ADVERTISEMENT

ಬೆಂಗಳೂರು ಚಲನಚಿತ್ರೋತ್ಸವ: ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌ʼ ಅತ್ಯುತ್ತಮ ಚಿತ್ರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:30 IST
Last Updated 6 ಫೆಬ್ರುವರಿ 2026, 16:30 IST
<div class="paragraphs"><p>ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ</p></div>

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

   

ಬೆಂಗಳೂರು: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಶುಕ್ರವಾರ ನಗರದ ಲುಲು ಮಾಲ್‌ನಲ್ಲಿ ತೆರೆ ಬಿದ್ದಿದ್ದು, ಚಿತ್ರೋತ್ಸವದ ಏಷ್ಯನ್‌ ವಿಭಾಗದಲ್ಲಿ ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌ʼ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, ಮರಾಠಿಯ ‘ಸಬರ್‌ ಬೊಂದಾʼ ಚಿತ್ರಭಾರತಿ ವಿಭಾಗದಲ್ಲಿ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತು. ಕನ್ನಡ ವಿಭಾಗದಲ್ಲಿ ‘ವನ್ಯಾ’ ಚಿತ್ರ ಮೊದಲ ಬಹುಮಾನಕ್ಕೆ ಭಾಜನವಾಯಿತು.

‘ಈ ವರ್ಷ 249 ಸಿನಿಮಾಗಳು ಪ್ರದರ್ಶನಗೊಂಡಿವೆ. ಸಣ್ಣಪುಟ್ಟ ಲೋಪಗಳ ನಡುವೆಯೂ ಚಿತ್ರೋತ್ಸವ ಯಶಸ್ವಿಯಾಗಿದೆ’ ಎಂದು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಮುರಳಿ ಪಿ.ಬಿ.ಹೇಳಿದರು.

ADVERTISEMENT

ಏಷ್ಯನ್‌ ಚಿತ್ರ ವಿಭಾಗದಲ್ಲಿ ಭಾರತದ ʼಶೇಪ್‌ ಆಫ್‌ ಮೋಮೋʼ ಮತ್ತು ಜಪಾನ್‌ನ ‘ದಿ ಡೀಪೆಸ್ಟ್‌ ಸ್ಪೇಸ್‌ ಇನ್‌ ಯೂಎಸ್‌ʼ ಚಿತ್ರಗಳು ದ್ವಿತೀಯ ಮತ್ತು ತೃತೀಯ ಚಿತ್ರ ಪ್ರಶಸ್ತಿಗೆ ಭಾಜನವಾದವು. ಫಿಲಿಪ್ಪೀನ್ಸ್‌ನ ‘ರಿಪಬ್ಲಿಕ್‌ ಆಫ್‌ ಪಿಪೊಲಿಪಿನಾಸ್‌ʼ ಚಿತ್ರವು ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಪಡೆಯಿತು.

ಭಾರತೀಯ (ಚಿತ್ರಭಾರತಿ) ವಿಭಾಗದಲ್ಲಿ ಮಲಯಾಳಂನ ‘ಮೋಹಂʼ ಮತ್ತು ‘ಕಾಡುʼ ಚಿತ್ರಗಳು ಕ್ರಮವಾಗಿ ‘ದ್ವಿತೀಯ ಮತ್ತು ತೃತೀಯ’ ಪ್ರಶಸ್ತಿಗಳನ್ನು ಗೆದ್ದಿವೆ. ಮರಾಠಿ ಭಾಷೆಯ ‘ಗೊಂದಾಳ್‌ʼ ಚಿತ್ರವು ಫಿಪ್ರೆಸ್ಕಿ ಪ್ರಶಸ್ತಿ ಪಡೆದರೆ, ಮಲಯಾಳಂ ಭಾಷೆಯ ʼಸರ್ಕೀಟ್‌ʼ ಚಿತ್ರವು ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಪಡೆದಿದೆ.

ಕನ್ನಡ ಸ್ಪರ್ಧಾ ವಿಭಾಗದಲ್ಲಿ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರಗಳಾಗಿ ‘ನಮ್‌ ಸಾಲಿʼ ಮತ್ತು ‘ರಾವಣ ರಾಜ್ಯದಲ್ಲಿ ನವದಂಪತಿಗಳುʼ ಆಯ್ಕೆಯಾದರೆ, ‘ಹಕ್ಕಿಗಾಗಿʼ ಚಿತ್ರಕ್ಕಾಗಿ ನೆಟ್‌ಪ್ಯಾಕ್‌ ತೀರ್ಪುಗಾರರ ಪ್ರಶಸ್ತಿ ಸಿಕ್ಕಿದೆ. ‘ಮೃಗತೃಷ್ಣʼ ಮತ್ತು ‘ಫೋರ್‌ ಬೈ ಫೋರ್‌ʼ ಚಿತ್ರಗಳು ತೀರ್ಪುಗಾರರ ವಿಶೇಷ ಮನ್ನಣೆಗೆ ಭಾಜನವಾಗಿವೆ.

ಅತ್ಯುತ್ತಮ ಚಿತ್ರ ಪ್ರಶಸ್ತಿ ವಿಜೇತರಿಗೆ ಪಾರಿತೋಷಕದ ಜೊತೆಗೆ ₹10 ಲಕ್ಷ ನಗದು ಬಹುಮಾನ ನೀಡಲಾಯಿತು. ದ್ವಿತೀಯ ಮತ್ತು ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಗೆದ್ದವರಿಗೆ ತಲಾ ₹5 ಲಕ್ಷ ಮತ್ತು ₹2 ಲಕ್ಷ ನೀಡಿ ಗೌರವಿಸಲಾಯಿತು.

ಇದೇ ವೇಳೆ ಸಂಗೀತ ನಿರ್ದೇಶಕ, ಗೀತ ಸಾಹಿತಿ ಹಂಸಲೇಖ ಅವರಿಗೆ 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ಒಬ್ಬನಿಂದ ಸಿನಿಮಾವಲ್ಲ, ಇದೊಂದು ಸಾಮೂಹಿಕ ಕೃಷಿ. ‘ಕಾಂತಾರ’, ‘ಕೆಜಿಎಫ್‌’ನಂಥ ಚಿತ್ರಗಳು ಉತ್ತರದವರು ದಕ್ಷಿಣದತ್ತ ತಿರುಗಿ ನೋಡುವಂತೆ ಮಾಡಿವೆ. ಜತೆಗೆ ಪ್ರಜಾಪ್ರಭುತ್ವ ರಕ್ಷಿಸುವ ಸಿನಿಮಾಗಳು ಬರಬೇಕು’ ಎಂದು ಹಂಸಲೇಖ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.