ADVERTISEMENT

ನಾಯಕನಾಗಿ ತೆರೆ ಮೇಲೆ ಬರಲಿರುವ ಚಿಕ್ಕಣ್ಣ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 19:30 IST
Last Updated 14 ಸೆಪ್ಟೆಂಬರ್ 2020, 19:30 IST
ಚಿಕ್ಕಣ್ಣ
ಚಿಕ್ಕಣ್ಣ   

ಕನ್ನಡ ಸಿನಿಮಾರಂಗದ ಹಾಸ್ಯನಟರು ಎಂದಾಕ್ಷಣ ನೆನಪಾಗುವ ಕೆಲವು ಹೆಸರುಗಳಲ್ಲಿ ಚಿಕ್ಕಣ್ಣ ಅವರ ಹೆಸರೂ ಅಗ್ರಸ್ಥಾನ ಪಡೆದಿದೆ. ತಮ್ಮದೇ ವಿಭಿನ್ನ ಶೈಲಿಯ ನಟನೆ ಹಾಗೂ ಮಾತಿನ ಮೂಲಕ ಕಚಗುಳಿ ಇಡುವ ಚಿಕ್ಕಣ್ಣ ಕನ್ನಡದ ಹಲವು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇಂತಿಪ್ಪ ಚಿಕ್ಕಣ್ಣ ಇದೇ ಮೊದಲ ಬಾರಿ ಪೂರ್ಣ ಪ್ರಮಾಣದ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ ಚಂದ್ರಮೋಹನ್ ನಿರ್ದೇಶನದ ಸಿನಿಮಾ ಮೂಲಕ. ಈ ಮೊದಲು ಚಂದ್ರಮೋಹನ್‌ ‘ಬಾಂಬೆ ಮಿಠಾಯಿ’ ಹಾಗೂ ‘ಡಬ್ಬಲ್ ಎಂಜಿನ್’‌ ಸಿನಿಮಾಗಳನ್ನು ಮಾಡಿದ್ದರು.

ತಮ್ಮ ಮುಂದಿನ ಚಿತ್ರದ ಕುರಿತು ಮಾತನಾಡಿರುವ ಚಂದ್ರಮೋಹನ್‌ ‘ಈ ಚಿತ್ರದ ಕತೆಯನ್ನು ಚಿಕ್ಕಣ್ಣ ಅವರ ಹಾಸ್ಯ ಪರಾಕ್ರಮವನ್ನು ತಲೆಯಲ್ಲಿ ಇರಿಸಿಕೊಂಡೇ ಬರೆಯಲಾಗಿದೆ. ಹಾಸ್ಯವಿಲ್ಲದ ಚಿತ್ರದಲ್ಲಿ ಚಿಕ್ಕಣ್ಣ ಅವರನ್ನು ಯೋಚಿಸಲೂ ಸಾಧ್ಯವಿಲ್ಲ. ಆ ಕಾರಣಕ್ಕೆ ಕೌಟುಂಬಿಕ ಮೌಲ್ಯ ಹೊಂದಿರುವ ಹಾಸ್ಯ ಪ್ರಧಾನ ಚಿತ್ರವನ್ನು ಮಾಡುತ್ತಿದ್ದೇವೆ. ಇದರಲ್ಲಿ ಚಿಕ್ಕಣ್ಣ ನಾರಾಯಣ ಎಂಬ ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕತೆಯು ಮಂಡ್ಯದ ಸಣ್ಣ ಹಳ್ಳಿಯಿಂದ ಆರಂಭವಾಗಿ ಡಾರ್ಜಿಲಿಂಗ್‌ ಹಾಗೂ ಮುನ್ನಾರ್‌ವರೆಗೆ ಮುಂದುವರಿಯುತ್ತದೆ. ನವೆಂಬರ್‌ನಿಂದ ಶೂಟಿಂಗ್ ಆರಂಭಿಸುವ ಯೋಚನೆಯಲ್ಲಿದ್ದೇವೆ. ಡಾರ್ಜಿಲಿಂಗ್‌ನಲ್ಲಿ ಮೊದಲ ಹಂತದ ಶೂಟಿಂಗ್‌ ಮಾಡುವ ಯೋಚನೆ ಇದೆ. ನಾಯಕಿ ಪಾತ್ರಕ್ಕೆ ಹೊಸ ಮುಖವನ್ನು ಹುಡುಕುತ್ತಿದ್ದೇವೆ. ಚಿತ್ರದಲ್ಲಿ ಪಿ. ರವಿಶಂಕರ್‌, ರಾಕ್‌ಲೈನ್ ಸುಧಾಕರ್‌ ಹಾಗೂ ಸಾಧು ಕೋಕಿಲಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ’ ಎಂದಿದ್ದಾರೆ.

ಸಿನಿಮಾ ಬಗ್ಗೆ ಮಾತನಾಡಿರುವ ಚಿಕ್ಕಣ್ಣ ‘ನಾನು ನಾಯಕನಾಗುತ್ತೇನೆ ಎಂಬ ಕಾರಣಕ್ಕೆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ. ಆದರೆ ಸಿನಿಮಾದ ಕತೆ ಕೇಳಿದ ಮೇಲೆ ಇದು ನನಗಾಗಿಯೇ ಬರೆದ ಕತೆ, ಇದಕ್ಕೆ ನಾನು ಪಕ್ಕಾ ಸರಿ ಹೊಂದುತ್ತೇನೆ ಎನ್ನಿಸಿತ್ತು. ಆ ಕಾರಣಕ್ಕೆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ’ ಎಂದಿದ್ದಾರೆ. ಈ ಸಿನಿಮಾಕ್ಕೆ ಅರ್ಜುನ್‌ ಜನ್ಯ ಸಂಗೀತ ನಿರ್ದೇಶನವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.