ADVERTISEMENT

ಸಂದರ್ಶನ: ಅಯಾನ ಸಿನಿಯಾನ

ಅಭಿಲಾಷ್ ಪಿ.ಎಸ್‌.
Published 26 ಜೂನ್ 2025, 23:30 IST
Last Updated 26 ಜೂನ್ 2025, 23:30 IST
ಅಯನಾ 
ಅಯನಾ    

ಗಿರೀಶ ಕಾಸರವಳ್ಳಿ ಅವರ ನಿರ್ದೇಶನದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸಿನಿಮಾ ಮೂಲಕ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ಅಯಾನ ಬಳಿಕ ಪೃಥ್ವಿ ಅಂಬಾರ್‌ ನಟನೆಯ ‘ದೂರದರ್ಶನ’ ಸಿನಿಮಾ ಮೂಲಕ ಸದ್ದು ಮಾಡಿದ್ದರು. ಹಳ್ಳಿ ಹುಡುಗಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದ ಇವರು ಇದೀಗ ‘ಎಕ್ಸ್‌ ಆ್ಯಂಡ್‌ ವೈ’ ಸಿನಿಮಾದಲ್ಲಿ ಮಾಡರ್ನ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಜೂನ್‌ 26ಕ್ಕೆ ತೆರೆಕಂಡಿದ್ದು ತಮ್ಮ ಸಿನಿಪಯಣದ ಬಗ್ಗೆ ಅಯಾನ ಮಾತಿಗಿಳಿದಾಗ...

‘ಬೆಂಗಳೂರಿನ ಹುಡುಗಿ ನಾನು. ಹೀಗಿದ್ದರೂ ನಟನೆಯ ಕನಸು ಹೊತ್ತು ಬೆಳೆದಿರಲಿಲ್ಲ. ಭರತನಾಟ್ಯ, ರಂಗಭೂಮಿ ನನ್ನನ್ನು ಬಣ್ಣದ ಲೋಕಕ್ಕೆ ಪರಿಚಯಿಸಿತು. ಎಂ.ಎಸ್‌.ಸತ್ಯು ಅವರ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದೆ. ಇವುಗಳು 40 ಪ್ರದರ್ಶನ ಕಂಡಿವೆ. ರಂಗಭೂಮಿಯಿಂದ ಬಂದ ನನಗೆ ಸಿನಿಮಾ ಲೋಕವೇ ಹೊಸದಾಗಿತ್ತು. ನೂರಾರು ಜನರೆದುರು ನಿಂತು ನಟಿಸಿದ ನನಗೆ ಕ್ಯಾಮೆರಾದೆದುರು ನಟಿಸುವುದು ಸವಾಲಿನ ವಿಷಯವಾಗಿತ್ತು. ನನ್ನ ಮೊದಲ ಕಮರ್ಷಿಯಲ್‌ ಸಿನಿಮಾ ‘ದೂರದರ್ಶನ’ ಬಿಡುಗಡೆಗೊಂಡಾಗ ಭಯವಿತ್ತು. ಚಿತ್ರಮಂದಿರಗಳಲ್ಲಿ ಜನ ನನ್ನ ಪಾತ್ರವನ್ನು ಹಾಗೂ ಸಿನಿಮಾದ ಭಿನ್ನ ಕಥಾವಸ್ತುವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲವೂ ಇತ್ತು. ಈ ಸಿನಿಮಾ ಒಂದೊಳ್ಳೆಯ ಅನುಭವವನ್ನು ನೀಡಿತ್ತು’ ಎಂದು ನೆನಪುಗಳನ್ನು ಬಿಚ್ಚಿಟ್ಟರು.  

