ADVERTISEMENT

Sandalwood | ‘ಸಿಂಗ್ಲಿ’ಯಾದ ‘ಅಯ್ಯಂಗಾರಿ’

ಅಭಿಲಾಷ್ ಪಿ.ಎಸ್‌.
Published 16 ಸೆಪ್ಟೆಂಬರ್ 2025, 23:30 IST
Last Updated 16 ಸೆಪ್ಟೆಂಬರ್ 2025, 23:30 IST
ಸಿಂಗ್ಲಿ; ಆದಿತ್ಯ 
ಸಿಂಗ್ಲಿ; ಆದಿತ್ಯ    

‘ಆ ದಿನಗಳು’ ಸಿನಿಮಾ ಖ್ಯಾತಿಯ ನಿರ್ದೇಶಕ ಕೆ.ಎಂ.ಚೈತನ್ಯ ಆ್ಯಕ್ಷನ್‌ ಕಟ್‌ ಹೇಳಿರುವ ‘ಬಲರಾಮನ ದಿನಗಳು’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ವಿನೋದ್‌ ಪ್ರಭಾಕರ್‌ ಅವರ 25ನೇ ಸಿನಿಮಾವಾದ ಇದರಲ್ಲಿ ಆಶಿಶ್‌ ವಿದ್ಯಾರ್ಥಿ, ಅತುಲ್‌ ಕುಲಕರ್ಣಿ, ಅವಿನಾಶ್‌, ಡ್ರ್ಯಾಗನ್‌ ಮಂಜು, ‘ಬಿಗ್‌ಬಾಸ್‌’ ಖ್ಯಾತಿಯ ವಿನಯ್‌ ಗೌಡ ಹೀಗೆ ಖ್ಯಾತ ಕಲಾವಿದರ ದಂಡೇ ಇದೆ. ಇವರ ಜೊತೆ ತೆರೆಹಂಚಿಕೊಂಡಿದ್ದಾರೆ ‘ಡೇರ್‌ಡೆವಿಲ್‌ ಮುಸ್ತಾಫಾ’ ಖ್ಯಾತಿಯ ಆದಿತ್ಯ ಆಶ್ರೀ. ‘ರಾಮಾನುಜ ಅಯ್ಯಂಗಾರಿ’ಯಾಗಿ ಮಿಂಚಿದ್ದ ಆದಿತ್ಯ ಇದೀಗ 1980ರ ಕಾಲಘಟ್ಟದ ಭೂಗತಲೋಕದ ಕಥೆಯಲ್ಲಿ ‘ಸಿಂಗ್ಲಿ’ ಎಂಬ ಮಾಸ್‌ ಪಾತ್ರದ ಮುಖಾಂತರ ಪ್ರೇಕ್ಷಕರೆದುರಿಗೆ ಬರಲಿದ್ದಾರೆ. 

ಈ ಕುರಿತು ಮಾತಿಗಿಳಿದ ಆದಿತ್ಯ, ‘2012ರಿಂದ ರಂಗಭೂಮಿಯಲ್ಲಿರುವ ನಾನು 2018ರಲ್ಲಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟೆ. ‘ಡೇರ್‌ಡೆವಿಲ್‌ ಮುಸ್ತಾಫಾ’ ರಿಲೀಸ್‌ ಆದ ಬಳಿಕ ನನ್ನ ಪಾತ್ರಕ್ಕೆ ಒಳ್ಳೆಯ ಪ್ರಶಂಸೆ ದೊರೆಯಿತು. ಈ ಸಿನಿಮಾ ಕಮರ್ಷಿಯಲ್‌ ದೃಷ್ಟಿಯಿಂದಲೂ ಗೆದ್ದಿತ್ತು. ಈ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಹಾಗೂ ಪ್ರೇಕ್ಷಕರು ನನ್ನನ್ನು ಗುರುತಿಸಿದರು. ಈ ಸಿನಿಮಾ ಬಳಿಕ ಮುಂದಿನ ಚಿತ್ರದ ಆಯ್ಕೆಯ ಸಂದರ್ಭದಲ್ಲಿ ಸಣ್ಣ ಅಳುಕಿತ್ತು. ಹಲವು ಸಿನಿಮಾಗಳ ಆಫರ್‌ಗಳು ಬಂದರೂ ಅವುಗಳಲ್ಲಿನ ಪಾತ್ರಕ್ಕೆ ಸತ್ವ ಇರಲಿಲ್ಲ, ಅವು ನನ್ನನ್ನು ಸೆಳೆಯಲಿಲ್ಲ. ನನ್ನ ವೃತ್ತಿಯೇ ನಟನೆಯಾಗಿರುವ ಕಾರಣ ಎರಡನೇ ಹೆಜ್ಜೆಯನ್ನು ಜಾಗರೂಕತೆಯಿಂದ ಇಡಬೇಕಿತ್ತು. ಈ ಸಂದರ್ಭದಲ್ಲಿ ಕೆ.ಎಂ.ಚೈತನ್ಯ ಅವರು ಕರೆ ಮಾಡಿ ‘ಬಲರಾಮನ ದಿನಗಳು’ ಕಥೆಯೊಳಗಿರುವ 24–25 ವರ್ಷದ ಯುವಕನಾದ ‘ಸಿಂಗ್ಲಿ’ಯೆಂಬ ಪಾತ್ರದ ವಿವರಣೆ ನೀಡಿದ್ದರು. ಈ ಪಾತ್ರದ ಮೇಲೆ ನಂಬಿಕೆ ಮೂಡಿದ ಕಾರಣ ಒಪ್ಪಿಕೊಂಡೆ. ಚಿತ್ರೀಕರಣ ಪೂರ್ಣಗೊಂಡು, ಡಬ್ಬಿಂಗ್‌ ಮುಗಿಸಿದ್ದೇನೆ’ ಎಂದರು. 

