ಹೊಸಪೇಟೆ (ವಿಜಯನಗರ): ಜನವರಿಯಲ್ಲಿ ತೆರೆ ಕಾಣಲಿರುವ ‘ಕ್ರಾಂತಿ’ ಸಿನಿಮಾದ ಪ್ರಚಾರ ಹಾಗೂ ಹಾಡು ಬಿಡುಗಡೆಗೆ ಚಿತ್ರತಂಡದೊಂದಿಗೆ ಭಾನುವಾರ ಸಂಜೆ ನಗರಕ್ಕೆ ಬಂದಿದ್ದ ನಟ ದರ್ಶನ್ ತೂಗುದೀಪ ಅವರು ದಿವಂಗತ ನಟ ಡಾ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದರು.
ಅಪ್ಪು ಅಭಿಮಾನಿಗಳ ಆಕ್ರೋಶ ಗಮನಿಸಿದ ಚಿತ್ರತಂಡವು 15 ನಿಮಿಷದಲ್ಲೇ ಕಾರ್ಯಕ್ರಮ ಮುಗಿಸಿ ಅಲ್ಲಿಂದ ತೆರಳಿತು. ‘ಕ್ರಾಂತಿ’ ಸಿನಿಮಾದ ‘ಬೊಂಬೆ.. ಬೊಂಬೆ’ ಹಾಡು ಬಿಡುಗಡೆಗೆ ನಗರದ ವಾಲ್ಮೀಕಿ ವೃತ್ತದಲ್ಲಿ ತೆರೆದ ಲಾರಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆ 6ಗಂಟೆಗೆ ಅಪಾರ ಸಂಖ್ಯೆಯ ಜನ ಸೇರಿದ್ದರು. ವೃತ್ತದುದ್ದಕ್ಕೂ ದರ್ಶನ್ ಅವರ ಫ್ಲೆಕ್ಸ್ ಹಾಕಲಾಗಿತ್ತು. ಅಪ್ಪು ಅಭಿಮಾನಿಗಳು ಅದರ ಬಳಿಯೇ ಪುನೀತ್ ರಾಜಕುಮಾರ್ ಅವರ ಫ್ಲೆಕ್ಸ್, ಬ್ಯಾನರ್ ಕೂಡ ಹಾಕಿದ್ದರು. ಅವರ ಭಾವಚಿತ್ರ, ಅವರ ಚಿತ್ರವಿರುವ ಧ್ವಜ, ಪೋಸ್ಟರ್ ಹಿಡಿದು ಇಡೀ ನಗರ ಸುತ್ತಾಡಿದರು. ಕಾರ್ಯಕ್ರಮದ ಸ್ಥಳಕ್ಕೆ ಬಂದು ಜಯಘೋಷ ಹಾಕಿದರು. ರಾತ್ರಿ ಎಂಟು ಗಂಟೆಗೆ ದರ್ಶನ್ ಹಾಗೂ ಚಿತ್ರತಂಡ ಕಾರ್ಯಕ್ರಮ ಸ್ಥಳಕ್ಕೆ ಬಸ್ಸಿನಲ್ಲಿ ಬಂದರು.
ದರ್ಶನ್ ಅವರು ವೇದಿಕೆಗೆ ಬರುತ್ತಿದ್ದಂತೆ ಅವರ ಎದುರಿನಲ್ಲೇ ಅವರ ಬ್ಯಾನರ್ ಹರಿದು ಹಾಕಿದರು. ಅಪ್ಪು.. ಅಪ್ಪು ಎಂದು ಜಯಘೋಷ ಹಾಕಿದರು. ದರ್ಶನ್ ಬಂದ ಬಸ್ಸಿನ ಮೇಲೆ ಯುವಕರ ಗುಂಪೊಂದು ಪುನೀತ್ ಅವರ ಭಾವಚಿತ್ರ ಹಿಡಿದುಕೊಂಡು ಕುಣಿಯಿತು. ‘ಸ್ಟಾರ್ ವಾರ್ ಬೇಡ, ಅಪ್ಪು ಅವರೇ ಹೇಳಿದ್ದಾರೆ. ಸಹಕಾರ ಕೊಡಬೇಕು’ ಎಂದು ನಿರೂಪಕರು ಕೋರಿದರೂ ಕೇಳಲಿಲ್ಲ. ಸುತ್ತ ನೆರೆದಿದ್ದವರು ಕೂಡ ಪುನೀತ್ ಪರ ಜಯಘೋಷ ಹಾಕಿದರು. ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಗಮನಿಸಿದ ಚಿತ್ರತಂಡ ಅಲ್ಲಿಂದ ನಿರ್ಗಮಿಸಿತು.
