ADVERTISEMENT

‘ಕೇದರನಾಥ’ ಟ್ರೇಲರ್‌ಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 8:36 IST
Last Updated 13 ನವೆಂಬರ್ 2018, 8:36 IST
‘ಕೇದರನಾಥ’ ಚಿತ್ರದ ದೃಶ್ಯ
‘ಕೇದರನಾಥ’ ಚಿತ್ರದ ದೃಶ್ಯ   

ಉತ್ತರಖಂಡದ ಪ್ರಮುಖ ಆಕರ್ಷಣೆ ‘ಕೇದರನಾಥ’ ಯಾತ್ರಸ್ಥಳ. ಕೆಲ ವರ್ಷಗಳ ಹಿಂದೆ ಪ್ರವಾಹ ಉಂಟಾಗಿ ಇಡೀ ಕೇದರನಾಥ ಜಲಾವೃತಗೊಂಡಿತ್ತು. ಸುತ್ತಲಿನ ಹಲವು ಪ್ರದೇಶಗಳು ಹಾನಿಗೀಡಾಗಿದ್ದವು. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡು ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿತ್ತು.

ಪ್ರವಾಹದ ಎಳೆಯನ್ನಿಟ್ಟುಕೊಂಡು ಬಾಲಿವುಡ್‌ನಲ್ಲಿ ‘ಕೇದರನಾಥ’ ಸಿನಿಮಾವೊಂದು ಕೆಲ ತಿಂಗಳ ಹಿಂದೆ ಸೆಟ್ಟೇರಿತ್ತು. ಆ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಈಚೆಗೆ ಟ್ರೇಲರ್ ಬಿಡುಗಡೆ ಮಾಡಿತ್ತು. ಬಿಡುಗಡೆಗೊಂಡ ಎರಡೇ ದಿನದಲ್ಲೇ ಬರೋಬ್ಬರಿ 78.89 ಲಕ್ಷ ಮಂದಿ ಅದನ್ನು ವೀಕ್ಷಿಸಿ ಮೆಚ್ಚುಗೆಯ ಪ್ರವಾಹವನ್ನೇ ಹರಿಸಿದ್ದಾರೆ.

ಮುಸ್ಲಿಂ ಯುವಕ ಮನ್ಸೂರ್ ಪಾತ್ರದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಮನಮಿಡಿಯುವಂತೆ ನಟಿಸಿರುವುದು ಟ್ರೇಲರ್‌ನಲ್ಲಿ ಗೋಚರವಾಗುತ್ತದೆ. ಮೊದಲ ಬಾರಿಗೆ ಬಣ್ಣ ಹಚ್ಚಿರುವ ನಟಿ ಸಾರಾ ಅಲಿಖಾನ್ ಹಿಂದೂ ಧರ್ಮದ ಯುವತಿ ‘ಮುಕ್ಕು’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಕೇದರನಾಥ್‌ಕ್ಕೆ ಬರುವ ಮುಕ್ಕುಗೆ (ಸಾರಾ ಅಲಿಖಾನ್)‘ಪ್ರವಾಸಿ ಗೈಡ್‌’ ಆಗಿ ಮನ್ಸೂರ್ ಪರಿಚಯವಾಗುತ್ತಾನೆ. ಅಲ್ಲಿಂದ ಆರಂಭವಾಗುವ ಅವರಿಬ್ಬರ ಪರಿಚಯದ ಪಯಣ ಕ್ರಮೇಣ ಪ್ರೀತಿಯಾಗಿ ಬದಲಾಗುತ್ತದೆ.

ಅನ್ಯ ಧರ್ಮದ ನೆಪವೊಡ್ಡಿ ಅವರಿಬ್ಬರ ಪ್ರೀತಿಗೆ ಪೋಷಕರು ಅಡ್ಡಿಯಾಗಿ ಮುಕ್ಕುಗೆ ಬೇರೊಬ್ಬನ ಜೊತೆ ಮದುವೆ ಮಾಡಲು ಮುಂದಾಗುತ್ತಾರೆ. ಆಗ, ಜಲ ಪ್ರವಾಹ ಉಂಟಾಗಿ ಅವರಿಬ್ಬರನ್ನು ವಿಧಿಯೇ ಒಂದುಗೂಡಿಸುತ್ತದೆ.

ಅಭಿಷೇಕ್ ಕಪೂರ್‌ ಅವರ ನಿರ್ದೇಶನವುಳ್ಳ ಈ ಸಿನಿಮಾಗೆ, ರೊನ್ನೈ ಸ್ಕ್ರೇವ್‌ವಾಲಾ, ಪ್ರಗ್ಯಾ ಕಪೂರ್ ಹಾಗೂ ಅಭಿಷೇಕ್ ನಯ್ಯಾರ್ ಬಂಡವಾಳ ಹೂಡಿದ್ದಾರೆ.

ಸೈಫ್ ಅಲಿಖಾನ್ ಹಾಗೂ ಅಮೃತಾ ಸಿಂಗ್ ಅವರ ಮಗಳಾದ ಸಾರಾ ಅಲಿಖಾನ್ ಈ ಸಿನಿಮಾದ ಮೂಲಕ ಪ್ರೇಕ್ಷಕರ ಮನಗೆಲ್ಲಲು ತೆರೆಗೆ ಬರುತ್ತಿದ್ದಾರೆ. ಸಾರಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ದೃಶ್ಯಗಳು ಟ್ರೇಲರ್‌ನಲ್ಲಿ ಹಾದುಹೋಗುತ್ತವೆ.

ಕೇದರನಾಥದಿಂದ ಸುಮಾರು 14 ಕಿಲೋ ಮೀಟರ್‌ವುಳ್ಳ ಗೌರಿ ಕುಂಡ್ ಜಾಗದಲ್ಲಿ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದೆ. ಡಿಸೆಂಬರ್‌ 7 ರಂದು ಸಿನಿಮಾ ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.