ಪಾತ್ರದ ಬಗ್ಗೆ ವಿವರಣೆ ನೀಡುತ್ತಾ, ‘ಇದು ಅಯ್ಯಂಗಾರಿ ಪಾತ್ರಕ್ಕೆ ಸಂಪೂರ್ಣ ತದ್ವಿರುದ್ಧವಾದ ಪಾತ್ರವಿದು. ಈ ಪಾತ್ರ ಸಿನಿಮಾದ ಹೀರೊ, ಖಳನಾಯಕ ಅಲ್ಲ. ಬದಲಾಗಿ ಅವನ ಜೀವನದಲ್ಲಿ ಅವನು ಹೀರೊ. ಪಿಕ್‌ ಪಾಕೆಟ್‌ ಮಾಡುತ್ತಿದ್ದ ಹುಡುಗನೊಬ್ಬ ತನಗಾದ ಅವಮಾನ, ಹತಾಶೆಯಿಂದ ಭೂಗತಲೋಕದ ದಿಗ್ಗಜರನ್ನು ಎದುರುಹಾಕಿಕೊಂಡು ಅವರ ಮಟ್ಟಕ್ಕೆ ಬೆಳೆಯುವ ಹಟ ಇಟ್ಟುಕೊಂಡಿರುತ್ತಾನೆ. ಈ ಪಾತ್ರದ ಸಿದ್ಧತೆಗಾಗಿ ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂದರ್ಶನಗಳನ್ನು ನೋಡಿದ್ದೆ, ಪಾತ್ರದ ಮಾತಿನ ಶೈಲಿ, ಹಾವಭಾವದ ಬಗ್ಗೆ ತಿಳಿದುಕೊಂಡೆ. ‘ಡೇರ್‌ಡೆವಿಲ್‌ ಮುಸ್ತಾಫಾ’ ನನಗೆ ಕ್ಲಾಸ್‌ ಲುಕ್‌ ನೀಡಿತ್ತು. ಇದು ಪೂರ್ಣವಾದ ಮಾಸ್‌ ಅವತಾರ ನೀಡಿದೆ. ಈ ಪಾತ್ರ ಪ್ರೇಕ್ಷಕರೆದುರಿಗೆ ಬಂದ ನಂತರ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳುವ ಭರವಸೆಯೂ ನನಗಿದೆ’ ಎನ್ನುತ್ತಾರೆ ಆದಿತ್ಯ. 

ADVERTISEMENT

ಆ್ಯಕ್ಷನ್‌ ಮಾಸ್ಟರ್‌ ಆದ ವಿನೋದ್‌! 

‘ಸಣ್ಣ ವಯಸ್ಸಿನಲ್ಲೇ ನನಗೆ ದಿಗ್ಗಜರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ನನಗೆ ಈ ಸಿನಿಮಾ ಮೂಲಕ ದೊರಕಿದೆ. ನಟನೆಯ ರುಚಿ ಗೊತ್ತಿದ್ದ ನನಗೆ ಆ್ಯಕ್ಷನ್‌ ಹೊಸ ಲೋಕವಾಗಿತ್ತು. ಸಾಹಸ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ವಿನೋದ್‌ ಪ್ರಭಾಕರ್‌ ಅವರೇ ನನಗೆ ತರಬೇತಿ, ಸಲಹೆ, ಸೂಚನೆ ನೀಡುತ್ತಿದ್ದರು. ನನ್ನ ಮೂಲಕ ನಿರ್ದೇಶಕರು ‘ಸಿಂಗ್ಲಿ’ ಪಾತ್ರಕ್ಕೆ ಜೀವ ತುಂಬಿದ್ದರು. ಜೊತೆಗೆ ಕೆ.ಎಂ.ಚೈತನ್ಯ ಅವರು ನನ್ನೊಳಗಿನ ನಟನೆಯನ್ನು ಗುರುತಿಸಿದ ಖುಷಿ ನನಗಿತ್ತು. ನನ್ನಲ್ಲೂ ಮಾಸ್‌ ಎಲಿಮೆಂಟ್‌ ಇದೆ ಎನ್ನುವುದನ್ನು ಅವರು ಕಂಡಿದ್ದರು. ಇದು ‘ಸಿಂಗ್ಲಿ’ ಎಂಬ ಪಾತ್ರದ ಮುಖಾಂತರ ಹೊರಬಿದ್ದಾಗ ನಾನೇ ಆಶ್ಚರ್ಯಪಟ್ಟಿದ್ದೆ. ಚೈತನ್ಯ ಅವರ ಬರವಣಿಗೆ ಕುತೂಹಲಕಾರಿಯಾಗಿದ್ದು, ಪ್ರೇಕ್ಷಕರನ್ನು ಸೀಟಿನಂಚಿಗೆ ತಂದು ಕೂರಿಸಲಿದೆ’ ಎಂದರು ಆದಿತ್ಯ. 

‘ಹೊಸ ಕಥೆಗಳನ್ನು ಕೇಳುತ್ತಿದ್ದೇನೆ. ಇಷ್ಟವಾಗುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದೇನೆ’ ಎನ್ನುತ್ತಾ ಆದಿತ್ಯ ಮಾತಿಗೆ ವಿರಾಮವಿತ್ತರು. 

ಆದಿತ್ಯ ಆಶ್ರೀ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.