ADVERTISEMENT

‘ಕಿರಿಕ್‌ ಪಾರ್ಟಿ’ ತಂಡದ ‘ಬ್ಯಾಚುಲರ್‌ ಪಾರ್ಟಿ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 12:25 IST
Last Updated 13 ಡಿಸೆಂಬರ್ 2023, 12:25 IST
ಪೋಸ್ಟರ್‌
ಪೋಸ್ಟರ್‌   

ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ್ದ ‘ಕಿರಿಕ್ ಪಾರ್ಟಿ’ ಸಿನಿಮಾ ತೆರೆಕಂಡು ಏಳು ವರ್ಷವಾಗಿದೆ. ಈ ಹೊತ್ತಿನಲ್ಲಿ ಇದೇ ತಂಡದ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಅದೇ ‘ಬ್ಯಾಚುಲರ್‌ ಪಾರ್ಟಿ’. 

‘ಕಿರಿಕ್ ಪಾರ್ಟಿ’ಯ ಬರಹಗಾರ ಅಭಿಜಿತ್ ಮಹೇಶ್, ನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾ ಮೂಲಕ ನಿರ್ದೇಶಕನಾಗಿ ಚಂದನವನದಲ್ಲಿ ಪಯಣ ಆರಂಭಿಸಿದ್ದು, ತಮ್ಮ ನೆಚ್ಚಿನ ಕಾಮಿಡಿ ಜಾನರ್‌ನ ಸಿನಿಮಾವೊಂದನ್ನು ತೆರೆಗೆ ತರುತ್ತಿದ್ದಾರೆ.

‘ಬ್ಯಾಚುಲರ್‌ ಪಾರ್ಟಿ’ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಅಚ್ಯುತ್ ಕುಮಾರ್, ದಿಗಂತ್ ಹಾಗೂ ಲೂಸ್ ಮಾದ ಯೋಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ನಟಿಸಬೇಕಿತ್ತು. ಆದರೆ ‘ಕಾಂತಾರ’ದ ಯಶಸ್ಸಿನ ಬೆನ್ನಲ್ಲೇ ಅದರ ಎರಡನೇ ಭಾಗದ ಸಿದ್ಧತೆಗೆ ರಿಷಬ್‌ ಇಳಿದ ಕಾರಣ, ಅವರು ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾದಿಂದ ಹೊರಗುಳಿದಿದ್ದರು.

ADVERTISEMENT

ಅವರ ಸ್ಥಾನಕ್ಕೆ ಲೂಸ್‌ ಮಾದ ಯೋಗಿ ಬಂದಿದ್ದಾರೆ. ಸಿನಿಮಾ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣಗೊಂಡಿರುವ ಕಾರಣ, ಪೋಸ್ಟರ್‌ನಲ್ಲೂ ಅದರ ಝಲಕ್‌ ಇದೆ. ಪರಂವಃ ಸ್ಟುಡಿಯೋಸ್‌ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರವಿಂದ್ ಛಾಯಾಚಿತ್ರಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ನಟಿ ಸಿರಿ ರವಿಕುಮಾರ್‌ ತಾರಾಬಳಗದಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.