ADVERTISEMENT

ಟಾಲಿವುಡ್‌: ‘ಅವತಾರ್‌’ನ ಎರಡನೇ ಇನಿಂಗ್ಸ್‌ ಆರಂಭ

ರಮೇಶ ಕೆ
Published 22 ನವೆಂಬರ್ 2020, 19:30 IST
Last Updated 22 ನವೆಂಬರ್ 2020, 19:30 IST
ಮನೋಜ್‌ ಪುತ್ತೂರು
ಮನೋಜ್‌ ಪುತ್ತೂರು   
""

ತುಳು ಚಿತ್ರ‘ಕುಡ್ಲ ಕೆಫೆ’ ಮೂಲಕ ಸಿನಿ ಜಗತ್ತಿಗೆ ಪ್ರವೇಶ ಮಾಡಿದ ಮನೋಜ್‌ ಪುತ್ತೂರು ಕೋಸ್ಟಲ್‌ವುಡ್‌ ಅನ್ನು ಚಿಮ್ಮುಹಲಗೆ ಮಾಡಿಕೊಂಡು ಗಾಂಧಿನಗರಕ್ಕೆ ಜಿಗಿದವರು. ಹಲವು ಕನ್ನಡ ಸಿನಿಮಾಗಳ ಮುಖ್ಯಪಾತ್ರದಲ್ಲಿ ನಟಿಸಿ ಮಿಂಚಿದ ಇವರಿಗೆ ಟಾಲಿವುಡ್‌ನಲ್ಲಿ ಈಗ ದಿಡ್ಡಿ ಬಾಗಿಲು ತೆರೆದುಕೊಂಡಿದೆ.

‘ಎಂತವಾರಲೈನಾ’ ಸಿನಿಮಾ ಮೂಲಕ ತೆಲುಗಿಗೆ ಪದಾರ್ಪಣೆ ಮಾಡಿದ ಮನೋಜ್‌, ಸದ್ಯ ನಾಗರಾಜ್‌ ನಿರ್ದೇಶನದ ಮತ್ತೊಂದು ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಹೈದರಾಬಾದ್‌ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದ್ದು, ಶೇ 60 ರಷ್ಟು ಕೆಲಸ ಮುಗಿದಿದೆಯಂತೆ. ಚಿತ್ರದ ಶೀರ್ಷಿಕೆ ಅಂತಿಮ ಆಗಬೇಕಿದೆ.

‘ಲಾಕ್‌ಡೌನ್‌ ಸಮಯದಲ್ಲಿ ನಡೆಯುವ ಕಥೆ ಇದು, 25 ವರ್ಷಗಳಿಂದ ದೂರವಿದ್ದ ಎರಡು ಕುಟುಂಬಗಳು ಒಂದಾಗುವ ಕಥಾ ಹಂದರವಿದೆ. ಸಂಪೂರ್ಣ ಕೌಟುಂಬಿಕ ಚಿತ್ರ. ನಿರ್ದೇಶಕರಿಗೆ ಇದು ಮೊದಲ ಚಿತ್ರವಾದ್ದರಿಂದ ನಿರೀಕ್ಷೆ ಹೆಚ್ಚಿದೆ. ಚಾಂದಿನಿ ಜೊತೆಯಾಗಿ ನಟಿಸುತ್ತಿದ್ದಾರೆ’ ಎಂದು ಮನೋಜ್‌ ಹೇಳುತ್ತಾರೆ.

ADVERTISEMENT

ಮನೋಜ್‌ ಪುತ್ತೂರು ಅವರು ಸಿನಿಮಾಗಾಗಿ ತಮ್ಮ ಹೆಸರನ್ನು ಅಧಿಕೃತವಾಗಿ ಬದಲಾಯಿಸಿಕೊಳ್ಳಲು ನಿರ್ಧರಿಸಿದ್ದು, ‘ಅವತಾರ್‌’ ಎಂಬುದಾಗಿ ಇಟ್ಟುಕೊಂಡಿದ್ದಾರೆ. ಮುಂದಿನ ಚಿತ್ರಗಳಲ್ಲಿ ಇದೇ ಹೆಸರು ಇರುತ್ತದೆ ಎಂದೂ ಅವರು ಹೇಳುತ್ತಾರೆ.