ಇದಕ್ಕೂ ಮುನ್ನ ವೇದಿಕೆಯಲ್ಲಿ ಮಾತನಾಡಿದ ನಟ ದರ್ಶನ್, ‘ಎಲ್ರಿಗೂ ನಮಸ್ಕಾರ. ಕನ್ನಡ ಸಿನಿಮಾ ರಂಗವೆಂದರೆ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಪ್ಪು. ಎಲ್ಲರೂ ಬೆಂಬಲ ಕೊಡಬೇಕು’ ಎಂದಷ್ಟೇ ಹೇಳಿದರು.
ನಟ ಸಾಧುಕೋಕಿಲ, ‘ವೀರಪುತ್ರರಿಗೆ ನಮಸ್ಕಾರಗಳು. ಕನ್ನಡ ಸಂಸ್ಕೃತಿ, ಸಂಗೀತ ಬೆಳೆಸಿದ ಊರಿದು’ ಎಂದರು. ನಟಿ ರಚಿತಾ ರಾಮಕುಮಾರ್ ಮಾತನಾಡಿ, ಎಲ್ಲರಿಗೂ ನಮಸ್ಕಾರ, ಹೊಸಪೇಟೆ ಮಂದಿಗೆ ನಮಸ್ಕಾರ ಎಂದು ಹೇಳಿದರು. ಅನಂತರ ‘ಬೊಂಬೆ ಬೊಂಬೆ’ ಹಾಡು ಬಿಡುಗಡೆಗೊಳಿಸಿ, ಪ್ರದರ್ಶಿಸಲಾಯಿತು. ಇದಕ್ಕೂ ಮುನ್ನ ದರ್ಶನ್ ಅವರು ಪುನೀತ್ ರಾಜಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ತೆರೆದ ಲಾರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಅಲ್ಲಿ ನೆರೆದಿದ್ದ ಬಹುತೇಕರಿಗೆ ಚಿತ್ರತಂಡದವರನ್ನು ನೋಡಲು ಸಾಧ್ಯವಾಗಲಿಲ್ಲ. ಕೆಲವರು ಮರ ಏರಿ ಕುಳಿತರೆ, ಕೆಲವರು ಕಟ್ಟಡ, ವಾಹನಗಳನ್ನೇರಿ ಕುಳಿತಿದ್ದರು. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಎರಡ್ಮೂರು ಸಲ ಲಾಠಿ ಬೀಸಿದರು. ಎರಡೂ ಗಂಟೆಗೂ ಹೆಚ್ಚು ಕಾಲ ಮುಖ್ಯರಸ್ತೆ ಬಂದ್ ಮಾಡಿ ಕಾರ್ಯಕ್ರಮ ಮಾಡಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ನಡುರಸ್ತೆಯಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
‘ಫ್ಯಾನ್ಸ್‌ಗಳು ನಾನು ಬದುಕಿರುವಾಗಲೇ ತೋರಿಸಿಬಿಟ್ಟರು. ಇದು ಸಾಕು. ಬೇರೇನೂ ಬೇಡ ಅನಿಸ್ತು’ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ದರ್ಶನ್ ಹೇಳಿಕೆ ಕೊಟ್ಟಿದ್ದರು. ಅದಾದ ಬಳಿಕ ಬೆಂಗಳೂರು, ಹೊಸಪೇಟೆ ಸೇರಿದಂತೆ ರಾಜ್ಯದ ಹಲವೆಡೆ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ದರ್ಶನ್ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಅಭಿಮಾನಿ ಕಾಲಿನ ಮೇಲೆ ಹರಿದ ಲಾರಿ
ಚಿತ್ರನಟ ದರ್ಶನ್ ಅವರ 'ಕ್ರಾಂತಿ' ಸಿನಿಮಾ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ಲಾರಿ ಹರಿದು ಅಭಿಮಾನಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆಯಿತು. ಕಾರ್ಯಕ್ರಮಕ್ಕೆ ಲಾರಿಯನ್ನೇ ವೇದಿಕೆಯಾಗಿ ಪರಿವರ್ತಿಸಲಾಗಿತ್ತು. ಇನ್ನಷ್ಟೇ ದರ್ಶನ್ ಬರಬೇಕಿತ್ತು. ಅದಕ್ಕೂ ಮುನ್ನ ಅಪಾರ ಅಭಿಮಾನಿಗಳು ಅಲ್ಲಿ ಸೇರಿದ್ದರು. ಲಾರಿ ತಿರುವು ಪಡೆಯುತ್ತಿದ್ದಾಗ ಯುವಕನ ಕಾಲಿನ ಮೇಲೆ ಲಾರಿ ಚಕ್ರ ಹರಿದಿದೆ. ಗಂಭೀರ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.