16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1 ರಿಂದ 8ರವರೆಗೆ ನಡೆಯಲಿದ್ದು, ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗದ ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾಗಳನ್ನು ಪ್ರಕಟಿಸಲಾಗಿದೆ.
‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಘೋಷವಾಕ್ಯದಡಿ ಈ ಬಾರಿಯ ಚಲನಚಿತ್ರೋತ್ಸವ ನಡೆಯಲಿದೆ. ಏಷ್ಯನ್ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಕೊಂಕಣಿ, ಕನ್ನಡ ಭಾಷೆಯಲ್ಲಿರುವ ಜಯನ್ ಚೆರಿಯನ್ ನಿರ್ದೇಶನದ ‘ದಮ್ಮಮ್’ ಸಿನಿಮಾವಿದೆ.
ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಒಟ್ಟು ಹದಿನಾಲ್ಕು ಸಿನಿಮಾಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿವೆ. ಮನೋಹರ ಕೆ. ನಿರ್ದೇಶನದ ‘ಮಿಕ್ಕ ಬಣ್ಣದ ಹಕ್ಕಿ’, ಮಹಾದೇವ ಹಡಪದ ನಿರ್ದೇಶನದ ‘ಪರಜ್ಯ’, ಗುರುರಾಜ್ ಬಿ. ನಿರ್ದೇಶನದ ‘ಕೆರೆಬೇಟೆ’, ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ‘ಬೇಲಿ ಹೂ’, ದಯಾನಂದ್ ಜಿ. ನಿರ್ದೇಶನದ ‘ದಡ ಸೇರದ ದೋಣಿ’, ನವೀನ್ ದೇಶಬೋಯಿನ ನಿರ್ದೇಶನದ ‘ಅಂತಿಮ ಯಾತ್ರೆ’, ಅನೀಶ್ ಪೂಜಾರಿ ನಿರ್ದೇಶನದ ತುಳು ಚಿತ್ರ ‘ದಸ್ಕತ್’, ಕೃಷ್ಣೇಗೌಡ ನಿರ್ದೇಶನದ ‘ಲಚ್ಚಿ’, ಪ್ರಕಾಶ್ ಕಾರ್ಯಪ್ಪ ಕೆ. ನಿರ್ದೇಶನದ ಕೊಡವ ಚಿತ್ರ ‘ಕಾಂಗತ ಮೂಡ್’, ಸಂತೋಷ್ ಮಾಡ ನಿರ್ದೇಶನದ ತುಳು ಚಿತ್ರ ‘ಪಿದಾಯಿ’, ನಾಗರಾಜ ಸೋಮಯಾಜಿ ನಿರ್ದೇಶನದ ‘ಮರ್ಯಾದೆ ಪ್ರಶ್ನೆ’, ಪುಷ್ಪರಾಜ್ ರೈ ಮಲಾರಬೀಡು ನಿರ್ದೇಶನದ ‘ಆರಾಟ’, ಸಾಗರ್ ಪುರಾಣಿಕ್ ನಿರ್ದೇಶನದ ‘ವೆಂಕ್ಯ’ ಹಾಗೂ ಅವಿನಾಶ್ ವಿಜಯ್‌ಕುಮಾರ್ ನಿರ್ದೇಶನದ ‘ಮೈ ಹೀರೋ’ ಸಿನಿಮಾಗಳು ಸ್ಪರ್ಧೆಯಲ್ಲಿವೆ.
ಚಿತ್ರಭಾರತಿ ವಿಭಾಗದಲ್ಲಿ ಸ್ಪರ್ಧೆಯಲ್ಲಿರುವ 14 ಸಿನಿಮಾಗಳ ಪೈಕಿ ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ‘ಬೇಲಿ ಹೂ’ ಹಾಗೂ ಸಂತೋಷ್ ಮಾಡ ನಿರ್ದೇಶನದ ತುಳು ಚಿತ್ರ ‘ಪಿದಾಯಿ’ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.