ಎರಿಕಾ
ಎರಿಕಾ ಇನ್‌ಸ್ಟಾಗ್ರಾಂ
ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಜೊತೆ ‘ನಿನ್ನಿಂದಲೆ’ ಸಿನಿಮಾದಲ್ಲಿ ಅಭಿನಯಿಸಿ ಕನ್ನಡಿಗರ ಮನ ಗೆದ್ದಿದ್ದ ನಟಿ, ಮಾಡೆಲ್ ಎರಿಕಾ ಫರ್ನಾಂಡಿಸ್ ಕೆಲ ವರ್ಷಗಳಿಂದ ಉದ್ಯಮದಿಂದ ದೂರ ಇದ್ದರು.
ಇದಕ್ಕೆ ಕಾರಣ ಎರಿಕಾ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು ಎಂಬ ವರದಿಗಳು ಬಿತ್ತರವಾಗಿವೆ.
ಎರಿಕಾ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಇದೀಗ ಮತ್ತೆ ಚಿತ್ರರಂಗ, ಮಾಡೆಲಿಂಗ್‌ನತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಟುಡೇ ಮಾಧ್ಯಮದ ಜೊತೆ ಮಾತನಾಡಿರುವ ಅವರು ‘ನನ್ನ ಸಂಗಾತಿಯಿಂದ ನನ್ನ ಮೇಲೆ ದೈಹಿಕವಾಗಿ ಹಿಂಸೆ ನಡೆದಿತ್ತು’ ಎಂಬುದನ್ನು ಬಹಿರಂಗ ಮಾಡಿದ್ದಾರೆ.
‘ಯುವ ಉದ್ಯಮಿಯೊಬ್ಬರ ಜೊತೆ ನಾನು ಸಂಬಂಧದಲ್ಲಿದ್ದೆ. ಸಂಬಂಧ ಮುಂದುವರೆದು ಆತ್ಮೀಯರಾಗಿದ್ದಾಗ ಆತ ನಾನು ಈ ಉದ್ಯಮವನ್ನು ಬಿಡಬೇಕು ಎಂದು ಹೇಳುತ್ತಿದ್ದ. ಹಿಡಿತ ಸಾಧಿಸಲು ಹವಣಿಸುತ್ತಿದ್ದ. ಕೆಲವು ಸಲ ನನ್ನ ಮೇಲೆ ದೈಹಿಕವಾಗಿ ಹಿಂಸೆಯೂ ನಡೆಯಿತು’ ಎಂದು ಹೇಳಿಕೊಂಡಿದ್ದಾರೆ.
‘ನಿಜ, ನಾನು ಅವಾಗ ಇದನ್ನು ಬಹಿರಂಗಗೊಳಿಸಲಿಲ್ಲ. ಏಕೆಂದರೆ ಇದೊಂದು ಮೀಡಿಯಾ ಟ್ರಯಲ್ ಆಗುವ ಇಷ್ಟ ನನಗೆ ಇರಲಿಲ್ಲ. ನನಗೆ ಕಾನೂನು, ಪೊಲೀಸರ ಮೇಲೆಯೂ ಅತಿಯಾದ ನಂಬಿಕೆಯಿರಲಿಲ್ಲ. ಹೀಗಾಗಿ ನಾನೇ ಆತನಿಂದ ದೂರವಾಗಿ ಎರಡು ವರ್ಷ ಮೌನವಾಗಿದ್ದೆ. ಈ ಎರಡು ವರ್ಷ ನಾನು ದುಬೈನಲ್ಲಿ ನೆಲೆಸಿದ್ದೆ’ ಎಂದಿದ್ದಾರೆ.
ಎರಿಕಾ ಅವರು ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯ ಧಾರಾವಾಹಿ ಲೋಕದಲ್ಲೂ ಅವರು ಜನಪ್ರಿಯ. ಸದ್ಯ ಅವರು, ತಾನು ಹಲವು ಯೋಜನೆಗಳ ಬಗ್ಗೆ ಸಿದ್ಧತೆ ನಡೆಸಿದ್ದೇನೆ. ‘ಮಾತುಕತೆ ನಡೆದಿದೆ. ಇನ್ನಷ್ಟೇ ನಿಮಗೆ ತಿಳಿಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.
‘ನಿನ್ನಿಂದಲೆ’ ಸಿನಿಮಾದಲ್ಲಿ ತಮ್ಮ ನಟನೆ ಹಾಗೂ ಬಳಕುವ ಬಳ್ಳಿಯಂಥಹ ಮೈಮಾಟದಿಂದ ಮಂಗಳೂರು ಮೂಲದ ಎರಿಕಾ ಫರ್ನಾಂಡಿಸ್ ಸಿನಿಪ್ರಿಯರ ಗಮನ ಸೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.