ADVERTISEMENT

ಫೆ. 26ರಿಂದ ಬೆಂಗಳೂರು ಚಲನಚಿತ್ರೋತ್ಸವ

60 ದೇಶಗಳ 200 ಚಲನಚಿತ್ರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 19:30 IST
Last Updated 6 ಫೆಬ್ರುವರಿ 2020, 19:30 IST
ಅನಂತನಾಗ್‌ 
ಅನಂತನಾಗ್‌    

ಫೆ. 26ರಿಂದ ಮಾರ್ಚ್ 4ರವರೆಗೆ 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಸಿದ್ಧತೆ ಕೈಗೊಂಡಿದೆ.

‘ಬೆಂಗಳೂರಿನ ಒರಾಯನ್‌ ಮಾಲ್‌ನ 11 ಪರದೆಗಳಲ್ಲಿ ನಡೆಯಲಿದೆ. ಒಟ್ಟು 60 ದೇಶಗಳ 200 ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಫೆ. 26ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿತ್ರೋತ್ಸವಕ್ಕೆ ಚಾಲನೆ ನೀಡುವರು. ಉದ್ಘಾಟನೆಗೆ ಬಾಲಿವುಡ್ ತಾರೆಯರನ್ನು ಆಹ್ವಾನಿಸಲಾಗುವುದು. ಈ ಬಗ್ಗೆ ಪ್ರಯತ್ನಗಳು ಸಾಗಿವೆ. ಈ ಬಾರಿಯ ಚಿತ್ರೋತ್ಸವದ ವಿಷಯ ‘ಭಾರತೀಯ ಸಂಗೀತ ಪರಂಪರೆ ಮತ್ತು ಸಿನಿಮಾ’. ಇದರಡಿ ತ್ಯಾಗರಾಜ, ಪುರಂದರದಾಸ, ಸ್ವಾತಿ ತಿರುನಾಳ್, ತಾನ್‌ಸೇನ್, ಮೀರಾ ಕುರಿತಂತೆ ಸಂಗೀತ ಪ್ರಧಾನ ಸಿನಿಮಾಗಳ ಪ್ರದರ್ಶನ ನಡೆಯಲಿದೆ ಎಂದರು.

ADVERTISEMENT

ಏಷಿಯನ್, ಭಾರತೀಯ, ಕನ್ನಡ ಮತ್ತು ಕನ್ನಡದ ಜನಪ್ರಿಯ ಮನೋರಂಜನಾ ಹೀಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳಿವೆ. ಸಿನಿಮಾದ 125ನೇ ವರ್ಷದ ನೆನಪಿಗೆ ವಿಶ್ವ ಸಿನಿಲೋಕದ ಖ್ಯಾತನಾಮರಾದ ಭಾರತದ ಸತ್ಯಜಿತ್ ರೇ ಸೇರಿದಂತೆರಷ್ಯಾದ ಐಸೆನ್‌ಸ್ಟೈನ್, ಅಮೆರಿಕದ ಚಾರ್ಲಿ ಚಾಪ್ಲಿನ್, ಬಸ್ಟರ್ ಕೀಟನ್, ಜಪಾನ್‌ನ ಅಕಿರಾ ಕುರಸೋವಾ, ಸ್ವೀಡನ್‌ನ ವಿಕ್ಟೋರಿಯಾ ದಿಸಿಕಾ, ಇಟಲಿಯ ಜೀನ್ ಲೂಕ್ ಗೊದಾರ್ಡ್‌ ಅವರ ಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಈ ಬಾರಿ ಒರಾಯನ್ ಮಾಲ್, ನವರಂಗ್ ಚಿತ್ರಮಂದಿರ, ರಾಜ್ ಭವನ ಮತ್ತು ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಚಿತ್ರಗಳು ಪ್ರದರ್ಶನವಾಗಲಿವೆ. ‘ಪುನರಾವಲೋಕನ’ ವಿಭಾಗದಲ್ಲಿ ರಷ್ಯಾದ ಹೆಸರಾಂತ ಸಿನಿಶಾಸ್ತ್ರಜ್ಞ ಆ್ಯಂಡ್ರ್ಯೂ ತಾರ್ಕೊವ್‌ಸ್ಕಿ ಮತ್ತು ಭಾರತದ ಬಹುಭಾಷಾ ಕಲಾವಿದ ಅನಂತನಾಗ್ ಅವರ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಅಂತರರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ ಹಾಗೂ ಏಷ್ಯಾ ಚಲನಚಿತ್ರ ಪ್ರಚಾರ ಜಾಲದ ಪ್ರಶಸ್ತಿ ವಿಜೇತ ಆಯ್ದ ಚಿತ್ರಗಳ ಪ್ರದರ್ಶನ ಈ ಬಾರಿಯ ಚಿತ್ರೋತ್ಸವದ ವಿಶೇಷತೆಗಳಲ್ಲೊಂದು ಎಂದರು.

ಆತ್ಮಕಥೆ ಮತ್ತು ವ್ಯಕ್ತಿಚಿತ್ರಗಳು ವಿಭಾಗದಲ್ಲಿ ರಷ್ಯಾದ ಹೆಸರಾಂತ ನಿರ್ದೇಶಕ ಆ್ಯಂಡ್ರ್ಯೂ ತಾರ್ಕೊವ್‌ಸ್ಕಿ, ರಷ್ಯಾದ ಚಿತ್ರ ಕಲಾವಿದ ಆಂದ್ರೆ ಬ್ಲೇವ, ಭಾರತದ ಸಂಗೀತಜ್ಞ ರಾಜೀವ್ ತಾರಾನಾಥ್, ಕಲಾವಿದೆ ಹೆಲೆನ್ ರೆಡ್ಡಿ, ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಸಾಹಿತಿ ಚಂದ್ರಶೇಖರ ಕಂಬಾರ, ಖ್ಯಾತ ಛಾಯಾಗ್ರಾಹಕ ವಿ.ಕೆ. ಮೂರ್ತಿ ಅವರ ವ್ಯಕ್ತಿಚಿತ್ರಗಳ ಪ್ರದರ್ಶನವಿರುತ್ತದೆ. ‘ಫಿಲಂಬಜಾರ್’ ವಿಭಾಗದಲ್ಲಿ ಕಾರ್ಯಾಗಾರ, ಚರ್ಚೆ ನಡೆಯಲಿದೆ. ಲಿಂಗ ಸಂವೇದನೆ ಕುರಿತು ನಡೆಯಲಿದೆ ಎಂದು ತಿಳಿಸಿದರು.

ಬಜೆಟ್ ಗುಟ್ಟು

ಚಿತ್ರೋತ್ಸವಕ್ಕೆ ರಾಜ್ಯ ಸರ್ಕಾರ ಎಷ್ಟು ಅನುದಾನ ನೀಡುತ್ತಿದೆ ಎಂದು ಪ್ರಶ್ನಿಸಿದಾಗ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಸಿದ್ದರಾಮಪ್ಪ ‘ಹಿಂದಿನ ವರ್ಷದಷ್ಟೇ’ ಎಂದು ಉತ್ತರಿಸಿದರು. ‘ಹಿಂದಿನ ವರ್ಷ ಎಷ್ಟು ನೀಡಿದೆ’ ಎಂದು ವಿಚಾರಿಸಿದಾಗ, ಅವರಿಗೂ ಸ್ಪಷ್ಟ ಉತ್ತರ ಗೊತ್ತಿರಲಿಲ್ಲ.

ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹಿಮಂತ ರಾಜು, ಎನ್. ವಿದ್ಯಾಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.