಡುಗಿಯ ಹಿಂದೆ ಓಡಾಡಿದ್ದೇನೆ. ನಿಜ ಜೀವನದಲ್ಲಿಯೂ ಹತ್ತನೇ ತರಗತಿ ಓದುವಾಗ ನಾನು ಬಹಳ ಮುಗ್ಧ ಹುಡುಗನಾಗಿದ್ದೆ. ಮೂರು ಶೇಡ್‌ಗಳಲ್ಲಿ ನನ್ನ ಪಾತ್ರ ಸಾಗುತ್ತದೆ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎಂದರು ವಿನಯ್.
‘ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಈಗಾಗಲೇ ನಮ್ಮ ಚಿತ್ರದ ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿನಯ್ ರಾಜಕುಮಾರ್ ಬಹಳ ಸಪೋರ್ಟ್ ಮಾಡಿದ್ದು , ತುಂಬಾ ಸೈಲೆಂಟ್ ವ್ಯಕ್ತಿ. ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈಗ ಬಿಡುಗಡೆಯಾಗಿರುವ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ವಿನಯ್ ರಾಜಕುಮಾರ್ ಹಾಗೂ ನಿಶಾ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. ಆಗಸ್ಟ್ 29ರಂದು ಸಿನಿಮಾ ತೆರೆಗೆ ಬರಲಿದೆ. ಇದೊಂದು ಶುದ್ಧ ಪ್ರೀತಿ ಹಾಗೂ ಗೆಳೆತನದ ಕಥೆಯ ಚಿತ್ರವಾಗಿದ್ದು, ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ ಎಂಬ ಭರವಸೆಯಿದೆ’ ಎಂದರು ನಿರ್ದೇಶಕರು.
ಈ ಚಿತ್ರದ ಶಾಲಾ ವಿದ್ಯಾರ್ಥಿಯ ಹಾಡಿನಲ್ಲಿ ಕಾಣಿಸಿಕೊಂಡಿರುವ ಯುವ ನಟಿ ನಿಶಾ ರವಿಕೃಷ್ಣನ್ ಮಾತನಾಡಿ, ‘ಇದರಲ್ಲಿ ನನ್ನದೊಂದು ಸಣ್ಣ ಪಾತ್ರವಾದರೂ ಬಹಳ ಮಹತ್ವ ಹೊಂದಿದೆ’ ಎಂದರು.
ಭುವನ್ ಮ್ಯೂವಿಸ್ ಬ್ಯಾನರ್‌ನಡಿ ಭುವನ್ ಸುರೇಶ್ ಬಂಡವಾಳ ಹೂಡಿದ್ದಾರೆ. ರಾಘವೇಂದ್ರ.ವಿ ಸಂಗೀತ, ಅಭಿಷೇಕ್ ಕಾಸರಗೋಡು ಛಾಯಾಚಿತ್ರಗ್ರಹಣ, ಕೀರ್ತಿ ಸಂಕಲನವಿದೆ. ಜಗ್ಗಪ್ಪ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ತೀರ್ಥಹಳ್ಳಿ ಮುಂತಾದೆಡೆ ಚಿತ್ರೀಕರಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.