ADVERTISEMENT

ವಿದ್ಯಾರ್ಥಿಗಳ ಜರ್ನಿ ಶುರು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 20:00 IST
Last Updated 7 ಮಾರ್ಚ್ 2019, 20:00 IST
   

ಪಾಲಕರು ಮತ್ತು ಮಕ್ಕಳ ಸಂಬಂಧವನ್ನು ಕುರಿತ ಕಥಾನಕವನ್ನು ಹೊಂದಿರುವ ‘ಇಬ್ಬರು ಬಿ.ಟೆಕ್‌ ಸ್ಟೂಡೆಂಟ್ಸ್‌ ಜರ್ನಿ’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಎರಡೂ ಭಾಷೆಗಳ ಕಲಾವಿದರು, ತಂತ್ರಜ್ಞರು ಇದರಲ್ಲಿ ಕೆಲಸ ಮಾಡಿದ್ದಾರೆ.

ಬಿ.ಟೆಕ್‌ ವಿದ್ಯಾರ್ಥಿಗಳಿಬ್ಬರು ಎಂಗೇಜ್‌ಮೆಂಟ್‌ ಆದ ನಂತರ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಪ್ರವಾಸ ಹೊರಡುತ್ತಾರೆ. ಅಲ್ಲಿ ಅವರಿಬ್ಬರ ನಡುವೆ ಸಣ್ಣಪುಟ್ಟ ಕಾರಣಗಳಿಗೆ ಭಿನ್ನಾಭಿಪ್ರಾಯಗಳು ಬಂದು, ಇಬ್ಬರೂ ದೂರವಾಗಲು ನಿರ್ಧರಿಸುತ್ತಾರೆ. ಈ ಸಂದರ್ಭದಲ್ಲಿ ಎರಡೂ ಕಡೆಯವರ ಕುಟುಂಬದವರು ಅವರನ್ನು ಮತ್ತೆ ಒಂದು ಮಾಡಲು ಏನೇನು ಮಾಡುತ್ತಾರೆ, ಅವರ ಪ್ರಯತ್ನ ಯಶಸ್ವಿಯಾಗುತ್ತದೆಯೇ ಎಂಬುದೇ ಈ ಚಿತ್ರದ ಕಥಾವಸ್ತು.

ಈಗಾಗಲೇ ಕೆಲವು ತೆಲುಗು ಚಿತ್ರಗಳನ್ನು ನಿರ್ದೇಶಿಸಿ ಹೆಸರು ಗಳಿಸಿರುವ ವೇಮುಗಂಟಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ವಿದ್ಯಾರ್ಥಿಗಳ ಜೀವನಶೈಲಿಯಲ್ಲಾಗುತ್ತಿರುವ ಬದಲಾವಣೆ, ಮಕ್ಕಳು ಮತ್ತು ಪಾಲಕರ ನಡುವಿನ ಸೆಂಟಿಮೆಂಟ್‌ಗಳು, ಸಂಬಂಧದ ಎಳೆಗಳು ಹೇಗೆ ದುರ್ಬಲವಾಗುತ್ತಿವೆ ಮತ್ತು ಅವುಗಳನ್ನು ಗಟ್ಟಿಗೊಳಿಸುವುದು ಹೇಗೆ ಎಂಬ ಅನೇಕ ಸೂಕ್ಷ್ಮ ವಿಚಾರಗಳನ್ನು ಈ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶಿಸಲಾಗಿದೆ’ ಎಂದು ವೇಮುಗಂಟಿ ಹೇಳುತ್ತಾರೆ.

ADVERTISEMENT

ತೆಲುಗು ಸಿನಿಮಾಗಳ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಗೌತಂರಾಜು ಅವರ ಪುತ್ರ ಕೃಷ್ಣ ರಾಜು ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಣ್‌ ಚೇತ್ವಾನಿ ಈ ಚಿತ್ರದ ನಾಯಕಿ. ಇವರಿಬ್ಬರೂ ಮೊದಲಬಾರಿಗೆ ಕನ್ನಡದ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಸಾಯಿಕುಮಾರ್‌ ಅವರು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದವರೇ ಆದ ಬುಲೆಟ್‌ ಪ್ರಕಾಶ್‌, ರವಿಕಿರಣ್‌, ವಿಜಯ್‌ ಚಂಡೂರು ಹಾಗೂ ವೀಣಾ ಸುಂದರ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ. ಯಲ್ಲೇಂದ್ರ ಮಹಾವೀರ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಥ್ರಿಲ್ಲರ್‌ ಮಂಜು ಅವರ ಸಾಹಸ ನಿರ್ದೇಶನವಿದೆ. ಮನೋಹರ್‌ ಛಾಯಾಗ್ರಹಣ ಮಾಡಿದ್ದಾರೆ. ಶ್ರೀನಿವಾಸ ಯಾದವ್‌ ಹಾಗೂ ಚಿಕ್ಕಬಳ್ಳಾಪುರ ಶ್ರೀನಿವಾಸ್‌ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.