ಈಗ ತೆರೆಕಂಡಿರುವ ಭಿನ್ನ ಕಥಾಹಂದರದ ‘ಎಕ್ಸ್‌ ಆ್ಯಂಡ್‌ ವೈ’ ಸಿನಿಮಾದಲ್ಲಿ ‘ಆಶಾ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನಷ್ಟೇ ಹುಟ್ಟಬೇಕಿರುವ ಒಂದು ಆತ್ಮದ ಜೊತೆಗಿನ ಪಯಣ ನನ್ನದು. ಸಿನಿಮಾ ನೋಡಿದರೆ ಇದು ಅರ್ಥವಾಗಲಿದೆ. ಮಾಡರ್ನ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಸಿನಿಮಾದ ಚಿತ್ರೀಕರಣ ಹೊಸ ಪಾಠ ಕಲಿಸಿದೆ. ಈ ಹಿಂದೆ ಚಿತ್ರೀಕರಣಕ್ಕೂ ಮುನ್ನ ಬಹಳ ಸಿದ್ಧತೆ ಮಾಡಿಕೊಂಡು ಹೋಗುವ ನಟಿ ನಾನಾಗಿದ್ದೆ. ಆದರೆ ನಿರ್ದೇಶಕ ಸತ್ಯ ಅವರು ಸಿನಿಮಾದ ಚಿತ್ರೀಕರಣದ ದಿನವೇ ಸಂಭಾಷಣೆ, ದೃಶ್ಯಗಳನ್ನು ಬರೆದದ್ದೂ ಇದೆ. ಇದನ್ನು ಆ ಕ್ಷಣದಲ್ಲೇ ಚಿತ್ರೀಕರಿಸಿದ್ದೂ ಇದೆ. ಹೀಗಾಗಿ ಇದು ನಟಿಯಾಗಿ ನನಗೆ ಪಾಠದಂತಿತ್ತು’ ಎಂದರು ಅಯಾನ. 

ADVERTISEMENT

‘ದೂರದರ್ಶನ ಸಿನಿಮಾದಿಂದ ಚಿತ್ರರಂಗ ನನ್ನನ್ನು ಗುರುತಿಸಿತು. ನನ್ನ ನಟನೆಯನ್ನು ಜನರು ಗುರುತಿಸಿದರು. ‘ದೂರದರ್ಶನ’ದ ಬಳಿಕ ಸುಮಾರು ಆರು ತಿಂಗಳು ಬಿಡುವು ಪಡೆದಿದ್ದೆ. ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ಬಳಿಕ ತೆಲುಗಿನಲ್ಲೊಂದು ಸಿನಿಮಾ ಮಾಡಿದೆ. ಇದು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ‘ಅಯ್ಯನ ಮನೆ’ ಬಳಿಕ ಜೀ5ನಲ್ಲಿ ಪ್ರಸಾರವಾಗಲಿರುವ ಮತ್ತೊಂದು ವೆಬ್‌ ಸರಣಿಯಲ್ಲಿ ನಾನು ಮುಖ್ಯಭೂಮಿಕೆಯಲ್ಲಿದ್ದೇನೆ. ಇದರಲ್ಲಿ 60 ಕಂತುಗಳಿವೆ. ‘ಅಯ್ಯನ ಮನೆ’ ಬಳಿಕ ವೆಬ್‌ ಸರಣಿ ಮೇಲೆ ಜನರ ಗಮನ ಹೆಚ್ಚಿದೆ. ಕಲಾವಿದರಿಗೂ ಪರ್ಯಾಯ ವೇದಿಕೆ ಈ ಮುಖಾಂತರ ದೊರೆತಿದೆ. ಕನ್ನಡದಲ್ಲಿ ವಿಜಯ್‌ ನಾಗೇಂದ್ರ ಅವರ ‘ಆಲ್ಫಾ’ ಸಿನಿಮಾದ ಶೇಕಡ 70ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಹೊಸ ಕಥೆಗಳನ್ನು ಕೇಳುತ್ತಿದ್ದೇನೆ. ನನ್ನ ಸಿನಿಪಯಣವನ್ನು ನೋಡಿದರೆ ನಾನು ಭಿನ್ನವಾದ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡು ಬಂದಿದ್ದೇನೆ. ಈ ಸೂತ್ರವನ್ನಿಟ್ಟುಕೊಂಡೇ ಮುಂದುವರಿಯುತ್ತೇನೆ’ ಎಂದು ಮಾತಿಗೆ ವಿರಾಮವಿತ್ತರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.