ಕಥೆಗಾರ ವಿಜಯೇಂದ್ರ ಪ್ರಸಾದ್‌ ಅವರಿಂದ ಆಮಂತ್ರಣ: ಹೆಸರಾಂತ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಅವರ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್‌ ಅವರು ಮನೋಜ್‌ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಚಿತ್ರವೊಂದರಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದಾರಂತೆ.

‘ವಿಜಯೇಂದ್ರ ಪ್ರಸಾದ್‌ ಅವರು ನನ್ನ ಬಗ್ಗೆ ತಿಳಿದುಕೊಂಡು ಬಹಳಷ್ಟು ಚರ್ಚೆ ಮಾಡಿ ಅವರ ಸ್ನೇಹಿತರ ಮೂಲಕ ಮನೆಗೆ ಕರೆಸಿಕೊಂಡರು. ಸುಮಾರು ಒಂದೂವರೆ ಗಂಟೆ ಅವರೊಟ್ಟಿಗೆ ಕಾಲ ಕಳೆದೆ. ನಟನೆಯ ಬಗ್ಗೆ ಒಂದಿಷ್ಟು ಕೇಳಿದರು, ಎಲ್ಲದಕ್ಕೂ ಉತ್ತರ ಕೊಟ್ಟೆ. ಅದಕ್ಕೆ ಅವರು ತೆಲುಗು, ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಕಾಣಲಿರುವ ಸಿನಿಮಾ ಒಂದಕ್ಕೆ ಕಥೆ ಸಿದ್ಧಪಡಿಸುತ್ತಿದ್ದು, ಮೊದಲ ಭಾಗವನ್ನು ವಿವರಿಸಿದರು. ಕರ್ನಾಟಕದವರೇ ಅದಕ್ಕೆ ನಿರ್ಮಾಪಕರು. ಇದೊಂದು ಥ್ರಿಲ್ಲರ್‌ ಕಥೆ ಎಂದಷ್ಟೇ ಹೇಳಿದ್ದಾರೆ. ಇದೊಂದು ನನಗೆ ಸಿಕ್ಕ ದೊಡ್ಡ ಅವಕಾಶ’ ಎಂದು ಮನೋಜ್‌ ಸಂತಸ ವ್ಯಕ್ತಪಡಿಸಿದರು.

ಅಂದಹಾಗೆ ಮನೋಜ್‌ ಅವರು ಸ್ಯಾಂಡಲ್‌ವುಡ್‌ನಲ್ಲೂ ಬ್ಯುಸಿ ಆಗಿದ್ದು, ಕೀರ್ತಿ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಡಿಸೆಂಬರ್‌ ಕೊನೆಯ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆಯಂತೆ. ಬೆಂಗಳೂರು ಹಾಗೂ ಒಂದು ಹಳ್ಳಿಗೆ ಸಂಬಂಧಿಸಿದ ಕಥೆ ಇದು. ಕಲಬುರ್ಗಿಯ ಸಿದ್ದು ಅವರು ಬಂಡವಾಳ ಹೂಡಿದ್ದಾರೆ.

ಮೈಸೂರಿನ ರಂಗಾಯಣದಲ್ಲಿ ಡಿಪ್ಲೊಮಾ ಇನ್‌ ಥಿಯೇಟರ್‌ ಶಿಕ್ಷಣ ಪಡೆದಿರುವ ಮನೋಜ್‌, ‘ರಿವೀಲ್‌’, ‘ಪರಸಂಗ’ ಹಾಗೂ ‘ಕುಮಾರಿ 21 ಎಫ್‌’ ಕನ್ನಡ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕೆ.ವಿ.ವಿಜಯೇಂದ್ರ ಪ್ರಸಾದ್‌ ಅವರೊಂದಿಗೆ ನಟ ಮನೋಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.