ಕುಬುಸ
ಹೊಸಪೇಟೆ (ವಿಜಯನಗರ): ಬಳ್ಳಾರಿ ಭಾಗದ ಕನ್ನಡ ಭಾಷೆಯ ಸೊಗಡು ಹೊಂದಿರುವ ಕನ್ನಡದ ಮೊದಲ ಸಿನಿಮಾ 'ಕುಬುಸ' ಇದೇ 26ರಂದು ರಾಜ್ಯದಾದ್ಯಂತ ತೆರೆ ಕಾಣಲಿದ್ದು, ಜನರಿಗೆ ಇಷ್ಟವಾಗುವ ಆಶಯವನ್ನು ಚಿತ್ರ ತಂಡ ವ್ಯಕ್ತಪಡಿಸಿದೆ.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚಿತ್ರದ ನಿರ್ದೇಶಕ ರಘುರಾಮ ಚರಣ, ‘ಸಾಹಿತಿ ಕುಂ.ವೀರಭದ್ರಪ್ಪ ಕಾದಂಬರಿ ಆಧರಿತ ಈ ಸಿನಿಮಾವನ್ನು ಕುಟುಂಬದವರೆಲ್ಲರೂ ನೋಡಬಹುದು, ಸಮಾಜಕ್ಕೆ ಉತ್ತಮ ಸಂದೇಶ ಸಹ ಚಿತ್ರದಲ್ಲಿದೆ, ಇದು ನನ್ನ ನಿರ್ದೇಶನದ ಮೊದಲ ಸಿನಿಮಾ’ ಎಂದರು.
ಇದೇ 22ರಂದು ಬೆಂಗಳೂರಿನಲ್ಲಿ ಚಿತ್ರದ ಟ್ರೇಲರ್ ಅನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡುವರು. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ‘ರಾಮಾರಾಮಾರೇ’ ಖ್ಯಾತಿಯ ನಟರಾಜ್ ಎಸ್.ಭಟ್ ನಾಯಕ ನಟನಾಗಿ ಹಾಗೂ ರಂಗಭೂಮಿ ಕಲಾವಿದ ದುರ್ಗಾದಾಸ್ ಅವರ ಪುತ್ರಿ ಹನುಮಕ್ಕ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯರಾದ ರಮ್ಯಾ, ಜಯಲಕ್ಷ್ಮಿ ಸಹ ಪ್ರಮುಖ ಪಾತ್ರದಲ್ಲಿದ್ದಾರೆ ಎಂದರು.
ಚಿತ್ರದಲ್ಲಿ ನಾಯಕಿಯ ಗೆಳತಿಯ ಪಾತ್ರದಲ್ಲಿ ನಟಿಸಿರುವ ರಂಗಭೂಮಿ ಕಲಾವಿದರಾದ ಮಂಜಮ್ಮ ಜೋಗತಿ ಮಾತನಾಡಿ, ‘ಇದೊಂದು ಬಹಳ ನಿರೀಕ್ಷೆಯ ಚಿತ್ರ, ಕುಂ.ವೀರಭದ್ರಪ್ಪ ಅವರ ಗಟ್ಟಿನೆಲೆಯ ಕಾದಂಬರಿ ಚಿತ್ರಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟಿದೆ. ಜನರಿಗೆ ಇಷ್ಟವಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂದರು.
‘ಚಿತ್ರಕ್ಕೆ ಪ್ರದೀಪ್ ಚಂದ್ರ ಅವರ ಸಂಗೀತವಿದೆ. ಸಮಾಜದಲ್ಲಿನ ಕೆಲವೊಂದು ವರ್ಗಗಳು ಈಗಲೂ ಶೋಷಣೆಗೆ ಒಳಗಾಗುತ್ತಲೇ ಇರುವುದನ್ನು ತೋರಿಸುವ ಪ್ರಯತ್ನದ ಜತೆಗೆ ತಾಯಿಯೊಬ್ಬಳು ಮಗನನ್ನು ಕಷ್ಟಪಟ್ಟು ಬೆಳೆಸುವ ಒಂದು ಸುಂದರ ಕೌಟುಂಬಿಕ ಸಿನಿಮಾವನ್ನು ಸಿದ್ಧಪಡಿಸಲಾಗಿದೆ. ₹30 ಲಕ್ಷದೊಳಗೆ ನಿರ್ಮಿಸಲು ಹೊರಟಿದ್ದ ಸಿನಿಮಾದ ಬಜೆಟ್ ₹1.50 ಕೋಟಿ ಮೀರಿದೆ. ನಡುವೆ ಕೊರೊನಾದಂತಹ ಅಡೆತಡೆಗಳು ಬಂದವು, ಹೀಗಾಗಿ ಚಿತ್ರ ಬಿಡುಗಡೆ ವಿಳಂಬವಾಗಿದೆ. ರಾಜ್ಯದ 25 ಟಾಕೀಸ್‌ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ’ ಎಂದರು.
ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್, ರಂಗಭೂಮಿ ಕಲಾವಿದ ಮಾ.ಬಾ.ಸೋಮಣ್ಣ, ಉಪನ್ಯಾಸಕ ದಯಾನಂದ ಕಿನ್ನಾಳ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರಸಂಗಯ್ಯ, ನಟಿ ಭಾರತಿ, ನಿರ್ಮಾಪಕಿ ವಿ.ಶೋಭಾ ಇತರರು ಸಿನಿಮಾ ಕುರಿತು ಮಾತನಾಡಿ, ಪ್ರೇಕ್ಷಕರ ಸಹಕಾರ ಯಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.