ADVERTISEMENT

ವಿಜಯ್‌ –ರಂಜನಿಯ ‘ಅವಸ್ಥಾಂತರ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 19:30 IST
Last Updated 18 ಜನವರಿ 2021, 19:30 IST
ರಂಜನಿ ರಾಘವನ್‌, ಸಂಚಾರಿ ವಿಜಯ್‌
ರಂಜನಿ ರಾಘವನ್‌, ಸಂಚಾರಿ ವಿಜಯ್‌   

ಸದಾ ವಿಭಿನ್ನ ಮತ್ತು ಪ್ರಯೋಗಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ‘ಅವಸ್ಥಾಂತರ’ಕ್ಕೆ ಬಣ್ಣ ಹಚ್ಚಿದ್ದಾರೆ. ಇವರಿಗೆ ನಾಯಕಿಯಾಗಿ ಕಿರುತೆರೆಯ ಜನಪ್ರಿಯ ನಟಿ ರಂಜನಿ ರಾಘವನ್‌ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಈ ಚಿತ್ರದ ಮುಹೂರ್ತ ಬೆಂಗಳೂರಿನ ಎನ್.ಆರ್.ಕಾಲೋನಿಯ ರಾಯರ ಮಠದಲ್ಲಿ ಸರಳವಾಗಿ ನಡೆಯಿತು. ‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿರುವ ತುಮಕೂರಿನ ಜಿ.ದೀಪಕ್‌ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.

ಹಣಕಾಸು ಸಂಸ್ಥೆಯೊಂದರಲ್ಲಿ ರಿಲೇಶನ್‌ಷಿಪ್ ಮ್ಯಾನೇಜರ್ ಆಗಿದ್ದ ಇವರು, ಸಾಕ್ಷ್ಯಚಿತ್ರ, ಜಾಹೀರಾತುಗಳ ನಿರ್ದೇಶನದಲ್ಲಿ ತೊಡಗಿಕೊಂಡಿದ್ದರು. ಇವೆಲ್ಲದರ ಅನುಭವವನ್ನು ಬೆನ್ನಿಗಿಟ್ಟುಕೊಂಡು ‘ಅವಸ್ಥಾಂತರ’ ಕೈಗೆತ್ತಿಕೊಂಡಿದ್ದಾರೆ. ಕತೆ, ಚಿತ್ರಕತೆ ಹಾಗೂ ಸಂಭಾಷಣೆಯನ್ನು ಬರೆದು ಮೊದಲ ಬಾರಿಗೆ ನಿರ್ದೇಶಕನ ಟೊಪ್ಪಿ ಧರಿಸಿಕೊಂಡು ಹಿರಿತೆರೆಗೆ ಪ್ರವೇಶಿಸಿದ್ದಾರೆ. ‘ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ’ ಎಂಬ ಅಡಿಬರಹವನ್ನು ಶೀರ್ಷಿಕೆಯ ಜತೆಗೆ ನೀಡಿ, ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸಿದ್ದಾರೆ.

ADVERTISEMENT

ಹದಿಹರೆಯದ ಯುವಕನಲ್ಲಿ ತನಗೆ ಅರಿವಿಲ್ಲದೆ ಹುಟ್ಟುವ ಬಯಕೆಗಳು, ಕಾಮನೆಗಳು ಹೇಗೆ ಆತನನ್ನು ಅತಂತ್ರ ಸ್ಥಿತಿಗೆ ತೆಗೆದುಕೊಂಡು ಹೋಗುತ್ತವೆ, ಹಾಗೆಯೇ ಅದರಿಂದ ಏನೆಲ್ಲಾ ಕಷ್ಟಗಳು, ಅವಸ್ಥೆ, ಅನಾಹುತಗಳು ನಡೆಯುತ್ತವೆ ಎನ್ನುವುದು ಈ ಚಿತ್ರದ ಕಥೆಯ ಸಾರ. ಇದನ್ನು ತಿಳಿ ಹಾಸ್ಯದ ಮೂಲಕ ತೋರಿಸುವ ಜೊತೆಗೆ ಅರ್ಥಪೂರ್ಣ ಸಂದೇಶವನ್ನು ಈ ಚಿತ್ರದ ಮೂಲಕ ನೀಡುವ ಪ್ರಯತ್ನ ಮಾಡಲಿದ್ದಾರಂತೆ ನಿರ್ದೇಶಕರು.

‘ಪುಟ್ಟಗೌರಿ’ ಮತ್ತು ‘ಕನ್ನಡತಿ’ ಧಾರಾವಾಹಿಗಳ ಖ್ಯಾತಿಯ ನಟಿ ರಂಜನಿ ರಾಘವನ್‌ಗೆ ಇದು ನಾಲ್ಕನೇ ಚಿತ್ರ. ಸಂಪ್ರದಾಯಸ್ಥ ಕುಟುಂಬದ ಹುಡುಗಿಯೊಬ್ಬಳು ಪ್ರೀತಿಯ ಬಲೆಯಲ್ಲಿ ಸಿಲುಕಿದಾಗ ಆಗುವ ಅವಸ್ಥೆಗಳು, ಬದುಕಿನಲ್ಲಿ ಎದುರಾಗುವಅವಾಂತರಗಳನ್ನು ಹೇಗೆ ನಿಭಾಯಿಸುತ್ತಾಳೆ ಎನ್ನುವುದನ್ನು ರಂಜನಿ ನಿಭಾಯಿಸುವ ಪಾತ್ರವು ಕಟ್ಟಿಕೊಡಲಿದೆಯಂತೆ.

‘ಆಡುವ ಗೊಂಬೆ’ ಚಿತ್ರದಲ್ಲಿ ನಟಿಸಿದ್ದ ದಿಶಾಕೃಷ್ಣಯ್ಯ ಈ ಚಿತ್ರದಲ್ಲಿ ಒಂದು ಒಳ್ಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾರಾಗಣದಲ್ಲಿ ಪ್ರದೀಪ್, ರೋಹಿಣಿ, ಲಕ್ಷಿಭಾಗವತಾರ್ ಇದ್ದಾರೆ.

ಎರಡು ಹಾಡುಗಳಿಗೆ ಬಿ.ಜೆ. ಭರತ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ನಂದಕಿಶೋರ್, ಸಂಕಲನ ಶೇಷು ಅವರದು. ಮೂವೀ ವಾಕ್ಸ್ ಸಂಸ್ಥೆಯು ಈ ಚಿತ್ರದ ನಿರ್ಮಾಣ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.