ADVERTISEMENT

ನಟಿ ಅನುಷ್ಕಾ ಶರ್ಮಾ ಬಾಲಿವುಡ್‌ಗೆ ಗುಡ್ ಬೈ?

​ಪ್ರಜಾವಾಣಿ ವಾರ್ತೆ
Published 19 ಮೇ 2019, 10:50 IST
Last Updated 19 ಮೇ 2019, 10:50 IST
ವಿರಾಟ್ ಕೊಹ್ಲಿ–ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ–ಅನುಷ್ಕಾ ಶರ್ಮಾ   

ನಟಿ ಅನುಷ್ಕಾ ಶರ್ಮಾ ಬಾಲಿವುಡ್‌ಗೆ ಗುಡ್ ಬೈ ಹೇಳಲಿದ್ದಾರೆ ಅನ್ನುವ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ‘ಜೀರೊ’ ಸಿನಿಮಾದ ಸೋಲಿನಿಂದ ಬೇಸರಗೊಂಡಿರುವ ಅನುಷ್ಕಾ, ಈಚೆಗೆ ಸಂದರ್ಶನವೊಂದರಲ್ಲಿ ಹಿಂದಿ ಚಿತ್ರರಂಗಕ್ಕೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.

‘ನಟಿಯಾಗಿ ನನ್ನ ವೃತ್ತಿಜೀವನದಲ್ಲಿ ನಾನು ಯಾವ ಸ್ಥಾನ ಗಳಿಸಬೇಕಿತ್ತೋ ಆ ಸ್ಥಾನವನ್ನು ಗಳಿಸಿದ್ದೇನೆ. ಕಾಲ ಕಳೆಯಲಿಕ್ಕಾಗಿ ನಾನು ಸಿಕ್ಕಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುವ ಅಗತ್ಯವಿಲ್ಲ’ ಎಂದು ಸೂಚ್ಯವಾಗಿ ವಿದಾಯ ಮಾತುಗಳನ್ನಾಡಿದ್ದಾರೆ.

‘ಕಳೆದ ಮೂರು ವರ್ಷಗಳಲ್ಲಿ ನಾನು ಹೆಕ್ಟಿಕ್ ಅನ್ನುವಷ್ಟು ಮಟ್ಟಿಗೆ ಫ್ಯಾಷನ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅಂತೆಯೇ ಬಹುಬೇಡಿಕೆಯ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಒಂದೇ ವರ್ಷದಲ್ಲಿ ಪರಿ, ಸೂಯಿಧಾಗಾ ಮತ್ತು ಜೀರೊದಂಥ ಸಿನಿಮಾದಲ್ಲಿ ನಟಿಸುವುದು ತಮಾಷೆಯ ಮಾತಲ್ಲ. ಎಲ್ಲವನ್ನೂ ಭಿನ್ನ ಮತ್ತು ಹೆಚ್ಚು ಹೋಮ್ ವರ್ಕ್ ಬೇಡುವಂಥ ಪಾತ್ರಗಳೇ ಆಗಿದ್ದವು’ ಅನ್ನುವುದು ಅನುಷ್ಕಾ ವಿವರಣೆ.

ADVERTISEMENT

ಶಾರುಕ್ ಖಾನ್ ಜೊತೆಗೆ ‘ಜೀರೊ’ ಸಿನಿಮಾದಲ್ಲಿ ಸೆರೆಬ್ರಲ್ ಪಾಲ್ಸಿ ಪೀಡಿತೆ ವಿಜ್ಞಾನಿ ಪಾತ್ರದಲ್ಲಿ ಅನುಷ್ಕಾ ಅಭಿನಯಕ್ಕೆ ವಿಮರ್ಶಕರು ಮೆಚ್ಚುಗೆ ಸೂಚಿಸಿದ್ದರೂ, ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಸದ್ಯಕ್ಕೆ ಪತಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆಗೆ ಕಾಲ ಕಳೆಯುತ್ತಿರುವ ಅನುಷ್ಕಾ, ಇದುವರೆಗೂ ಸ್ಪಷ್ಟವಾಗಿ ತಮ್ಮ ನಿಲುವನ್ನು ಖಚಿತಪಡಿಸಿಲ್ಲ.

‘ರಬ್‌ ನೆ ಬನಾ ದಿ ಜೋಡಿ’ ಸಿನಿಮಾದಲ್ಲಿ ಶಾರುಕ್‌ಗೆ ನಾಯಕಿಯಾಗಿ ಸಿನಿರಂಗ ಪ್ರವೇಶಿಸಿದ್ದ ಅನುಷ್ಕಾ, ಶಾರುಕ್ ಜೊತೆಗಿನ ‘ಜೀರೊ’ ಸಿನಿಮಾದ ಮೂಲಕವೇ ಬಾಲಿವುಡ್‌ಗೆ ಗುಡ್ ಬೈ ಹೇಳುತ್ತಿರುವುದು ಕಾಕತಾಳೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.