ADVERTISEMENT

‘ಅಥಿ ಐ ಲವ್‌ ಯು’ ಎಂದ ಲೋಕೇಂದ್ರ

​ಪ್ರಜಾವಾಣಿ ವಾರ್ತೆ
Published 11 ಮೇ 2023, 19:40 IST
Last Updated 11 ಮೇ 2023, 19:40 IST
ಲೋಕೇಂದ್ರ ಮತ್ತು ಶ್ರಾವ್ಯಾ
ಲೋಕೇಂದ್ರ ಮತ್ತು ಶ್ರಾವ್ಯಾ   

ಲೋಕೇಂದ್ರ ಸೂರ್ಯ ನಿರ್ದೇಶಿಸಿ ನಾಯಕ ನಟನಾಗಿ ನಟಿಸಿರುವ ‘ಅಥಿ ಐ ಲವ್‌ ಯು’ ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಇದೇ ಸಂದರ್ಭದಲ್ಲಿ ಚಿತ್ರತಂಡ ನಾಯಕ–ನಾಯಕಿಯ ಫೋಟೊಶೂಟ್‌ ನಡೆಸಿದೆ. 

‘ಒಂದು ಮನೆ, ಎರಡು ಪಾತ್ರಗಳನ್ನು ಇಟ್ಟುಕೊಂಡು ಸಿನಿಮಾ ರೂಪಿಸುವುದು ಸುಲಭದ ಮಾತಲ್ಲ. ಹತ್ತಕ್ಕೂ ಹೆಚ್ಚು ನಿಮಿಷಗಳ ನಿರಂತರವಾದ ದೃಶ್ಯವನ್ನು ಚಿತ್ರೀಕರಿಸುವುದೂ ಸವಾಲು. ಇಂಥಹ ಪ್ರಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆ. ಹೀಗಾಗಿಯೇ ಈ ಚಿತ್ರದ ಮೇಲೆ ಕುತೂಹಲ ಹೆಚ್ಚಿದೆ ಎನ್ನುವುದು ಚಿತ್ರತಂಡದ ಮಾತು. 

‘ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಎನ್ನುವ ಚಿತ್ರದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವವರು ಲೋಕೇಂದ್ರ. ಈ ಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಸಾಕಷ್ಟು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಇದೀಗ ಗಂಡ–ಹೆಂಡತಿ ಕಥೆ ಹೊತ್ತು ಬಂದಿದ್ದಾರೆ ಲೋಕೇಂದ್ರ. ‘ಕನ್ನಡದಲ್ಲಿ ಗಂಡ-ಹೆಂಡತಿಯ ಸಂಬಂಧದ ಕುರಿತ ಸಾಕಷ್ಟು ಚಿತ್ರಗಳು ಬಂದಿವೆ. ಆದರೆ ಈವರೆಗೆ ಎಲ್ಲೂ, ಯಾರೂ ಹೇಳಿರದ ಹೊಸ ವಿಚಾರವೊಂದನ್ನು ‘ಅಥಿ’ಯ ಮೂಲಕ ನಾವು ಅನಾವರಣ ಮಾಡುತ್ತಿದ್ದೇವೆ’ ಎನ್ನುವುದು ಲೋಕೇಂದ್ರ ಸೂರ್ಯ ಮಾತು.

ADVERTISEMENT

‘ಫೋಟೊಗಳು ಜನರನ್ನು ಆಕರ್ಷಿಸುವುದರ ಜೊತೆಗೆ ಸಿನಿಮಾ ವಿಷಯ ಹೇಳುವಂತಿರಬೇಕು ಎನ್ನುವ ಕಾರಣಕ್ಕೆ ಚಿತ್ರೀಕರಣವೆಲ್ಲಾ ಮುಕ್ತಾಯವಾಗುತ್ತಿರುವ ಈ ಹಂತದಲ್ಲಿ ಫೋಟೊಶೂಟ್ ಮಾಡಿದ್ದೇವೆ. ಮೇ ಮೂರನೇ ವಾರದಲ್ಲಿ ‘ಅಥಿ’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡುತ್ತೇವೆ’ ಎಂದಿದ್ದಾರೆ ಚಿತ್ರದ ನಿರ್ಮಾಪಕರಾದ ‘ರೆಡ್ ಅಂಡ್ ವೈಟ್’ ಸೆವೆನ್ ರಾಜ್. 

‘ಅಥಿ’ ಚಿತ್ರಕ್ಕೆ ಲೋಕೇಂದ್ರ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ. ಶ್ರಾವ್ಯಾ ರಾವ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.